
ಅನ್ಶು ಮಲಿಕ್
ಬುಡಾಪೆಸ್ಟ್: ಭಾರತದ ಮಹಿಳಾ ಕುಸ್ತಿಪಟು ಅನ್ಶು ಮಲಿಕ್, ಬುಡಾಪೆಸ್ಟ್ ರ‍್ಯಾಂಕಿಂಗ್ ಸರಣಿಯ ಫೈನಲ್‌ನಲ್ಲಿ ಚೀನಾದ 21 ವರ್ಷ ವಯಸ್ಸಿನ ಎದುರಾಳಿ ಕೆಶಿನ್ ಹಾಂಗ್ ಅವರ ಕೌಶಲಗಳಿಗೆ ಸಾಟಿಯಾಗಲಿಲ್ಲ.
57 ಕೆ.ಜಿ. ವಿಭಾಗದ ಈ ಸ್ಪರ್ಧೆಯಲ್ಲಿ ಅನ್ಶು ಬೆಳ್ಳಿ ಪದಕ ಕೊರಳಿಗೆ ಹಾಕಿಕೊಂಡರು.
ಈ ವಿಭಾಗದ ಅಗ್ರಮಾನ್ಯ ಕುಸ್ತಿಪಟುವಾಗಿರುವ ಕೆಶಿನ್ ತಾಂತ್ರಿಕ ಶ್ರೇಷ್ಠತೆ ಆಧಾರದಲ್ಲಿ 12–1 ರಿಂದ ಭಾರತದ ಎದುರಾಳಿಯನ್ನು ಸೋಲಿಸಿದರು. ಅನ್ಶು, ಕಳೆದ ವರ್ಷ ನಡೆದ ಹಾಂಗ್‌ಝೌ ಏಷ್ಯನ್ ಕ್ರೀಡೆಗಳ 53 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದರು.
ಭಾರತದ ಅಂತಿಮ್ ಪಂಘಲ್, ಇದಕ್ಕೂ ಹಿಂದೆ 53 ಕೆ.ಜಿ. ವಿಭಾಗದಲ್ಲಿ ಬೆಳ್ಳಿಯ ಪದಕ ಗಳಿಸಿದ್ದರು. ವಿನೇಶಾ ಫೋಗಟ್ 50 ಕೆ.ಜಿ. ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಚೀನಾದ ಜಿಯಾಂಗ್ ಝು ಅವರಿಗೆ 0–5 ರಿಂದ ಸೋತಿದ್ದರು.
ಅನ್ಶು ಮೊದಲ ಸುತ್ತಿನಲ್ಲಿ ಮಾಲ್ಡೊವಾದ ಅನಸ್ತೇಸಿಯಾ ನಿಚಿತಾ ಅವರನ್ನು ಮಣಿಸಿದ್ದರು. ನಂತರ, ವಿಶ್ವ ಚಾಂಪಿಯನ್ ಝಾಂಗ್ ಕ್ವಿ (ಚೀನಾ) ಅವರನ್ನು ಮಣಿಸಿದ್ದರು. ಆದರೆ ಫೈನಲ್‌ನಲ್ಲಿ ಹಾಂಗ್ ಅವರಿಗೆ ಸಾಟಿಯಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.