ADVERTISEMENT

ಕಂಠೀರವದಲ್ಲಿ ಕಬಡ್ಡಿ ಕಲರವ

ಪಿಕೆಎಲ್‌ ಬೆಂಗಳೂರು ಲೆಗ್ ಇಂದಿನಿಂದ; ಮೊದಲ ದಿನ ಬುಲ್ಸ್‌–ಗುಜರಾತ್ ಮುಖಾಮುಖಿ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2019, 19:30 IST
Last Updated 30 ಆಗಸ್ಟ್ 2019, 19:30 IST
ತವರಿನ ಲೆಗ್‌ಗೆ ಸಿದ್ಧವಾಗಿರುವ ಬೆಂಗಳೂರು ಬುಲ್ಸ್‌ ತಂಡದ ನಾಯಕ ರೋಹಿತ್‌ ಕುಮಾರ್‌, ಡಿಫೆಂಡರ್‌ ಮಹೇಂದರ್‌ ಸಿಂಗ್‌, ಕೋಚ್‌ ರಣಧೀರ್‌ ಸಿಂಗ್‌ ಮತ್ತು ರೈಡರ್ ಪವನ್‌ ಶೆರಾವತ್‌ ಶುಕ್ರವಾರ ‘ಬಲ ಪ್ರದರ್ಶನ’ ಮಾಡಿದರು –ಪ್ರಜಾವಾಣಿ ಚಿತ್ರ
ತವರಿನ ಲೆಗ್‌ಗೆ ಸಿದ್ಧವಾಗಿರುವ ಬೆಂಗಳೂರು ಬುಲ್ಸ್‌ ತಂಡದ ನಾಯಕ ರೋಹಿತ್‌ ಕುಮಾರ್‌, ಡಿಫೆಂಡರ್‌ ಮಹೇಂದರ್‌ ಸಿಂಗ್‌, ಕೋಚ್‌ ರಣಧೀರ್‌ ಸಿಂಗ್‌ ಮತ್ತು ರೈಡರ್ ಪವನ್‌ ಶೆರಾವತ್‌ ಶುಕ್ರವಾರ ‘ಬಲ ಪ್ರದರ್ಶನ’ ಮಾಡಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಎರಡು ಆವೃತ್ತಿಗಳಲ್ಲಿ ಬೆಂಗಳೂರು ಬುಲ್ಸ್‌ ತಂಡದ ಪಂದ್ಯಗಳನ್ನು ತವರಿನಲ್ಲಿ ವೀಕ್ಷಿಸಲು ಸಾಧ್ಯವಾಗದ ಪ್ರೇಕ್ಷಕರಿಗೆ ಇನ್ನು ಒಂದು ವಾರ ಕಬಡ್ಡಿಯ ರಸದೌತಣ. ಪ್ರೊ ಕಬಡ್ಡಿ ಲೀಗ್‌ನ ಏಳನೇ ಆವೃತ್ತಿಯ ಬೆಂಗಳೂರು ಲೆಗ್‌ ಪಂದ್ಯಗಳು ಶನಿವಾರದಿಂದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿವೆ.

ಎರಡನೇ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿದ್ದ ಮತ್ತು ಕಳೆದ ಬಾರಿ ಚಾಂಪಿಯನ್ ಪಟ್ಟಕ್ಕೇರಿದ ಬೆಂಗಳೂರು ಬುಲ್ಸ್ ತವರಿನ ಮೊದಲ ಪಂದ್ಯದಲ್ಲಿ ಗುಜರಾತ್ ಫಾರ್ಚೂನ್‌ಜೈಂಟ್ಸ್ ತಂಡವನ್ನು ಎದುರಿಸಲಿದೆ. ಉಳಿದ ಪಂದ್ಯಗಳಲ್ಲಿ ಕಳೆದ ಬಾರಿ ರಂಗಪ್ರವೇಶ ಮಾಡಿದ ತಮಿಳ್ ತಲೈವಾಸ್, ಮೂರು ಬಾರಿಯ ಚಾಂಪಿಯನ್‌ ಪಟ್ನಾ ಪೈರೇಟ್ಸ್‌ ಮತ್ತು ಪಾಯಿಂಟ್ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿರುವ ತೆಲುಗು ಟೈಟನ್ಸ್ ತಂಡಗಳು ಬುಲ್ಸ್‌ಗೆ ಎದುರಾಳಿ.

ಆರಂಭದ 5 ಪಂದ್ಯಗಳಲ್ಲಿ ಹ್ಯಾಟ್ರಿಕ್ ಸೇರಿದಂತೆ 4 ಪಂದ್ಯಗಳಲ್ಲಿ ಜಯ ಸಾಧಿಸಿದ್ದ ಬುಲ್ಸ್ ನಂತರ ಸೋಲು-ಗೆಲುವಿನ ಸಿಹಿ ಮತ್ತು ಕಹಿಯನ್ನು ಅನುಭವಿಸಿದೆ. ದೆಹಲಿ ಲೆಗ್‌ನ ಒಂದು ಪಂದ್ಯದಲ್ಲಿ ಗೆದ್ದು ಮತ್ತೊಂದರಲ್ಲಿ ಸೋತಿತ್ತು. 11 ಪಂದ್ಯಗಳನ್ನು ಆಡಿರುವ ತಂಡ 6ರಲ್ಲಿ ಗೆದ್ದು 33 ಪಾಯಿಂಟ್‌ಗಳನ್ನು ಗಳಿಸಿದೆ. ತವರಿನಲ್ಲಿ ಗರಿಷ್ಠ ಸಾಧನೆ ಮಾಡಿ ಪಾಯಿಂಟ್ ಪಟ್ಟಿಯ ಅಗ್ರ ಸ್ಥಾನಕ್ಕೇರುವುದು ತಂಡದ ಗುರಿ.

ADVERTISEMENT

11 ಪಂದ್ಯಗಳಲ್ಲಿ 4 ಜಯ ಸಾಧಿಸಿ 25 ಪಾಯಿಂಟ್ ಕಲೆ ಹಾಕಿರುವ ಜೈಪುರ ಪಿಂಕ್‌ ಪ್ಯಾಂಥರ್ಸ್ ತಂಡ ಬುಲ್ಸ್‌ಗೆ ಶನಿವಾರದ ಎದುರಾಳಿ. ಡಿಫೆಂಡರ್ ಸುನಿಲ್ ಕುಮಾರ್ ನಾಯಕತ್ವದ ಗುಜರಾತ್ ಪಾಯಿಂಟ್ ಪಟ್ಟಿಯ 8ನೇ ಸ್ಥಾನದಲ್ಲಿದೆ. ಬುಲ್ಸ್‌ಗೆ ಸರಿಸಾಟಿಯಾಗಬಲ್ಲ ತಂಡವಲ್ಲದಿದ್ದರೂ ಗುಜರಾತ್‌ನ ರೈಡರ್‌ಗಳಾದ ಜಿ.ಬಿ.ಮೋರೆ, ಸಚಿನ್ ತನ್ವಾರ್, ಆಲ್‌ರೌಂಡರ್‌ಗಳಾದ ರೋಹಿತ್ ಗುಲಿಯಾ ಮುಂತಾದವರನ್ನು ಲಘುವಾಗಿ ಪರಿಗಣಿಸುವಂತಿಲ್ಲ.

ಬುಲ್ಸ್‌ನ ನಾಯಕ ಮತ್ತು ರೈಡರ್ ರೋಹಿತ್ ಕುಮಾರ್, ಅಮೋಘ ಆಟವಾಡುತ್ತಿರುವ ಪವನ್ ಶೆರಾವತ್‌ ಅವರನ್ನು ನಿಯಂತ್ರಿಸಲು ಗುಜರಾತ್ ಯಾವ ತಂತ್ರಕ್ಕೆ ಮೊರೆ ಹೋಗುತ್ತದೆ ಎಂಬುದು ಕುತೂಹಲ ಕೆರಳಿಸಿದೆ. ಡಿಫೆಂಡರ್‌ಗಳಾದ ಮಹೇಂದರ್ ಸಿಂಗ್, ಅಮನ್ ಮತ್ತು ಸೌರಭ್ ನಂದಾಲ್ ಕೂಡ ಬುಲ್ಸ್‌ನ ಭರವಸೆಯಾಗಿದ್ದಾರೆ.

***

ಬೆಂಗಳೂರು ಆವೃತ್ತಿಯ ವೇಳಾಪಟ್ಟಿ

ದಿನಾಂಕ ಮುಖಾಮುಖಿ ಸಮಯ

ಆ.31 ಬುಲ್ಸ್‌–ಗುಜರಾತ್‌ 7.30

ಆ.31 ಮುಂಬಾ–ಜೈಪುರ್ 8.30

ಸೆ.1 ಯೋಧಾ–ಬೆಂಗಾಲ್ 7.30

ಸೆ.1 ಬುಲ್ಸ್‌–ತಲೈವಾಸ್ 8.30

ಸೆ.2 ಪುಣೇರಿ–ಹರಿಯಾಣ 7.30

ಸೆ.2 ಟೈಟನ್ಸ್‌–ತಲೈವಾಸ್ 8.30

ಸೆ.3 ವಿಶ್ರಾಂತಿ ದಿನ

ಸೆ.4 ಜೈಪುರ–ಡೆಲ್ಲಿ 7.30

ಸೆ.4 ಬುಲ್ಸ್‌–ಪೈರೇಟ್ಸ್‌ 8.30

ಸೆ.5 ಪಲ್ಟನ್‌–ಮುಂಬಾ 7.30

ಸೆ.6 ಪೈರೇಟ್ಸ್‌–ಯೋಧಾ 7.30

ಸೆ.6 ಬುಲ್ಸ್‌–ಟೈಟನ್ಸ್‌ 8.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.