ಬ್ಯಾಂಕಾಕ್: ಮಾಜಿ ವಿಶ್ವ ಯುವ ಚಾಂಪಿಯನ್ ಅಂಕುಶಿತಾ ಬೊರೊ 60 ಕೆ.ಜಿ ವಿಭಾಗದಲ್ಲಿ ಮಂಗೋಲಿಯಾದ ನಮುನ್ ಮೊಂಖೋರ್ ಅವರನ್ನು ಸೋಲಿಸಿದರೆ, ರಾಷ್ಟ್ರೀಯ ಚಾಂಪಿಯನ್‌ಷಿಪ್ ಕಂಚಿನ ಪಕದ ವಿಜೇತ ಅಭಿಮನ್ಯು ಲೂರಾ ಸೋಮವಾರ ನಡೆದ ಒಲಿಂಪಿಕ್ಸ್ ಬಾಕ್ಸಿಂಗ್ ವಿಶ್ವ ಕ್ವಾಲಿಫೈಯರ್ ಟೂರ್ನಿಯ 80 ಕೆ.ಜಿ ವಿಭಾಗದಲ್ಲಿ ಐರ್ಲೆಂಡ್‌ನ ಕೆಲಿನ್ ಕ್ಯಾಸಿಡಿ ವಿರುದ್ಧ ಸೋತರು.
ನಮುನ್ ವಿರುದ್ಧ ಉತ್ತಮವಾಗಿ ಆಡಿದ ಬೊರೊ, ಮೂರು ತೀವ್ರ ಪೈಪೋಟಿಯ ಸುತ್ತುಗಳ ನಂತರ 4-1 ಅಂತರದಲ್ಲಿ ಗೆಲುವು ಸಾಧಿಸಿದರು. ಬೊರೊ ತನ್ನ ತಂತ್ರಗಾರಿಕೆ ಮೂಲಕ ಎದುರಾಳಿಯ ವೇಗದ ಚಲನೆಗಳನ್ನು ಪರಿಣಾಮಕಾರಿಯಾಗಿ ಮೊಟಕುಗೊಳಿಸಿದರು.
ಬಲ್ಗೇರಿಯಾದ ಕ್ರಿಸ್ಟಿಯಾನ್ ನಿಕೊಲವ್ ಅವರನ್ನು ಮಣಿಸಿದ ಲೂರಾ, ಆತ್ಮವಿಶ್ವಾಸದಿಂದಲೇ ಕಣಕ್ಕಿಳಿದರು. ಲೂರಾ 0–5 ಅಂತರದಲ್ಲಿ ಕ್ಯಾಸಿಡಿ ಎದುರು ಸೋಲನುಭವಿಸಿದರು.
ಸಚಿನ್ ಸಿವಾಚ್ (57 ಕೆಜಿ), ಅಭಿನಾಶ್ ಜಮ್ವಾಲ್ (63.5 ಕೆಜಿ) ಮತ್ತು ನಿಶಾಂತ್ ದೇವ್ (71 ಕೆಜಿ) ಅವರು ಒಲಿಂಪಿಕ್ ಕೋಟಾಕ್ಕಾಗಿ ಕಣಕ್ಕಿಳಿಯಲಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಬಾಕ್ಸರ್‌ಗಳಿಗೆ ಈ ಟೂರ್ನಿ ಕೊನೆಯ ಅವಕಾಶವಾಗಿದೆ.
ಸಚಿನ್ ಡೆನ್ಮಾರ್ಕ್‌ನ ಫ್ರೆಡೆರಿಕ್ ಜೆನ್ಸನ್ ವಿರುದ್ಧ, ಜಮ್ವಾಲ್ ಕೊಲಂಬಿಯಾದ ಜೋಸ್ ಮ್ಯಾನುಯೆಲ್ ವಯಾಫರಾ ಫೋರ್ ವಿರುದ್ಧ ಮತ್ತು ನಿಶಾಂತ್ ದೇವ್ ಮಂಗೋಲಿಯಾದ ಒಟ್ಗೊನ್ಬಾಟರ್ ಬೈಂಬಾ-ಎರ್ಡೆನ್ ವಿರುದ್ಧ ಸೆಣಸಲಿದ್ದಾರೆ.
ಕಳೆದ ವರ್ಷ ಏಷ್ಯನ್ ಕ್ರೀಡಾಕೂಟದ ಮೂಲಕ ನಿಖತ್ ಝರೀನ್ (50 ಕೆಜಿ), ಪ್ರೀತಿ ಪವಾರ್ (54 ಕೆಜಿ) ಮತ್ತು ಲವ್ಲಿನಾ ಬೋರ್ಗೊಹೈನ್ (75 ಕೆಜಿ) ಪ್ಯಾರಿಸ್ ಟಿಕೆಟ್ ಕಾಯ್ದಿರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.