ADVERTISEMENT

ಬೆಂಗಳೂರು ಮಿಡ್‌ನೈಟ್ ಮ್ಯಾರಥಾನ್: ನರೇಶ್, ಬರ್ಮನ್‌ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 19:38 IST
Last Updated 7 ಡಿಸೆಂಬರ್ 2025, 19:38 IST
ಮಹಿಳೆಯರ ವಿಭಾಗದ ಮ್ಯಾರಥಾನ್‌ ಸ್ಪರ್ಧೆಯ ಪದಕ ವಿಜೇತರು (ಎಡದಿಂದ). ಕೃಷ್ಣ ಕೊಹ್ಲಿ (ಬೆಳ್ಳಿ), ಬಿಜೋಯ ಬರ್ಮನ್ (ಚಿನ್ನ), ಸ್ವಪ್ನಾ ಅಗರವಾಲ್‌ (ಕಂಚು)
ಮಹಿಳೆಯರ ವಿಭಾಗದ ಮ್ಯಾರಥಾನ್‌ ಸ್ಪರ್ಧೆಯ ಪದಕ ವಿಜೇತರು (ಎಡದಿಂದ). ಕೃಷ್ಣ ಕೊಹ್ಲಿ (ಬೆಳ್ಳಿ), ಬಿಜೋಯ ಬರ್ಮನ್ (ಚಿನ್ನ), ಸ್ವಪ್ನಾ ಅಗರವಾಲ್‌ (ಕಂಚು)   

ಬೆಂಗಳೂರು: ನರೇಶ್ ಥಾಪಾ ಮತ್ತು ಬಿಜೋಯ ಬರ್ಮನ್ ಅವರು ನಗರದಲ್ಲಿ ಶನಿವಾರ ರಾತ್ರಿ ನಡೆದ ಬೆಂಗಳೂರು ಮಿಡ್‌ನೈಟ್ ಮ್ಯಾರಥಾನ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್‌ ಆದರು. 

ರೋಟರಿ ಬೆಂಗಳೂರು ಐಟಿ ಕಾರಿಡಾರ್ ವತಿಯಿಂದ ವೈಟ್‌ಫೀಲ್ಡ್‌ನ ಕೆಟಿಪಿಒ ಆವರಣದಲ್ಲಿ ನಡೆದ 18ನೇ ಆವೃತ್ತಿಯ ಸ್ಪರ್ಧೆಯಲ್ಲಿ ಚಳಿಯನ್ನೂ ಲೆಕ್ಕಿಸದೆ 10 ಸಾವಿರಕ್ಕೂ ಅಧಿಕ ಓಟಗಾರರು ಉತ್ಸಾಹದಿಂದ ಭಾಗವಹಿಸಿದರು. ಮಹದೇವಪುರ ಶಾಸಕಿ ಮಂಜುಳಾ ಲಿಂಬಾವಳಿ ಮತ್ತು ಮೇಜರ್ ಜನರಲ್ ವಿ.ಟಿ. ಮ್ಯಾಥ್ಯೂ ಅವರು ಮ್ಯಾರಥಾನ್‌ಗೆ ಚಾಲನೆ ನೀಡಿದರು.

ಭಾರತೀಯ ನೌಕಾಪಡೆಯ ನರೇಶ್‌ ಥಾಪಾ ಅವರು 42.195 ಕಿಲೋ ಮೀಟರ್‌ ದೂರವನ್ನು 3 ಗಂಟೆ 41 ನಿಮಿಷ 08 ಸೆಕೆಂಡ್‌ಗಳಲ್ಲಿ ತಲುಪಿದರು. ನವೀನ್‌ ಕುಮಾರ್‌ (3:46.14), ಡಕಿನ್ಮಾವ್ಲಾಂಗ್ ವಾರ್ಜ್ರಿ (3:48.31) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು. 

ADVERTISEMENT

ಮಹಿಳೆಯರ ವಿಭಾಗದಲ್ಲಿ ಬರ್ಮನ್ ಅವರು 3 ಗಂಟೆ 35 ನಿಮಿಷ 34 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಕೃಷ್ಣ ಕೊಹ್ಲಿ (4:15.30) ಎರಡನೇ ಸ್ಥಾನ ಗಳಿಸಿದರು. ಸ್ವಪ್ನಾ ಅಗರವಾಲ್‌ (4:26.01) ಮೂರನೇ ಸ್ಥಾನ ‍ಪಡೆದರು.

ಈ ಬಾರಿಯ ಮ್ಯಾರಥಾನ್ ಅನ್ನು ಭಾರತೀಯ ಸಶಸ್ತ್ರ ಪಡೆಗಳಿಗೆ ಅರ್ಪಿಸಲಾಗಿತ್ತು. 900ಕ್ಕೂ ಹೆಚ್ಚು ಯೋಧರು ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರದ ನೂರಾರು ಅಥ್ಲೀಟ್‌ಗಳು ಭಾಗವಹಿಸಿದ್ದರು.

ಮ್ಯಾರಥಾನ್ ಮೂಲಕ ಸಂಗ್ರಹವಾದ ಹಣವನ್ನು ರೋಟರಿ ಸಂಸ್ಥೆಯು ಪರಿಸರ, ಆರೋಗ್ಯ ಮತ್ತು ಸಮುದಾಯ ಸೇವೆಗಳಿಗೆ ಬಳಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ಫಲಿತಾಂಶ (ವಿಜೇತರು): ಮ್ಯಾರಥಾನ್‌: ಪುರುಷರು: ನರೇಶ್ ಥಾಪಾ (ಕಾಲ: 3 ಗಂಟೆ 41 ನಿಮಿಷ 08 ಸೆಕೆಂಡ್‌); ಮಹಿಳೆಯರು: ಬಿಜೋಯ‌ ಬರ್ಮನ್ (ಕಾಲ:3:35.34). 31.6 ಕಿ.ಮೀ: ಪುರುಷರು: ಪರಾಜಿ ಗಾಯಕವಾಡ್ (ಕಾಲ:1:48.49)‌; ಮಹಿಳೆಯರು: ದೇವಾಂಗಿ ಪುರ್ಕಾಯಸ್ಥ (ಕಾಲ: 2:23:43). ಹಾಫ್‌ ಮ್ಯಾರಥಾನ್‌: ಪುರುಷರು: ಶಿವಂ ಸಿಂಗ್ ತೋಮರ್ (1:06.33); ಮಹಿಳೆಯರು: ‌ನೀತು ಕುಮಾರಿ (1:23:03). 10ಕೆ ರನ್‌: ಪುರುಷರು: ಸುನಿಲ್ ಜೋಲಿಯಾ; ಮಹಿಳೆಯರು: ಆರಾಧನಾ ಕುಮಾರಿ. 

ಬೆಂಗಳೂರು ಮಿಡ್‌ನೈಟ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಓಟಗಾರರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.