ADVERTISEMENT

ಬೀಲ್‌ ಚೆಸ್‌ ಉತ್ಸವ: ಹರಿಕೃಷ್ಣಗೆ ಜಯ

ಪಿಟಿಐ
Published 28 ಜುಲೈ 2020, 14:18 IST
Last Updated 28 ಜುಲೈ 2020, 14:18 IST
ಪೆಂಟಾಲ ಹರಿಕೃಷ್ಣ (ಬಲ)–ಪಿಟಿಐ ಸಂಗ್ರಹ ಚಿತ್ರ
ಪೆಂಟಾಲ ಹರಿಕೃಷ್ಣ (ಬಲ)–ಪಿಟಿಐ ಸಂಗ್ರಹ ಚಿತ್ರ   

ಚೆನ್ನೈ: ಭಾರತದ ಗ್ರ್ಯಾಂಡ್‌ಮಾಸ್ಟರ್‌ ಪಿ.ಹರಿಕೃಷ್ಣ ಅವರು ಬೀಲ್‌ ಚೆಸ್‌ ಉತ್ಸವದಲ್ಲಿ ಮತ್ತೊಂದು ಗೆಲುವು ದಾಖಲಿಸಿದ್ದಾರೆ. ಸೋಮವಾರ ಅವರು ಕ್ಲಾಸಿಕಲ್‌ ವಿಭಾಗದ ಐದನೇ ಸುತ್ತಿನಲ್ಲಿ ರಾಡೊಸ್ಲಾವ್‌ ವೊಜಾಸೆಕ್‌ ಅವರನ್ನು ಮಣಿಸಿದರು. ಸ್ವಿಟ್ಜರ್ಲೆಂಡ್‌ನಲ್ಲಿ ಈ ಟೂರ್ನಿ ನಡೆಯುತ್ತಿದೆ.

ಭಾರತದ ಮೂರನೇ ಕ್ರಮಾಂಕದ ಆಟಗಾರ ಹರಿಕೃಷ್ಣ ಈ ಪಂದ್ಯದಲ್ಲಿ ಕಪ್ಪು ಕಾಯಿಗಳೊಂದಿಗೆ ಆಡಿದರು. ಟೂರ್ನಿಯ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಪೋಲೆಂಡ್‌ ಆಟಗಾರನ ವಿರುದ್ಧದ ಜಯದೊಂದಿಗೆ ಹರಿಕೃಷ್ಣ ಅವರ ಬಳಿ ಸದ್ಯ ಒಟ್ಟು 28.5 ಪಾಯಿಂಟ್‌ಗಳಿವೆ.

ಹರಿಕೃಷ್ಣ ಅವರಿಗೆ ಈ ಹಣಾಹಣಿಯಲ್ಲಿ ಗೆಲುವು ತೀರಾ ಅಗತ್ಯವಿತ್ತು. ಏಕೆಂದರೆ ಭಾನುವಾರ ಬ್ಲಿಟ್ಜ್‌ ವಿಭಾಗದಲ್ಲಿ ಅವರು ಕೇವಲ ಆರು ಪಾಯಿಂಟ್ಸ್ ಗಳಿಸಿದ್ದರು.

ADVERTISEMENT

ತಾನಾಡಿದ ಮೊದಲ ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದ ಹರಿಕೃಷ್ಣ, ಬಳಿಕ ಜರ್ಮನಿಯ ಯುವ ಆಟಗಾರ ವಿನ್ಸೆಂಟ್‌ ಕೇಮರ್‌ ಎದುರು ಜಯಿಸಿದ್ದರು.

ಮತ್ತೊಂದು ಪಂದ್ಯದಲ್ಲಿ ಅಜರ್‌ಬೈಜಾನ್‌ನ ಅರ್ಕಾದಿಜ್‌ ನೈದಿಚ್‌ ಅವರು 51 ನಡೆಗಳ ಹಣಾಹಣಿಯಲ್ಲಿ ಫ್ರಾನ್ಸ್‌ನ ರೊಮೇನ್‌ ಎಡ್ವರ್ಡ್‌ ಎದುರು ಡ್ರಾ ಮಾಡಿಕೊಂಡರು.

ಹರಿಕೃಷ್ಣ ಅವರು ಈ ಮೊದಲು ಬೀಲ್‌ ಉತ್ಸವದ ರ‍್ಯಾಪಿಡ್‌ ವಿಭಾಗದಲ್ಲಿ ಎರಡನೇ ಸ್ಥಾನ ಗಳಿಸಿದ್ದರು. ಚೆಸ್‌960 ವಿಭಾಗದಲ್ಲಿ ಪ್ರಶಸ್ತಿ ಒಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.