ADVERTISEMENT

‍ಪಿಬಿಎಲ್‌: ದಾಖಲೆ ಬರೆದ ಬೆಂಗಳೂರು

ಸಾಯಿ ಪ್ರಣೀತ್‌, ತಾಯ್‌ ಜೂ ಯಿಂಗ್ ಅಮೋಘ ಆಟ

ಪಿಟಿಐ
Published 9 ಫೆಬ್ರುವರಿ 2020, 19:47 IST
Last Updated 9 ಫೆಬ್ರುವರಿ 2020, 19:47 IST
ಪ್ರಶಸ್ತಿ ಗೆದ್ದ ಬೆಂಗಳೂರು ರ‍್ಯಾಪ್ಟರ್ಸ್ ತಂಡದ ಆಟಗಾರರ ಸಂಭ್ರಮ –ಎಎಫ್‌ಪಿ ಚಿತ್ರ
ಪ್ರಶಸ್ತಿ ಗೆದ್ದ ಬೆಂಗಳೂರು ರ‍್ಯಾಪ್ಟರ್ಸ್ ತಂಡದ ಆಟಗಾರರ ಸಂಭ್ರಮ –ಎಎಫ್‌ಪಿ ಚಿತ್ರ   

ಹೈದರಾಬಾದ್: ಬೆಂಗಳೂರು ರ‍್ಯಾಪ್ಟರ್ಸ್ ತಂಡ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನಲ್ಲಿ ಭಾನುವಾರ ರಾತ್ರಿ ದಾಖಲೆ ಬರೆಯಿತು. ಫೈನಲ್ ಹಣಾಹಣಿಯಲ್ಲಿ ನಾರ್ತ್ ಈಸ್ಟರ್ನ್ ವಾರಿಯರ್ಸ್ ತಂಡವನ್ನು 4–2ರಲ್ಲಿ ಮಣಿಸಿದ ರ‍್ಯಾಪ್ಟರ್ಸ್ ಲೀಗ್‌ನಲ್ಲಿ ಸತತ ಎರಡು ವರ್ಷ ಪ್ರಶಸ್ತಿ ಗೆದ್ದ ಮೊದಲ ತಂಡ ಎನಿಸಿಕೊಂಡಿತು.

ವಿಶ್ವ ಚಾಂಪಿಯನ್‌ಷಿಪ್‌ನ ಬೆಳ್ಳಿ ಪದಕ ವಿಜೇತ ಬಿ.ಸಾಯಿ ಪ್ರಣೀತ್ ಮತ್ತು ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ತಾಯ್ ಜೂ ಯಿಂಗ್ ಅವರ ಅಮೋಘ ಆಟ ಬೆಂಗಳೂರು ತಂಡಕ್ಕೆ ಪ್ರಶಸ್ತಿ ತಂದುಕೊಟ್ಟಿತು.

ಮೊದಲ ಬಾರಿ ಫೈನಲ್‌ಗೆ ಪ್ರವೇಶಿಸಿದ್ದ ನಾರ್ತ್ ಈಸ್ಟರ್ನ್ ತಂಡ ಮೊದಲ ಮೂರು ಪಂದ್ಯಗಳಲ್ಲಿ ಉತ್ತಮ ಪೈಪೋಟಿ ನೀಡಿತು. ಹೀಗಾಗಿ ಒಟ್ಟಾರೆ 2–2ರ ಸಮಬಲ ಸಾಧಿಸಲು ಆ ತಂಡಕ್ಕೆ ಸಾಧ್ಯವಾಯಿತು.

ADVERTISEMENT

ಬೆಂಗಳೂರಿನ ಚಾಂಗ್ ಪೆಂಗ್ ಸೂನ್ ಮತ್ತು ಯೋಮ್ ಹೆನ್ ವೋನ್ ಜೋಡಿ 15–14, 14–15, 15–12ರಲ್ಲಿ ವಾರಿಯರ್ಸ್‌ನ ಕೃಷ್ಣ ಪ್ರಸಾದ್ ಗರಗ್ ಮತ್ತು ಕಿಮ್ ಹಾ ನಾ ವಿರುದ್ಧ ಡಬಲ್ಸ್‌ನಲ್ಲಿ ಗೆಲುವು ಸಾಧಿಸಿದರು.

ಸಾಯಿ ಪ್ರಣೀತ್ ವಿಶ್ವ ಕ್ರಮಾಂಕದಲ್ಲಿ 18ನೇ ಸ್ಥಾನದಲ್ಲಿರುವ ಲೀ ಚೂಕ್ ಯೂ ಎದುರು 14–15, 15–9, 15–3ರಲ್ಲಿ ಗೆಲುವು ಸಾಧಿಸಿದರು. ತಾಯ್ ಸೂ ಅವರು ಮೈಕೆಲಿ ಲೀ ಎದುರು 15–9, 15–12ರಲ್ಲಿ ಜಯ ಗಳಿಸಿದರು.

ಇದಕ್ಕೂ ಮೊದಲು ವಾರಿಯರ್ಸ್‌ನ ಲೀ ಯಾಂಗ್ ಡೇ ಮತ್ತು ಬೋದಿನ್ ಇಸಾರ ಜೋಡಿ ಬೆಂಗಳೂರು ತಂಡದ ಅರುಣ್ ಜಾರ್ಜ್‌ ಮತ್ತು ರಿಯಾನ್ ಸಾಪುತ್ರೊ ಅವರನ್ನು 15–11, 13–15, 15–14ರಲ್ಲಿ ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.