ADVERTISEMENT

ತರಬೇತಿಗಾಗಿ ಯೂರೋಪ್‌ಗೆ ಬಾಕ್ಸರ್‌ಗಳು

ಪಿಟಿಐ
Published 7 ಅಕ್ಟೋಬರ್ 2020, 14:36 IST
Last Updated 7 ಅಕ್ಟೋಬರ್ 2020, 14:36 IST
ಅಮಿತ್‌ ಪಂಗಲ್‌–ಪಿಟಿಐ ಚಿತ್ರ
ಅಮಿತ್‌ ಪಂಗಲ್‌–ಪಿಟಿಐ ಚಿತ್ರ   

ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಟಿಕೆಟ್‌ ಗಿಟ್ಟಿಸಿರುವ ಬಾಕ್ಸರ್‌ಗಳು ಸೇರಿದಂತೆ 28 ಮಂದಿಯನ್ನೊಳಗೊಂಡ ಭಾರತದ ತಂಡವು ಮುಂದಿನ ವಾರ ತರಬೇತಿಗಾಗಿ ಯೂರೋಪ್‌ಗೆ ತೆರಳಲಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಮೇರಿ ಕೋಮ್‌ ಅವರು ತರಬೇತಿಗೆ ಹೋಗುತ್ತಿಲ್ಲ.

ಡೆಂಗ್ಯೂ ಜ್ವರಕ್ಕೆ ತುತ್ತಾಗಿದ್ದ ಮೇರಿ ಕೋಮ್‌ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್‌–19ಪಿಡುಗಿನ ಆತಂಕದ ಹಿನ್ನೆಲೆಯಲ್ಲಿ ಈ ವರ್ಷ ಅವರು ಯಾವುದೇ ವಿದೇಶ ಪ್ರವಾಸಕ್ಕೆ ತೆರಳುತ್ತಿಲ್ಲ. ಅಕ್ಟೋಬರ್‌ 15ರಿಂದ ಬಾಕ್ಸರ್‌ಗಳ ಯೂರೋಪ್‌ ಪ್ರವಾಸ ಆರಂಭವಾಗಲಿದೆ.

52 ದಿನಗಳ ತರಬೇತಿಗೆ 10 ಮಂದಿ ಪುರುಷ, ಆರು ಮಹಿಳಾ ಬಾಕ್ಸರ್‌ಗಳು ಹಾಗೂ ನೆರವು ಸಿಬ್ಬಂದಿ ತೆರಳುತ್ತಿದ್ದಾರೆ. ತರಬೇತಿಗೆ ಸರ್ಕಾರ ಅಂದಾಜು ₹ 1.31 ಕೋಟಿ ವೆಚ್ಚ ಮಾಡಲಿದೆ.

ADVERTISEMENT

ಒಲಿಂಪಿಕ್ಸ್‌ ಅರ್ಹತೆ ಪಡೆದಿರುವ 9 ಮಂದಿ ಬಾಕ್ಸರ್‌ಗಳ (ಐವರು ಪುರುಷ ಹಾಗೂ ನಾಲ್ವರು ಮಹಿಳೆಯರು) ಪೈಕಿ ಆರು ಮಂದಿ ಮಾತ್ರ ತರಬೇತಿಗೆ ನಿಯೋಜನೆಗೊಂಡಿದ್ದಾರೆ. ಅವರೆಂದರೆ ಅಮಿತ್‌ ಪಂಗಲ್‌ (52 ಕೆಜಿ ವಿಭಾಗ), ಆಶಿಶ್‌ ಕುಮಾರ್‌ (75 ಕೆಜಿ), ಸತೀಶ್ ಕುಮಾರ್‌ (91+ ಕೆಜಿ), ಸಿಮ್ರನ್‌ಜೀತ್‌ ಕೌರ್‌ (60 ಕೆಜಿ), ಲವ್ಲಿನಾ ಬೊರ್ಗೊಹೈನ್‌ (69 ಕೆಜಿ) ಹಾಗೂ ಪೂಜಾ ರಾಣಿ (75 ಕೆಜಿ).

ವಿಕಾಸ್‌ ಕೃಷ್ಣನ್‌ (69 ಕೆಜಿ) ಸದ್ಯ ಅಮೆರಿಕದಲ್ಲಿ ತರಬೇತಿ ನಿರತರಾಗಿದ್ದಾರೆ.ಮನೀಷ್‌ ಕೌಶಿಕ್‌ (63 ಕೆಜಿ) ಅವರು ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಕಾರಣ ಯೂರೋಪ್‌ಗೆ ತೆರಳುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.