ADVERTISEMENT

ಚಿನ್ನದ ಪದಕದ ಸುತ್ತಿಗೆ ಶಿವ, ಪೂಜಾ

ಒಲಿಂಪಿಕ್‌ ಟೆಸ್ಟ್‌ ಬಾಕ್ಸಿಂಗ್‌: ಭಾರತದ ನಾಲ್ವರಿಗೆ ಕಂಚಿನ ಪದಕ

ಪಿಟಿಐ
Published 30 ಅಕ್ಟೋಬರ್ 2019, 20:01 IST
Last Updated 30 ಅಕ್ಟೋಬರ್ 2019, 20:01 IST
ಶಿವ ಥಾಪಾ
ಶಿವ ಥಾಪಾ   

ಟೋಕಿಯೊ : ಭಾರತದ ಶಿವ ಥಾಪಾ ಒಲಿಂಪಿಕ್‌ ಟೆಸ್ಟ್‌ ಬಾಕ್ಸಿಂಗ್‌ ಟೂರ್ನಿಯಲ್ಲಿ ಚಿನ್ನದ ಪದಕದ ಭರವಸೆ ಮೂಡಿಸಿದ್ದಾರೆ.ಕಠಿಣ ಪೈಪೋಟಿಯ ನಡುವೆಯೂ ಬುಧವಾರ 63 ಕೆಜಿ ವಿಭಾಗದಲ್ಲಿ ಅವರು ಫೈನಲ್‌ ತಲುಪಿದ್ದಾರೆ. ಆಶಿಶ್‌ (69 ಕೆಜಿ) ಮತ್ತು ಪೂಜಾ ರಾಣಿ (ಮಹಿಳೆಯರ 75 ಕೆಜಿ ವಿಭಾಗ) ಅವರೂ ಅಂತಿಮ ಘಟ್ಟಕ್ಕೆ ಲಗ್ಗೆಯಿಟ್ಟಿದ್ದಾರೆ.

ನಾಲ್ಕರ ಘಟ್ಟದ ಬೌಟ್‌ಗಳಲ್ಲಿ ಮಣಿದ ಭಾರತದ ನಾಲ್ವರು ಕಂಚಿನ ಪದಕಗಳನ್ನು ಗೆದ್ದುಕೊಂಡರು.

ನಾಲ್ಕು ಬಾರಿಯ ಏಷ್ಯನ್‌ ಪದಕ ವಿಜೇತ ಶಿವ, ಸೆಮಿಫೈನಲ್‌ ಬೌಟ್‌ನಲ್ಲಿ ಜಪಾನ್‌ನ ದೈಸುಕಿ ನಾರಿಮತ್ಸು ಎದುರು ಗೆದ್ದರು. ಆದರೆ ಈ ವಿಚಾರದಲ್ಲಿ ರೆಫರಿಗಳ ತೀರ್ಪು ಏಕಾಭಿಪ್ರಾಯದಿಂದ ಕೂಡಿರಲಿಲ್ಲ.

ADVERTISEMENT

ಈ ಹಿಂದೆ ಏಷ್ಯನ್‌ ಗೇಮ್ಸ್ ಕಂಚಿನ ಪದಕ ಜಯಿಸಿದ್ದ ರಾಣಿ, ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಬ್ರೆಜಿಲ್‌ನ ಬೀಟ್‌ರಿಜ್‌ ಸೋರೆಸ್‌ ಎದುರು ಜಯದ ನಗೆ ಬೀರಿದರು. ಈ ವರ್ಷದ ಆರಂಭದಲ್ಲಿ ರಾಣಿ ಅವರು ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದರು.

‘ಶಿವ ಹಾಗೂ ಪೂಜಾ ಇಬ್ಬರೂ ಕಠಿಣ ಪೈಪೋಟಿ ಎದುರಿಸಿದರು. ಆದರೆ ಕೊನೆಯ ಸುತ್ತಿನಲ್ಲಿ ಪ್ರಾಬಲ್ಯ ಮೆರೆದರು’ ಎಂದು ಭಾರತ ಬಾಕ್ಸಿಂಗ್‌ ಹೈ ಫರ್ಪಾರ್ಮೆನ್ಸ್ ನಿರ್ದೇಶಕ ಸ್ಯಾಂಟಿಯಾಗೊ ನೇವಾ ಮೆಚ್ಚುಗೆ ವ್ಯಕ್ತಪಡಿಸಿದರು.

ಪುರುಷರ 69 ಕೆಜಿ ವಿಭಾಗದಲ್ಲಿ ಆಶಿಶ್‌, ಜಪಾನ್‌ನ ಹಿರೊಆಕಿ ಕಿಂಜ್ಯೊ ಸವಾಲು ಮೀರಿನಿಂತರು.

ಮಾಜಿ ಜೂನಿಯರ್‌ ವಿಶ್ವ ಚಾಂಪಿಯನ್‌ ನಿಖತ್‌ ಜರೀನ್‌ (ಮಹಿಳೆಯರ 51 ಕೆಜಿ ವಿಭಾಗ) ಮತ್ತು ಸಿಮ್ರನ್‌ಜೀತ್‌ ಕೌರ್‌ (60 ಕೆಜಿ) ಸೆಮಿಫೈನಲ್‌ ಬೌಟ್‌ಗಳಲ್ಲಿ ನಿರಾಸೆ ಅನುಭವಿಸಿ ಕಂಚಿನ ಪದಕ ಗಳಿಸಿದರು. ನಾಲ್ಕರ ಘಟ್ಟದಲ್ಲೇ ಸೋತ ಏಷ್ಯನ್‌ ಗೇಮ್ಸ್‌ ಬೆಳ್ಳಿ ಪದಕ ವಿಜೇತ ಸುಮಿತ್‌ ಸಂಗ್ವಾನ್‌ (91 ಕೆಜಿ) ಮತ್ತು ವಹಲಿಂಪುಯಾ (75 ಕೆಜಿ) ಕೂಡ ಕಂಚು ತಮ್ಮದಾಗಿಸಿಕೊಂಡರು.

ಜರೀನ್‌ ಅವರು ಜಪಾನ್‌ನ ಕವಾನೊ ಎದುರು, ವಹಲಿಂಪುಯಾ ಕೂಡ ಸ್ಥಳೀಯ ಪಟು ಯುಟೊ ಮೊರಿವಾಕಿ ವಿರುದ್ಧ ಮಣಿದರು. ಸಂಗ್ವಾನ್ ಹಾಗೂ ಸಿಮ್ರನ್‌ಜೀತ್‌ ಅವರು ಕ್ರಮವಾಗಿ ಕಜಕಸ್ತಾನದ ಐಬೆಕ್‌ ಓರಲ್‌ಬೆ ಹಾಗೂ ರಿಮ್ಮಾ ವೊಲೊಸೆಂಕೊ ಎದುರು ಪರಾಭವಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.