ADVERTISEMENT

ಬ್ಯಾಡ್ಮಿಂಟನ್ ಏಷ್ಯಾ ಟೀಮ್ ಚಾಂಪಿಯನ್‌ಷಿಪ್‌ ಎಂಟರ ಘಟ್ಟದಲ್ಲಿ ಭಾರತ ತಂಡ ನಿರ್ಗಮನ

ಬ್ಯಾಡ್ಮಿಂಟನ್ ಏಷ್ಯಾ ಟೀಮ್ ಚಾಂಪಿಯನ್‌ಷಿಪ್‌

ಪಿಟಿಐ
Published 6 ಫೆಬ್ರುವರಿ 2026, 16:22 IST
Last Updated 6 ಫೆಬ್ರುವರಿ 2026, 16:22 IST
ಬ್ಯಾಡ್ಮಿಂಟನ್
ಬ್ಯಾಡ್ಮಿಂಟನ್   

ಕ್ವಿಂಗ್ದಾವೊ (ಚೀನಾ): ಬ್ಯಾಡ್ಮಿಂಟನ್ ಏಷ್ಯಾ ಟೀಮ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವ ಭಾರತ ಮಹಿಳಾ ತಂಡದ ಅಭಿಯಾನ ಕ್ವಾರ್ಟರ್‌ಫೈನಲ್‌ನಲ್ಲೇ ಅಂತ್ಯಗೊಂಡಿತು. ಎರಡನೇ ಹಂತದ ಆಟಗಾರ್ತಿಯರಿದ್ದ ಚೀನಾ ತಂಡ ಶುಕ್ರವಾರ 3–0 ರಿಂದ ಭಾರತ ತಂಡಕ್ಕೆ ಸೋಲುಣಿಸಿ ಸೆಮಿಫೈನಲ್‌ಗೆ ಮುನ್ನಡೆಯಿತು.

ಪುರುಷರ ತಂಡವೂ ಎಂಟರ ಘಟ್ಟದಲ್ಲೇ ಹೊರಬಿದ್ದಿತು. ದಕ್ಷಿಣ ಕೊರಿಯಾ 3–1 ರಿಂದ ಜಯಗಳಿಸಿ ಸೆಮಿಫೈನಲ್ ತಲುಪಿತು.

2024ರ ಚಾಂಪಿಯನ್‌ಷಿಪ್‌ನಲ್ಲಿ ಐತಿಹಾಸಿ ಚಿನ್ನದ ಪದಕ ಗೆದ್ದ ಭಾರತ ವನಿತೆಯರು, ಗುಂಪಿನಲ್ಲಿ ಎರಡನೇ ತಂಡವಾಗಿ ಕ್ವಾರ್ಟರ್‌ಫೈನಲ್ ತಲುಪಿದ್ದರು. 17 ವರ್ಷ ವಯಸ್ಸಿನ ಪ್ರತಿಭಾನ್ವಿತೆ ತನ್ವಿ ಶರ್ಮಾ ಮೊದಲ ಸಿಂಗಲ್ಸ್‌ನಲ್ಲಿ 9–21, 9–21 ರಿಂದ ವಿಶ್ವದ ಹತ್ತನೇ ಕ್ರಮಾಂಕದ ಆಟಗಾರ್ತಿ ಗಾವೊ ಫಾಂಗ್ ಜೀ ಅವರಿಗೆ ಮಣಿದರು. 

ಗಾಯತ್ರಿ ಗೋಪಿಚಂದ್‌– ಟ್ರೀಸಾ ಜೋಳಿ ಜೋಡಿ ಹೋರಾಟ ಪ್ರದರ್ಶಿಸಿದರೂ, ಅಂತಿಮವಾಗಿ 22–24, 18–21 ರಿಂದ ನಾಲ್ಕನೇ ಕ್ರಮಾಂಕದ ಜಿಯಾ ಯಿ ಫಾನ್‌– ಝಾಂಗ್‌ ಶು ಷಿಯಾನ್ ಎದುರು ಹಿಮ್ಮೆಟ್ಟಿತು. ಭಾರತಕ್ಕೆ ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ರಕ್ಷಿತಾ ರಾಮರಾಜ್ 14–21, 21–15, 17–21 ರಲ್ಲಿ ಸೋತರು.

ಕೊರಿಯಾಕ್ಕೆ ಜಯ

ಲಕ್ಷ್ಯ ಸೇನ್ ಮತ್ತು ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಅವರಿಲ್ಲದೇ ಆಡಿದ ಭಾರತ ಪುರುಷರ ತಂಡ ಮಧ್ಯಾಹ್ನ 1–3 ರಿಂದ ದಕ್ಷಿಣ ಕೊರಿಯಾ ಎದುರು ಸೋಲನುಭವಿಸಿತು. ಲಕ್ಷ್ಯ ಬೆನ್ನುನೋವಿನ ಕಾರಣ ಆಡಲಿಲ್ಲ. ರಣಕಿರೆಡ್ಡಿ ಅವರು ವೈಯಕ್ತಿಕ ಕಾರಣದಿಂದ ತವರಿಗೆ ಮರಳಿದರು.

ಲಕ್ಷ್ಯ ಬದಲು ಕಣಕ್ಕಿಳಿದ ಕರ್ನಾಟಕದ 20 ವರ್ಷ ವಯಸ್ಸಿನ ಆಟಗಾರ ಆಯುಷ್ ಶೆಟ್ಟಿ ಮೊದಲ ಸಿಂಗಲ್ಸ್‌ನಲ್ಲಿ ಯೂ ತೇ ಬಿನ್ ಅವರಿಗೆ 21–18, 14–21, 26–24 ರಲ್ಲಿ ಮಣಿದರು. ಚಿರಾಗ್‌ ಅವರು ಹರಿಹರನ್ ಅಮ್ಸಕರುಣನ್ ಜೊತೆಗೂಡಿ ಡಬಲ್ಸ್‌ನಲ್ಲಿ ಆಡಿದರು. ಆದರೆ 11–21, 13–21ರಲ್ಲಿ ಸಾಂಗ್ ಹ್ಯುಮ್ ಚೊ– ಕಿಮ್‌ ವೊನ್ ಹೊ ಜೋಡಿಗೆ ಮಣಿದರು.

ಕಿದಂಬಿ ಶ್ರೀಕಾಂತ್ 21–15, 21–16ರಲ್ಲಿ ಚೊಯ್ ಜಿ ಹೂನ್ ಅವರನ್ನು ಸೋಲಿಸಿದ್ದರಿಂದ ಪಂದ್ಯ ಜೀವಪಡೆಯಿತು. ಆದರೆ ನಂತರದ ಡಬಲ್ಸ್‌ನಲ್ಲಿ ಪೃಥ್ವಿ ಕೃಷ್ಣನ್– ಕೆ.ಸಾಯಿ ಪ್ರತೀಕ್ 11–21, 16–21 ರಲ್ಲಿ ಜಿನ್ ಯಾಂಗ್– ಕಿ ಡಾಂಗ್ ಜು ಅವರಿಗೆ ಮಣಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.