ನವದೆಹಲಿ (ಪಿಟಿಐ): ಒಲಿಂಪಿಕ್ ಆಂದೋಲನಕ್ಕೆ ನೀಡಿದ ಗಣನೀಯ ಕೊಡುಗೆಗಾಗಿ ಭಾರತದ ಶೂಟಿಂಗ್ ಕ್ಷೇತ್ರದ ದಿಗ್ಗಜ ಅಭಿನವ್ ಬಿಂದ್ರಾ ಅವರು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ‘ಒಲಿಂಪಿಕ್ ಆರ್ಡರ್’ ಗೌರವಕ್ಕೆ ಪಾತ್ರರಾಗಿದ್ದಾರೆ.
ಒಲಿಂಪಿಕ್ಸ್ ಮುಕ್ತಾಯಕ್ಕೆ ಒಂದು ದಿನ ಮೊದಲು, ಆಗಸ್ಟ್ 10ರಂದು ಪ್ಯಾರಿಸ್‌ನಲ್ಲಿ ಐಒಸಿಯ 142ನೇ ಅಧಿವೇಶನ ನಡೆಯಲಿದ್ದು ಅಲ್ಲಿ ಪದಕ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಈ ಸಂಬಂಧ ಐಒಸಿ ಅಧ್ಯಕ್ಷರು ಬಿಂದ್ರಾ ಅವರಿಗೆ ಜುಲೈ 20ರಂದು ಪತ್ರ ಬರೆದಿದ್ದಾರೆ. ‘ಒಲಿಂಪಿಕ್ ಆಂದೋಲನಕ್ಕೆ ನೀವು ನೀಡಿದ ಅಮೋಘ ಕೊಡುಗೆಗಳಿಗಾಗಿ ಐಒಸಿ ಕಾರ್ಯಕಾರಿ ಸಮಿತಿ ಒಲಿಂಪಿಕ್ ಆರ್ಡರ್ ಗೌರವವನ್ನ ನಿಮಗೆ ಪ್ರಧಾನ ಮಾಡಲು ನಿರ್ಧರಿಸಿದೆ ಎಂದು ತಿಳಿಸಲು ಸಂತಸವಾಗುತ್ತಿದೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಒಲಿಂಪಿಕ್ ಆರ್ಡರ್, ಒಲಿಂಪಿಕ್ ಆಂದೋಲನಕ್ಕೆ ನೀಡುವ ಕೊಡುಗೆಗಾಗಿ ಐಒಸಿಯ ಅತ್ಯುನ್ನತ ಗೌರವವಾಗಿದೆ.
ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರು ಬಿಂದ್ರಾ ಅವರನ್ನು ಅಭಿನಂದಿಸಿದ್ದಾರೆ.
41 ವರ್ಷ ವಯಸ್ಸಿನ ಅಭಿನವ್ ಬಿಂದ್ರಾ, ಒಲಿಂಪಿಕ್ಸ್ ವೈಯಕ್ತಿಕ ಸ್ಪರ್ಧೆಗಳಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಕ್ರೀಡಾಪಟು ಎನಿಸಿದ್ದಾರೆ. 2008ರ ಬೀಜಿಂಗ್ ಕ್ರೀಡೆಗಳಲ್ಲಿ ಅವರು ಪುರುಷರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ವಿಜೇತರಾಗಿದ್ದರು. ಅವರು 2010 ರಿಂದ 2020ರವರೆಗೆ ಇಂಟರ್‌ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಷನ್‌ನ ಅಥ್ಲೀಟ್ಸ್ ಸಮಿತಿ ಸದಸ್ಯರಾಗಿದ್ದರು. 2014ರಲ್ಲಿ ಅಧ್ಯಕ್ಷರೆ ವಹಿಸಿದ್ದರು. 2018ರಿಂದ ಅವರು ಐಒಸಿ ಅಥ್ಲೀಟ್ಸ್ ಕಮಿಷನ್ ಸದಸ್ಯರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.