ADVERTISEMENT

ವಿಶೇಷ್‌ ಭೃಗುವಂಶಿ ಜೀವನಚರಿತ್ರೆ ಶೀಘ್ರ ಬಿಡುಗಡೆ

ಭಾರತ ಬ್ಯಾಸ್ಕೆಟ್‌ಬಾಲ್‌ ತಂಡದ ಅತಿ ಕಿರಿಯ ನಾಯಕ

ಪಿಟಿಐ
Published 2 ಆಗಸ್ಟ್ 2020, 14:13 IST
Last Updated 2 ಆಗಸ್ಟ್ 2020, 14:13 IST
ವಿಶೇಷ್‌ ಭೃಗುವಂಶಿ
ವಿಶೇಷ್‌ ಭೃಗುವಂಶಿ   

ನವದೆಹಲಿ: ಭಾರತ ಬ್ಯಾಸ್ಕೆಟ್‌ಬಾಲ್‌ ತಂಡದಅತಿ ಕಿರಿಯ ನಾಯಕ ವಿಶೇಷ್‌ ಭೃಗುವಂಶಿ ಅವರ ಸ್ಫೂರ್ತಿದಾಯಕ ಜೀವನಗಾಥೆ ಕುರಿತ ಹೊಸ ಕೃತಿಯು ರಾಷ್ಟ್ರೀಯ ಕ್ರೀಡಾ ದಿನವಾದ ಆಗಸ್ಟ್‌ 29ರಂದು ಬಿಡುಗಡೆಯಾಗಲಿದೆ. ಪುಸ್ತಕ ಪ್ರಕಟಿಸುತ್ತಿರುವ ಬ್ಲೂರೋಸ್‌ ಸಂಸ್ಥೆ ಈ ವಿಷಯ ತಿಳಿಸಿದೆ.

‘ವಿಶೇಷ್‌: ಕೋಡ್‌ ಟು ವಿನ್‌’ ಶೀರ್ಷಿಕೆಯುಳ್ಳ ಈ ಕೃತಿಯು, ಕ್ರಿಕೆಟ್‌ ಪ್ರಾಬಲ್ಯವುಳ್ಳ ದೇಶವೊಂದರಲ್ಲಿ ಬ್ಯಾಸ್ಕೆಟ್‌ಬಾಲ್‌ ಆಟಗಾರನೊಬ್ಬನ ಮನಸ್ಥಿತಿಯನ್ನು ವಿವರಿಸುತ್ತದೆ. ಎದುರಾಗುವ ಎಲ್ಲ ತಡೆಗಳನ್ನು ದಾಟಿ ಯಶಸ್ವಿಯಾಗುವ ಆಟಗಾರನ ಶ್ರಮದಾಯಕ ಪಯಣದ ಮೇಲೆ ಬೆಳಕು ಚೆಲ್ಲಲಿದೆ. ಕ್ರೀಡಾಪಟು ಹಾಗೂ ಲೇಖಕಿ ನಿರುಪಮಾ ಯಾದವ್‌ ಇದರ ಕರ್ತೃ.

ಉತ್ತರ ಪ್ರದೇಶದ ವಾರಣಾಸಿಯ 29 ವರ್ಷದ ಭೃಗುವಂಶಿ, 2007ರಿಂದ ಭಾರತ ತಂಡದ ಪರ ಆಡುತ್ತಿದ್ದಾರೆ. 2010ರಲ್ಲಿ ಮೊದಲ ಬಾರಿ (21ನೇ ವಯಸ್ಸಿನಲ್ಲಿ) ಅವರು ತಂಡದ ನಾಯಕತ್ವ ವಹಿಸಿದ್ದರು.

ADVERTISEMENT

ಏಷ್ಯನ್‌ ಕ್ರೀಡಾಕೂಟ (2 ಬಾರಿ), ಏಷ್ಯನ್‌ ಚಾಂಪಿಯನ್‌ಷಿಪ್ಸ್‌ (5), ಬೀಚ್‌ ಏಷ್ಯನ್‌ ಕ್ರೀಡಾಕೂಟ (3) ಏಷ್ಯನ್‌ ಒಳಾಂಗಣ ಕ್ರೀಡಾಕೂಟಗಳು (2), ದಕ್ಷಿಣ ಏಷ್ಯನ್‌ ಕ್ರೀಡಾಕೂಟ (2) ಹಾಗೂ ದಕ್ಷಿಣ ಏಷ್ಯನ್‌ ಚಾಂಪಿಯನ್‌ಷಿಪ್‌ಗಳಲ್ಲಿ (7) ಅವರುಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.

2017ರಲ್ಲಿ ಭೃಗುವಂಶಿ ಅವರು ಆಸ್ಟ್ರೇಲಿಯಾದ ನ್ಯಾಷನಲ್‌ ಬ್ಯಾಸ್ಕೆಟ್‌ಬಾಲ್‌ ಲೀಗ್‌ನಲ್ಲಿ (ಎನ್‌ಬಿಎ) ಆಡಲು ಒಪ್ಪಂದ ಮಾಡಿಕೊಂಡಿದ್ದರು. ಇದರೊಂದಿಗೆ ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ‘ಅಡಿಲೇಡ್‌ 36ರ್ಸ್’‌ ತಂಡದ ಪರ ತರಬೇತಿಗೆ ಅವರು ತೆರಳಬೇಕಿತ್ತು. ಆದರೆ ಮೊಣಕಾಲು ನೋವಿನ ಕಾರಣ ತೆರಳಲು ಸಾಧ್ಯವಾಗಿರಲಿಲ್ಲ.

‘ಭಾರತದಲ್ಲಿ ಕ್ರಿಕೆಟ್‌ ಬಹಳಷ್ಟು ಜನಪ್ರಿಯ. ಕ್ರಿಕೆಟ್‌ ತಂಡ ಸೇರಲು ಯುವಕರು ಬಯಸುವುದು ಸಹಜ. ವಿಶೇಷ್‌ ಭೃಗುವಂಶಿ ಅವರ ಜೀವನಚರಿತ್ರೆಯಲ್ಲಿ ಅವರ ಸ್ಫೂರ್ತಿದಾಯಕ ಪಯಣವನ್ನು ನಿರೂಪಿಸುವ ಮೂಲಕ ಬ್ಯಾಸ್ಕೆಟ್‌ಬಾಲ್‌ ಕ್ರೀಡೆಯು ಹೆಚ್ಚಿನ ಯುವಕರಿಗೆ ತಲುಪಲಿ ಎಂದು ನಾನು ಬಯಸುತ್ತೇನೆ‘ ಎಂದು ಲೇಖಕಿ ನಿರುಪಮಾ‌ ಯಾದವ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.