
ಬೆಂಗಳೂರು ಮಿಡ್‌ನೈಟ್ ಮ್ಯಾರಥಾನ್ 2025ರ ಜರ್ಸಿಯನ್ನು ಭಾರತೀಯ ಸೇನೆಯ ಕರ್ನಾಟಕ ಮತ್ತು ಕೇರಳ ಉಪಪ್ರದೇಶದ ಜನರಲ್ ಆಫೀಸರ್ ಕಮಾಂಡಿಂಗ್ ಮೇಜರ್ ಜನರಲ್ ವಿ.ಟಿ. ಮ್ಯಾಥ್ಯೂ (ಎಡದಿಂದ ಮೂರನೆಯವರು) ಅನಾವರಣ ಮಾಡಿದರು.
ಬೆಂಗಳೂರು: ರೋಟರಿ ಬೆಂಗಳೂರು ಐಟಿ ಕಾರಿಡಾರ್ (ಆರ್‌ಬಿಐಟಿಸಿ) ಆಶ್ರಯದಲ್ಲಿ 18ನೇ ಆವೃತ್ತಿಯ ‘ಬೆಂಗಳೂರು ಮಿಡ್‌ನೈಟ್ ಮ್ಯಾರಥಾನ್’ ಡಿಸೆಂಬರ್ 6ರಂದು ವೈಟ್‌ಫೀಲ್ಟ್ ಕೆಟಿಪಿಓನಲ್ಲಿ ನಡೆಯಲಿದೆ.
‘ಮನಾ ಗ್ರೂಪ್ ಪ್ರಾಯೋಜಕತ್ವದಲ್ಲಿ ನಡೆಯುವ ಈ ಓಟದಲ್ಲಿ 12 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಸಶಸ್ತ್ರ ಪಡೆಗಳ ಸಿಬ್ಬಂದಿ, ಅಥ್ಲೀಟ್‌ಗಳು, ಕಾರ್ಪೊರೇಟ್ ಕಂಪನಿ ಉದ್ಯೋಗಿಗಳು, ಎನ್‌ಜಿಓ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ’ ಎಂದು ಆರ್‌ಬಿಐಟಿಸಿ ಅಧ್ಯಕ್ಷ ಶ್ರೀರಂಗ್ ತಾಂಬೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘2007ರಿಂದ ಈತನಕದ 17 ಆವೃತ್ತಿಗಳಲ್ಲಿ ₹35 ಕೋಟಿಗೂ ಹೆಚ್ಚು ನಿಧಿಯನ್ನು ಸಾಮಾಜಿಕ ಉದ್ದೇಶಗಳಿಗೆ ಸಂಗ್ರಹಿಸಲಾಗಿದೆ. ಹಿಂದಿನ ಆವೃತ್ತಿಗಳಿಗಿಂತ ಈ ಬಾರಿ ಶೇ 30ರಷ್ಟು ನೋಂದಣಿ ಹೆಚ್ಚಾಗಿದೆ. ಈ ವರ್ಷದ ಮ್ಯಾರಥಾನ್ ಅನ್ನು ಭಾರತೀಯ ಸಶಸ್ತ್ರ ಪಡೆಗಳಿಗೆ ಸಮರ್ಪಿಸಲು ನಿರ್ಧರಿಸಲಾಗಿದೆ’ ಎಂದು ಅವರು ತಿಳಿಸಿದರು.
‘ಬೆಂಗಳೂರು ಮಿಡ್‌ನೈಟ್ ಮ್ಯಾರಥಾನ್ ಕೇವಲ ಒಂದು ಓಟವಲ್ಲ; ಇದು ಪರಿಶ್ರಮ ಮತ್ತು ಸಾಮೂಹಿಕ ಶಕ್ತಿಯ ಆಚರಣೆ. ಮನಾ ಗ್ರೂಪ್‌ನ ತೊಡಗಿಸಿಕೊಳ್ಳುವಿಕೆಯು ಕ್ಷೇಮ, ಕೃತಜ್ಞತೆ ಮತ್ತು ಸಮಗ್ರತೆಗೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತವೆ’ ಎಂದು ಮನಾ ಪ್ರಾಜೆಕ್ಟ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಿ.ಕಿಶೋರ್ ರೆಡ್ಡಿ ಹೇಳಿದರು.
ಮ್ಯಾರಥಾನ್, ಹ್ಯಾಫ್ ಮ್ಯಾರಥಾನ್, ಟೆನ್ ಕೆ, ಫೈವ್ ಕೆ ಸೇರಿದಂತೆ ಆರು ವಿಭಾಗಗಳಲ್ಲಿ ಓಟ ನಡೆಯುತ್ತದೆ. ಆಸಕ್ತರು ನೋಂದಣಿಗೆ ಈ ವೆಬ್‌ಸೈಟ್ ಸಂಪರ್ಕಿಸಬಹುದು: www.midnightmarathon.inEvent Highlights.