ADVERTISEMENT

ಸ್ಯಾಫ್‌ ಟೂರ್ನಿಗೆ ಬೆಂಗಳೂರು ಆತಿಥ್ಯ

ಫುಟ್‌ಬಾಲ್‌: ಜೂನ್ 21 ರಿಂದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 19:24 IST
Last Updated 19 ಮಾರ್ಚ್ 2023, 19:24 IST
ಕಲ್ಯಾಣ್‌ ಚೌಬೆ
ಕಲ್ಯಾಣ್‌ ಚೌಬೆ   

ಬೆಂಗಳೂರು: ಈ ಬಾರಿಯ ಸ್ಯಾಫ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ಗೆ ಬೆಂಗಳೂರು ಆತಿಥ್ಯ ವಹಿಸಲಿದ್ದು, ಜೂನ್‌ 21 ರಿಂದ ಜುಲೈ 3ರ ವರೆಗೆ ಪಂದ್ಯಗಳು ಆಯೋಜನೆಯಾಗಿವೆ.

ಸೌತ್ ಏಷ್ಯನ್‌ ಫುಟ್‌ಬಾಲ್‌ ಫೆಡರೇಷನ್‌ (ಸ್ಯಾಫ್‌), ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್ಎಫ್‌) ಮತ್ತು ಕರ್ನಾಟಕ ರಾಜ್ಯ ಫುಟ್‌ಬಾಲ್‌ ಸಂಸ್ಥೆಯ (ಕೆಎಸ್‌ಎಫ್‌ಎ) ಜಂಟಿ ಅತಿಥ್ಯದಲ್ಲಿ ಟೂರ್ನಿ ನಡೆಯಲಿದೆ.

ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ಎಐಎಫ್ಎಫ್‌ ಅಧ್ಯಕ್ಷ ಕಲ್ಯಾಣ್ ಚೌಬೆ, ‘ಭಾರತವು ಈ ಟೂರ್ನಿಗೆ ನಾಲ್ಕನೇ ಬಾರಿ ಆತಿಥ್ಯ ವಹಿಸುತ್ತಿದ್ದು, ಸ್ಯಾಫ್‌ನ ಎಲ್ಲ ಸದಸ್ಯ ರಾಷ್ಟ್ರಗಳ ತಂಡಗಳು ಪಾಲ್ಗೊಳ್ಳಲಿವೆ’ ಎಂದರು.

ADVERTISEMENT

ಹೊರಗಿನ ತಂಡಕ್ಕೆ ಅವಕಾಶ: ‘ಟೂರ್ನಿಗೆ ಹೊಸತನ ತರುವ ಉದ್ದೇಶದಿಂದ ಈ ಬಾರಿ ಸ್ಯಾಫ್‌ಯೇತರ ರಾಷ್ಟ್ರದ ತಂಡವೊಂದಕ್ಕೆ ಅವಕಾಶ ನೀಡಲು ಚಿಂತಿಸಲಾಗಿದೆ. ಮೇ ತಿಂಗಳಲ್ಲಿ ಟೂರ್ನಿಯ ವೇಳಾಪಟ್ಟಿ ಸಿದ್ಧಪಡಿಸುವಾಗ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಫಿಫಾ ರ್‍ಯಾಂಕಿಂಗ್‌ನಲ್ಲಿ ಭಾರತಕ್ಕಿಂತ ಮೇಲಿನ ಸ್ಥಾನದಲ್ಲಿರುವ ತಂಡವನ್ನು ಆಹ್ವಾನಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಪಾಕಿಸ್ತಾನ ತಂಡ ಪಾಲ್ಗೊಳ್ಳಲಿದೆಯೇ ಎಂಬ ಪ್ರಶ್ನೆಗೆ, ‘ಸ್ಯಾಫ್‌ನ ಎಲ್ಲ ಸದಸ್ಯ ರಾಷ್ಟ್ರಗಳನ್ನು ನಾವು ಸ್ವಾಗತಿಸುತ್ತೇವೆ. ಪಾಕ್‌ ತಂಡದ ಭೇಟಿಯ ಬಗ್ಗೆ ವಿದೇಶಾಂಗ ವ್ಯವಹಾರ ಸಚಿವಾಲಯವು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ’ ಎಂದು ತಿಳಿಸಿದರು.

‌ಕೆಎಸ್‌ಎಫ್‌ಎ ಅಧ್ಯಕ್ಷ ಎನ್‌.ಎ.ಹ್ಯಾರಿಸ್‌ ಮಾತನಾಡಿ, ‘ಸ್ಯಾಫ್‌ ಟೂರ್ನಿಯ ಆತಿಥ್ಯ ಲಭಿಸಿರುವುದು ಕರ್ನಾಟಕದ ಫುಟ್‌ಬಾಲ್‌ಗೆ ಹೆಮ್ಮೆಯ ಸಂಗತಿ. ರಾಜ್ಯ ತಂಡ ಈಚೆಗೆ ಸಂತೋಷ್‌ ಟ್ರೋಫಿ ಜಯಿಸಿ ಅಮೋಘ ಸಾಧನೆ ಮಾಡಿದೆ. ಕರ್ನಾಟಕದಲ್ಲಿ ಫುಟ್‌ಬಾಲ್‌ನ ಬೆಳವಣಿಗೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ಕರ್ನಾಟಕ ಒಲಿಂಪಿಕ್‌ ಸಂಸ್ಥೆ ಅಧ್ಯಕ್ಷ ಮತ್ತು ಕೆಎಸ್‌ಎಫ್‌ಎ ಉಪಾಧ್ಯಕ್ಷರೂ ಆಗಿರುವ ಕೆ.ಗೋವಿಂದರಾಜ್‌ ಮಾತನಾಡಿ, ‘ಈ ಟೂರ್ನಿಯ ಆಯೋಜನೆಗೆ ರಾಜ್ಯ ಸರ್ಕಾರದಿಂದ ಅಗತ್ಯವಿರುವ ಎಲ್ಲ ನೆರವು ಒದಗಿಸಿಕೊಡಲಾಗುವುದು’ ಎಂದರು.

ಎಐಎಫ್ಎಫ್‌ ಕಾರ್ಯದರ್ಶಿ ಶಾಜಿ ಪ್ರಭಾಕರನ್‌ ಸುದ್ದಿಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.