ADVERTISEMENT

ಪವನ್‌ಗೆ ಸೂಪರ್ ಟೆನ್‌: ಬುಲ್ಸ್‌ ವಿನ್

ಪ್ರೊ ಕಬಡ್ಡಿ ಲೀಗ್‌: 100ನೇ ಪಂದ್ಯ ಆಡಿದ ತಮಿಳ್ ತಲೈವಾಸ್‌ನ ಮಂಜೀತ್ ಚಿಲ್ಲಾರ್

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 19:45 IST
Last Updated 17 ಆಗಸ್ಟ್ 2019, 19:45 IST
ತಲೈವಾಸ್ ಅಂಗಳದಲ್ಲಿ ರೇಡಿಂಗ್ ಸಾಮರ್ಥ್ಯ ಮೆರೆದ ಪವನ್ ಶೆರಾವತ್
ತಲೈವಾಸ್ ಅಂಗಳದಲ್ಲಿ ರೇಡಿಂಗ್ ಸಾಮರ್ಥ್ಯ ಮೆರೆದ ಪವನ್ ಶೆರಾವತ್   

ಚೆನ್ನೈ : ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಬೆಂಗಳೂರು ಬುಲ್ಸ್ ಅಬ್ಬರಕ್ಕೆ ತಮಿಳ್ ತಲೈವಾಸ್ ದಂಗಾಯಿತು. ಪ್ರೊ ಕಬಡ್ಡಿ ಲೀಗ್‌ನ ಚೆನ್ನೈ ಲೆಗ್‌ನ ಮೊದಲ ಪಂದ್ಯದಲ್ಲೇ ಆತಿಥೇಯರು ನಿರಾಸೆಗೆ ಒಳಗಾದರು. ಬುಲ್ಸ್‌ 32–21ರಲ್ಲಿ ಗೆಲುವಿನ ನಗೆ ಸೂಸಿತು.

ಪಂದ್ಯದ ಮೊದಲ ರೇಡ್ ಮಾಡಿದ ಪವನ್ ಶೆರಾವತ್ ಶುಭಾರಂಭ ಮಾಡಿದರು. ತಂಡದ ಪರವಾಗಿ ಮೊದಲ ಐದು ರೇಡ್‌ಗಳಲ್ಲೂ ಪಾಯಿಂಟ್ ಹೆಕ್ಕಿ ತಂದರು. ಮೊದಲ ಆರು ನಿಮಿಷಗಳಲ್ಲಿ ಎದುರಾಳಿ ತಂಡವನ್ನು ಆಲ್‌ ಔಟ್ ಮಾಡಿದ ಬುಲ್ಸ್ 10 ಪಾಯಿಂಟ್‌ಗಳನ್ನೂ ಬಗಲಿಗೆ ಹಾಕಿಕೊಂಡಿತು. ಈ ವೇಳೆ ತಲೈವಾಸ್ ಗಳಿಸಿದ್ದು ಒಂದು ಪಾಯಿಂಟ್ ಮಾತ್ರ. ಪ್ರೊ ಕಬಡ್ಡಿ ಲೀಗ್‌ನಲ್ಲಿ 100ನೇ ಪಂದ್ಯ ಆಡಿದ ಮಂಜೀತ್ ಚಿಲ್ಲಾರ್ ಪಂದ್ಯದಲ್ಲಿ ತಮ್ಮ ಮೊದಲ ರೇಡ್‌ನಲ್ಲೇ ಬುಲ್ಸ್‌ ಬಲೆಗೆ ಬಿದ್ದರು.

ಮೊದಲ ಎರಡು ರೇಟ್‌ಗಳಲ್ಲಿ ಬರಿಗೈಯಲ್ಲಿ ವಾಪಸಾಗಿದ್ದ ನಾಯಕ ಅಜಯ್ ಠಾಕೂರ್ ತಮ್ಮ ಮೂರನೇ ರೇಡ್‌ನಲ್ಲಿ ಬೋನಸ್ ಪಾಯಿಂಟ್‌ ಗಳಿಸಿ 1600 ರೇಡ್ ಪಾಯಿಂಟ್‌ಗಳನ್ನು ತಮ್ಮದಾಗಿಸಿಕೊಂಡರು. ಈ ಮೂಲಕ ತಲೈವಾಸ್ ಎರಡು ಪಾಯಿಂಟ್‌ಗಳನ್ನು ಗಳಿಸಿತು. 11ನೇ ನಿಮಿಷದಲ್ಲಿ ಪವನ್‌ ಶೆರಾವತ್ ಅವರನ್ನು ಹಿಡಿದ ರಣ್ ಸಿಂಗ್ ವೈಯಕ್ತಿಕ 200ನೇ ಟ್ಯಾಕಲ್ ಪಾಯಿಂಟ್ ಗಳಿಸಿದರು.

ADVERTISEMENT

ಅಜಯ್‌ ಠಾಕೂರ್‌, ಅಜಿತ್‌, ಶಬ್ಬೀರ್ ಬಾಪು ಮತ್ತು ರಾಹುಲ್ ಚೌಧರಿ ಗಳಿಸಿದ ತಲಾ ಎರಡು ಪಾಯಿಂಟ್‌ಗಳ ಬಲದಿಂದ ಪ್ರಥಮಾರ್ಧದಲ್ಲಿ ಆತಿಥೇಯರು 10 ಪಾಯಿಂಟ್ ಗಳಿಸಿದರು. ಆದರೆ ಬುಲ್ಸ್ 17 ಪಾಯಿಂಟ್‌ಗಳೊಂದಿಗೆ ನಿರಾಳವಾಯಿತು. ಇದರಲ್ಲಿ ಏಳು ಪಾಯಿಂಟ್‌ಗಳನ್ನು ಪವನ್‌ ಶೆರಾವತ್ ಒಬ್ಬರೇ ಗಳಿಸಿದ್ದರು. ಮೊದಲಾರ್ಧದಲ್ಲಿ ಬುಲ್ಸ್ 10 ರೇಡ್ ಪಾಯಿಂಟ್‌ಗಳನ್ನು ಗಳಿಸಿದರೆ ಐದು ಪಾಯಿಂಟ್‌ಗಳು ಟ್ಯಾಕಲ್ ಮೂಲಕ ಬಂದಿದ್ದವು.

ದ್ವಿತೀಯಾರ್ಧದಲ್ಲಿ ಮರು ಹೋರಾಟ: ದ್ವಿತೀಯಾರ್ಧದಲ್ಲಿ ತಲೈವಾಸ್ ಮರು ಹೋರಾಟ ನಡೆಸಿತು. ಮೊದಲು ಸತತ ಎರಡು ಪಾಯಿಂಟ್‌ಗಳನ್ನು ಗಳಿಸಿದ ತಂಡ 10 ನಿಮಿಷಗಳ ಆಟ ಬಾಕಿ ಇರುವಾಗ ಹಿನ್ನಡೆಯನ್ನು 16–19ಕ್ಕೆ ಕುಗ್ಗಿಸಿ ನಿಟ್ಟುಸಿರು ಬಿಟ್ಟಿತು.

ಈ ಹಂತದಿಂದ ಪಂದ್ಯ ರೋಚಕವಾಯಿತು. ಅಜಯ್ ಠಾಕೂರ್ ಅವರನ್ನು ಸೂಪರ್ ಟ್ಯಾಕಲ್ ಮೂಲಕ ಕೆಡವಿದ ಸೌರಭ್ ನಂದಾಲ್ ಅವರು ಬುಲ್ಸ್‌ಗೆ ಗಮನಾರ್ಹ ಮುನ್ನಡೆ ಗಳಿಸಿಕೊಟ್ಟರು. ನಂತರ ಬುಲ್ಸ್ ಓಟ ಮುಂದುವರಿಯಿತು. ಮೂರು ನಿಮಿಷಗಳು ಬಾಕಿ ಇರುವಾಗ ಒಂಟಿ ಪಾಯಿಂಟ್ ಮೂಲಕ ‘ಸೂಪರ್ ಟೆನ್’ ಸಾಧಿಸಿದ ಪವನ್ ಶೆರಾವತ್ ತಂಡದ ಮುನ್ನಡೆಯನ್ನು 27–18ಕ್ಕೆ ಏರಿಸಿದರು. ನಂತರ ತಂಡ ಸುಲಭವಾಗಿ ಜಯ ಗಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.