ADVERTISEMENT

ಜನವರಿಯಲ್ಲಿ ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌

ಪಿಟಿಐ
Published 29 ಮೇ 2020, 20:30 IST
Last Updated 29 ಮೇ 2020, 20:30 IST
bwf
bwf   

ನವದೆಹಲಿ: ವಿಶ್ವ ಜೂನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಅನ್ನು ಮುಂದಿನ ವರ್ಷದ ಜನವರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ (ಬಿಡಬ್ಲ್ಯುಎಫ್) ಶುಕ್ರವಾರ ಈ ವಿಷಯವನ್ನು ಬಹಿರಂಗಪಡಿಸಿದೆ.

ಚಾಂಪಿಯನ್‌ಷಿಪ್‌, ಈ ವರ್ಷದ ಸೆಪ್ಟೆಂಬರ್‌28ರಿಂದ ಅಕ್ಟೋಬರ್‌ 11ರವರೆಗೆನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿ ನಡೆಯಬೇಕಿತ್ತು. ಕೊರೊನಾ ಬಿಕ್ಕಟ್ಟಿನ ಕಾರಣ ಇದನ್ನು ಜನವರಿಗೆ ಮುಂದೂಡಲಾಗಿದೆ.

‘ಎಲ್ಲರ ಹಿತದೃಷ್ಟಿಯಿಂದ ವಿಶ್ವ‌ ಚಾಂಪಿಯನ್‌ಷಿಪ್ ಅನ್ನು‌ 2021ರ ಜನವರಿ 18ರಿಂದ 24ರವರೆಗೆ ನಡೆಸಲು ತೀರ್ಮಾನಿಸಲಾಗಿದೆ. ವಿಶ್ವ ಜೂನಿಯರ್‌ ಮಿಶ್ರ ತಂಡ ಚಾಂಪಿಯನ್‌ಷಿಪ್‌ ಅನ್ನು ಜನವರಿ 11ರಿಂದ 16ರವರೆಗೆ ಆಯೋಜಿಸಲು ನಿರ್ಧರಿಸಲಾಗಿದೆ.ಈ ಮಾರ್ಪಾಡಿನಿಂದಾಗಿ ಆಯೋಜಕರಿಗೆ ಸಿದ್ಧತೆ ಕೈಗೊಳ್ಳಲು ಮತ್ತಷ್ಟು ಕಾಲಾವಕಾಶ ಸಿಗಲಿದೆ. ಸೆಪ್ಟೆಂಬರ್‌ನಲ್ಲಿ ನಿಗದಿಯಾಗಿದ್ದ ಟೂರ್ನಿಗೆ ಅರ್ಹತೆ ಗಳಿಸಿರುವವರು ಮಾತ್ರ ಈ ಟೂರ್ನಿಗಳಲ್ಲಿ ಪಾಲ್ಗೊಳ್ಳಬಹುದಾಗಿದೆ’ ಎಂದು ಬಿಡಬ್ಲ್ಯುಎಫ್‌, ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

‘ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದನ್ನು ಗಮನದಲ್ಲಿಟ್ಟುಕೊಂಡು ವಿಶ್ವ ಚಾಂಪಿಯನ್‌ಷಿಪ್‌ ಅನ್ನು ಜನವರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಇದೊಂದು ಉತ್ತಮ ನಿರ್ಧಾರ. ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸುವ ವಿಚಾರದಲ್ಲಿ ಬ್ಯಾಡ್ಮಿಂಟನ್‌ ನ್ಯೂಜಿಲೆಂಡ್‌ಗೆ ಎಲ್ಲಾ ಬಗೆಯ ಸಹಕಾರ ನೀಡಲು ನಾವು ಸಿದ್ಧರಿದ್ದೇವೆ’ ಎಂದು ಬಿಡಬ್ಲ್ಯುಎಫ್‌ ಮಹಾ ಕಾರ್ಯದರ್ಶಿ ಥಾಮಸ್‌ ಲುಂಡ್‌ ತಿಳಿಸಿದ್ದಾರೆ.

‘ಟೂರ್ನಿಯ ದಿನಾಂಕವನ್ನು ಮರು ಹೊಂದಾಣಿಕೆ ಮಾಡುವುದು ಅನಿವಾರ್ಯವಾಗಿತ್ತು. ಈ ಸಂಬಂಧ ಪ್ರಾಯೋಜಕರ ಜೊತೆ ಚರ್ಚಿಸುತ್ತೇವೆ. ಜನವರಿ ವೇಳೆಗೆ ಕೊರೊನಾ ಬಿಕ್ಕಟ್ಟು ಬಗೆಹರಿಯುವ ನಿರೀಕ್ಷೆ ಇದೆ. ಹೊಸ ವಾತಾವರಣದಲ್ಲಿ ವಿಶ್ವದ ಯುವ ಸ್ಪರ್ಧಿಗಳು ಪರಸ್ಪರ ಸೆಣಸುವುದನ್ನು ನೋಡಲು ಈಗ ಎಲ್ಲರೂ ಕಾತರರಾಗಿದ್ದಾರೆ’ ಎಂದು ನ್ಯೂಜಿಲೆಂಡ್‌ ಬ್ಯಾಡ್ಮಿಂಟನ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಜೊಯ್‌ ಹಿಚ್‌ಕಾಕ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.