ನವದೆಹಲಿ: ಭಾರತ ಬಾಕ್ಸಿಂಗ್ ಫೆಡರೇಷನ್, ಮಂಗಳವಾರ ನಾಟಕೀಯ ಬೆಳವಣಿಗೆಗಳನ್ನು ಕಂಡಿತು. ಹಣಕಾಸಿನ ಅವ್ಯವಹಾರದಲ್ಲಿ ಅವರು ಭಾಗಿಯಾಗಿರುವುದು ತನಿಖೆಯಲ್ಲಿ ಬಹಿರಂಗವಾದ ಕಾರಣ ಫೆಡರೇಷನ್‌ನ ಮಹಾ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಹೇಮಂತ ಕಲಿಟ ಅವರನ್ನು ಅಮಾನತು ಮಾಡಲಾಗಿದೆ.
ಮುಂಬರುವ ಫೆಡರೇಷನ್‌ನ ಚುನಾವಣೆಗೆ ಅಧ್ಯಕ್ಷ ಸ್ಥಾನಕ್ಕೆ ಅವರು ಸಲ್ಲಿಸಿದ್ದ ನಾಮಪತ್ರವನ್ನೂ ತಿರಸ್ಕರಿಸಲಾಗಿದೆ.
ಇಂಥದ್ದೇ ಆರೋಪದಲ್ಲಿ ದಿಗ್ವಿಜಯ್ ಸಿಂಗ್ ಅವರನ್ನೂ ಖಜಾಂಚಿ ಸ್ಥಾನದಿಂದ ಅಮಾನತು ಮಾಡಲಾಗಿದೆ. ಹಣಕಾಸು ಅವ್ಯವಹಾರದ ತನಿಖೆ ನಡೆಸಲು ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸುಧೀರ್ ಕುಮಾರ್ ಜೈನ್ ಅವರನ್ನು ಭಾರತ ಬಾಕ್ಸಿಂಗ್ ಫೆಡರೇಷನ್ (ಬಿಎಫ್‌ಐ) ನೇಮಕ ಮಾಡಿತ್ತು. ಬ್ಯಾಂಕ್ ಖಾತೆಯಿಂದ ಎರಡು ಸಲ ಅನಧಿಕೃತವಾಗಿ ಹಣಪಡೆದಿರುವುದು, ಬಿಲ್ಲಿಂಗ್‌ನಲ್ಲಿ ವಂಚನೆ, ಅಧಿಕಾರ ದುರ್ಬಳಕೆ ದೂರುಗಳ ಕಾರಣ ತನಿಖೆ ಕೈಗೊಳ್ಳಲಾಗಿತ್ತು.
ನ್ಯಾಯಮೂರ್ತಿ ಜೈನ್ ಅವರು ತನಿಖೆ ಮುಗಿಸಿದ್ದು, ವರದಿ ಸಲ್ಲಿಸಿದ್ದು ಅದರಲ್ಲಿ ಇಬ್ಬರೂ ಹಣಕಾಸು ಅಕ್ರಮ ಮತ್ತು ದುರುಪಯೋಗದಲ್ಲಿ ಪಾತ್ರ ವಹಿಸಿರುವುದು ದೃಢಪಟ್ಟಿದೆ ಎಂದು ಬಿಎಫ್‌ಐ ಅಧ್ಯಕ್ಷ ಅಜಯ್ ಸಿಂಗ್ ಅವರು ಈ ಇಬ್ಬರಿಗೆ ಕಳುಹಿಸಿದ ಅಧಿಕೃತ ಸಂದೇಶದಲ್ಲಿ ತಿಳಿಸಿದ್ದಾರೆ. ನ್ಯಾ.ಜೈನ್ ಸಲ್ಲಿಸಿದ ವರದಿಯ ಪ್ರತಿಯನ್ನು ಮುಂದಿನ ಕ್ರಮಕ್ಕಾಗಿ ಕ್ರೀಡಾ ಸಚಿವಾಲಯಕ್ಕೆ ಸಲ್ಲಿಸಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.
ಕಲಿಟ ಅವರು ಫೆಡರೇಷನ್‌ನಲ್ಲಿ ಸತತವಾಗಿ ನಾಲ್ಕು ವರ್ಷಗಳ ಎರಡು ಅವಧಿ ಪೂರೈಸಿದ್ದಾರೆ. ಅವರು ಕಡ್ಡಾಯ ಕೂಲಿಂಗ್ ಆಫ್‌ನಲ್ಲಿರಬೇಕಾದ ಕಾರಣ ಅಧ್ಯಕ್ಷ ಸ್ಥಾನಕ್ಕೆ ಅವರ ನಾಮಪತ್ರ ತಿರಸ್ಕರಿಸಲಾಗಿದೆ.
2021–25ರ ಅವಧಿಗೆ ಮಹಾ ಕಾರ್ಯದರ್ಶಿ ಸ್ಥಾನಕ್ಕೆ ಬರುವ ಮೊದಲು ಅವರು ಫೆಡರೇಷನ್‌ನ ಖಜಾಂಚಿ ಆಗಿ ಕಾರ್ಯನಿರ್ವಹಿಸಿದ್ದರು. ನಾಮಪತ್ರಗಳ ಪರಿಶೀಲನೆಯ ನಂತರ ಚುನಾವಣಾ ಅಧಿಕಾರಿ ಆರ್.ಕೆ.ಗೌಬಾ ಅವರು ಕಲಿಟಾ ಅವರ ನಾಮಪತ್ರ ಅನರ್ಹಗೊಳಿಸಿದರು.
ಸತೀಶ್ ನಾಮಪತ್ರ ತಿರಸ್ಕೃತ: ಕರ್ನಾಟಕದ ಸತೀಶ್ ಎನ್. ಅವರು ಮಹಾ ಕಾರ್ಯದರ್ಶಿ ಸ್ಥಾನಕ್ಕೆ ಸಲ್ಲಿಸಿದ ನಾಮಪತ್ರವನ್ನೂ ತಿರಸ್ಕರಿಸಲಾಗಿದೆ. ಅವರ ನಾಮಪತ್ರಕ್ಕೆ ಸೂಚಕರಾಗಿದ್ದ ಧಿರೇಂದ್ರ ಸಿಂಗ್, ಈ ಮೊದಲು ಇದೇ ಸ್ಥಾನಕ್ಕೆ ಪ್ರಮೋದ್ ಕುಮಾರ್ ಎಂಬವರ ನಾಮಪತ್ರಕ್ಕೂ ಸೂಚಕರಾಗಿದ್ದರು. ಬಿಎಫ್‌ಐ ವಾರ್ಷಿಕ ಮಹಾಸಭೆ ಮಾರ್ಚ್ 28ರಂದು ಗುರುಗ್ರಾಮದಲ್ಲಿ ನಡೆಯಲಿದ್ದು, ಅಂದೇ ಚುನಾವಣೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.