ನವದೆಹಲಿ: ಆಡಳಿತಾತ್ಮಕ ಸಮಸ್ಯೆ, ಆಂತರಿಕ ಕಲಹಗಳಿಂದ ನಲುಗಿಹೋಗಿದ್ದ ಭಾರತ ಬಾಕ್ಸಿಂಗ್ ಫೆಡರೇಷನ್‌ಗೆ (ಬಿಎಫ್‌ಐ) ಬಹುನಿರೀಕ್ಷಿತ ಚುನಾವಣೆ ಕೊನೆಗೂ ಗುರುವಾರ ನಡೆಯಲಿದೆ.
ಎರಡು ಬಾರಿಯ ಅಧ್ಯಕ್ಷ ಅಜಯ್ ಸಿಂಗ್ ಮೂರನೇ ಸಲ ಆಯ್ಕೆ ಬಯಸಿದ್ದಾರೆ. ಫೆಬ್ರುವರಿ 2ರಂದು ಈ ಹಿಂದಿನ ಪದಾಧಿಕಾರಿಗಳ ಅವಧಿ ಮುಗಿದಿತ್ತು. ಆದರೆ, ಸ್ಪೈಸ್‌ಜೆಟ್‌ನ ಆಡಳಿತ ನಿರ್ದೇಶಕರಾದ ಸಿಂಗ್‌್ ಅವಧಿ ಮುಗಿದ ಬಳಿಕವೂ ಪ್ರಭಾವಿಯಾಗಿದ್ದರು. ಭಾರತ ಬಾಕ್ಸಿಂಗ್ ಫೆಡರೇಷನ್‌ನ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ವರ್ಲ್ಡ್ ಬಾಕ್ಸಿಂಗ್ ನೇಮಕ ಮಾಡಿದ್ದ ಹಂಗಾಮಿ ಸಮಿತಿಗೆ ಅವರೇ ಅಧ್ಯಕ್ಷರಾಗಿದ್ದರು.
ಈ ಅವಧಿಯಲ್ಲಿ ಪುರುಷರ ಮತ್ತು ಮಹಿಳಾ ತಂಡಗಳಿಗೆ ಹೊಸ ಕೋಚ್‌ಗಳ ನೇಮಕವಾಯಿತು. ಫೆಡರೇಷನ್‌ನ ನಿಯಮಾವಳಿಯಲ್ಲಿ ತಿದ್ದುಪಡಿ ತರಲಾಯಿತು. ವಿವಾದಾತ್ಮಕ ‘ಆಯ್ಕೆ ಮೌಲ್ಯಮಾಪನ’ ತೆಗೆದುಹಾಕಲಾಯಿತು. ರಾಷ್ಟ್ರೀಯ ಶಿಬಿರಕ್ಕೆ ಬಾಕ್ಸರ್‌ಗಳ ಆಯ್ಕೆಗೆ ಪರಿಷ್ಕೃತ ವ್ಯವಸ್ಥೆ ರೂಪಿಸಲಾಯಿತು.
ಮಾರ್ಚ್‌ನಲ್ಲಿ ಚುನಾವಣೆ ನಿಗದಿಯಾಗಿದ್ದ ವೇಳೆ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದ ಕೇರಳ ಘಟಕದ ಮುಖ್ಯಸ್ಥ ಡಿ.ಚಂದ್ರಲಾಲ್ ಅವರನ್ನು ಮಹಿಳಾ ತಂಡಕ್ಕೆ ಹೆಡ್ ಕೋಚ್ ಆಗಿ ನೇಮಕ ಮಾಡಲಾಯಿತು. ಚುನಾವಣೆ ಸಮೀಪಿಸುತ್ತಿದ್ದಂತೆ, ಮಾಜಿ ಮಹಾಪ್ರಧಾನ ಕಾರ್ಯದರ್ಶಿ ಹೇಮಂತ ಕಲಿಟ ಅವರ ಮೇಲಿನ ಅಮಾನತನ್ನು ಹಂಗಾಮಿ ಸಮಿತಿ ತೆಗೆದುಹಾಕಿತು.
ಆದರೆ ಈ ಸಮಿತಿಯ ಸಿಂಧುತ್ವ ಚರ್ಚೆಗೆ ಒಳಗಾಯಿತು. 2011ರ ರಾಷ್ಟ್ರೀಯ ಕ್ರೀಡಾ ಸಂಹಿತೆ ಉಲ್ಲಂಘಿಸಿದ್ದಕ್ಕೆ ಈ ಸಮಿತಿಯನ್ನು ವಜಾಗೊಳಿಸಬೇಕೆಂದು ಭಾರತ ಒಲಿಂಪಿಕ್ ಸಂಸ್ಥೆಯ ಸತ್ಯಶೋಧನಾ ಸಮಿತಿ ಶಿಫಾರಸು ಮಾಡಿತ್ತು.
ಈ ಮೊದಲು ಚುನಾವಣೆ ಮಾರ್ಚ್ 28ರಂದು ನಡೆಯಬೇಕಾಗಿತ್ತು. ಆದರೆ ನ್ಯಾಯಾಲಯದಲ್ಲಿ ದಾವೆ– ಪ್ರತಿ ದಾವೆಗಳಿಂದಾಗಿ ಚುನಾವಣೆ ಮುಂದಕ್ಕೆ ಹೋಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.