ADVERTISEMENT

ವಿಶ್ವ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಪ್ರಮೋದ್‌, ಮನೀಶಾಗೆ ಚಿನ್ನ

ಪಿಟಿಐ
Published 6 ನವೆಂಬರ್ 2022, 13:44 IST
Last Updated 6 ನವೆಂಬರ್ 2022, 13:44 IST
ಪದಕಗಳೊಂದಿಗೆ ಪ್ರಮೋದ್ ಭಗತ್‌– ಪಿಟಿಐ ಚಿತ್ರ
ಪದಕಗಳೊಂದಿಗೆ ಪ್ರಮೋದ್ ಭಗತ್‌– ಪಿಟಿಐ ಚಿತ್ರ   

ಟೋಕಿಯೊ: ಪ್ಯಾರಾಲಿಂಪಿಕ್ ಚಾಂಪಿಯನ್‌, ಭಾರತದ ಪ್ರಮೋದ್ ಭಗತ್ ಮತ್ತು ಮನೀಷಾ ರಾಮದಾಸ್ ಅವರು ಬಿಡಬ್ಲ್ಯುಎಫ್‌ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದಾರೆ. ಭಾರತದ ಪಟುಗಳು ಒಟ್ಟು 16 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇಲ್ಲಿ ನಡೆದ ಚಾಂಪಿಯನ್‌ಷಿಪ್‌ನ ಪುರುಷರ ಸಿಂಗಲ್ಸ್‌ ಎಸ್‌ಎಲ್‌3 ವಿಭಾಗದಲ್ಲಿ ಪ್ರಮೋದ್‌ ಪ್ರಶಸ್ತಿ ಉಳಿಸಿಕೊಂಡರು. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಅವರು21-19, 21-19ರಿಂದ ಭಾರತದವರೇ ಆದ ನಿತೀಶ್ ಕುಮಾರ್ ಅವರಿಗೆ ಸೋಲುಣಿಸಿದರು.

ಮಹಿಳಾ ಸಿಂಗಲ್ಸ್‌ನ ಎಸ್‌ಯು5 ವಿಭಾಗದಲ್ಲಿ ಕಣಕ್ಕಿಳಿದಿದ್ದ ಮನೀಷಾ21-15, 21-15ರಿಂದ ಮಾಮಿಕೊ ತೊಯೊಡಾ ಅವರನ್ನು ಪರಾಭವಗೊಳಿಸಿದರು. ಈ ವರ್ಷದ ಮಾರ್ಚ್‌ನಲ್ಲಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್‌ಗೆ ಪದಾರ್ಪಣೆ ಮಾಡಿದ್ದ 17 ವರ್ಷದ ಮನೀಷಾ ಅವರಿಗೆ ಇದು ಸ್ಮರಣೀಯ ಚಾಂಪಿಯನ್‌ಷಿಪ್ ಎನಿಸಿತು.

ADVERTISEMENT

ಈ ಜಯದೊಂದಿಗೆ ಪ್ರಮೋದ್‌ ಅವರು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಗೆದ್ದ ಒಟ್ಟು ಪದಕಗಳ ಸಂಖ್ಯೆ 11ಕ್ಕೇರಿತು. ಅದರಲ್ಲಿ ಆರು ಚಿನ್ನ, ಎರಡು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳಿವೆ.

‘ಮತ್ತೊಮ್ಮೆ ವಿಶ್ವ ಚಾಂಪಿಯನ್ ಆಗಿದ್ದು ಸಂತಸದ ಸಂಗತಿ. ಮಹತ್ವದ ಮೈಲುಗಲ್ಲಿನೊಂದಿಗೆ ವರ್ಷಾಂತ್ಯವಾಗಿದ್ದು ಹೆಮ್ಮೆ ಎನಿಸಿದೆ. ಈ ಗೆಲುವಿಗಾಗಿ ಬಹಳ ಪರಿಶ್ರಮಪಟ್ಟಿದ್ದೆ‘ ಎಂದು ಪ್ರಮೋದ್ ಹೇಳಿದ್ದಾರೆ.

ಪುರುಷರ ಡಬಲ್ಸ್‌ನ ಎಸ್‌ಎಲ್3–ಎಸ್‌ಎಲ್‌4 ವಿಭಾಗದಲ್ಲಿ ಪ್ರಮೋದ್‌ ಭಗತ್ ಮತ್ತು ಮನೋಜ್ ಸರ್ಕಾರ್ ಜೋಡಿಯು ಬೆಳ್ಳಿ ಪದಕ ಗೆದ್ದುಕೊಂಡಿತು. ಫೈನಲ್‌ನಲ್ಲಿ ಮೊದಲ ಗೇಮ್‌ ಜಯದ ನಡುವೆಯೂ ಭಾರತದ ಆಟಗಾರರು21-14, 18-21, 13-21ರಿಂದ ಇಂಡೊನೇಷ್ಯಾದ ಹಿಕಾಮತ್‌ ರಾಮ್‌ದಾನಿ ಮತ್ತು ಉಕುನ್‌ ರುಕಾಂಡಿ ಎದುರು ಸೋಲನುಭವಿಸಿದರು.

2019ರ ಬಾಸೆಲ್‌ ವಿಶ್ವ ಚಾಂಪಿಯನ್‌ ಮಾನಸಿ ಜೋಷಿ ಮತ್ತು ನಿತ್ಯಶ್ರೀ ಕಂಚಿನ ಪದಕಗಳನ್ನು ಗೆದ್ದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.