ADVERTISEMENT

ಚಳಿಗಾಲದ ಒಲಿಂಪಿಕ್ಸ್‌: ಚೀನಾ ಬಹಿಷ್ಕಾರ ರಾಷ್ಟ್ರಗಳ ಯಾದಿಗೆ ಕೆನಡಾ

ಬೀಜಿಂಗ್‌ನ ಚಳಿಗಾಲದ ಒಲಿಂಪಿಕ್ಸ್‌

ಏಜೆನ್ಸೀಸ್
Published 9 ಡಿಸೆಂಬರ್ 2021, 7:05 IST
Last Updated 9 ಡಿಸೆಂಬರ್ 2021, 7:05 IST
ಒಲಿಂಪಿಕ್ಸ್‌
ಒಲಿಂಪಿಕ್ಸ್‌   

ಟೊರಾಂಟೊ (ಎಪಿ): ಬೀಜಿಂಗ್‌ನಲ್ಲಿ ನಿಗದಿಯಾಗಿರುವ ಚಳಿಗಾಲದ ಒಲಿಂಪಿಕ್ಸ್‌ಗೆ ‘ರಾಜತಾಂತ್ರಿಕ ಬಹಿಷ್ಕಾರ’ ಹಾಕುವ ರಾಷ್ಟ್ರಗಳ ಸಾಲಿಗೆ ಈಗ ಕೆನಡಾ ಕೂಡ ಸೇರ್ಪಡೆಯಾಗಿದೆ. ಮಾನವ ಹಕ್ಕುಗಳ ದಮನದ ಕಾರಣ ಬಹಿಷ್ಕಾರ ನಿಲುವನ್ನು ಕೈಗೊಳ್ಳುವುದಾಗಿ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರೂಡೊ ಬುಧವಾರ ಖಚಿತಪಡಿಸಿದ್ದಾರೆ.

ಚಳಿಗಾಲದ ಒಲಿಂಪಿಕ್ಸ್‌ ಮುಂದಿನ ವರ್ಷದ ಫೆಬ್ರುವರಿಯಲ್ಲಿ ಚೀನಾ ರಾಜಧಾನಿಯಲ್ಲಿ ನಡೆಯಲಿದೆ. ಬೀಜಿಂಗ್‌ ಕೂಟಕ್ಕೆ ರಾಜತಾಂತ್ರಿಕ ಅಧಿಕಾರಿಗಳನ್ನು ಕಳುಹಿಸುವುದಿಲ್ಲ ಎಂದು ಅಮೆರಿಕ, ಇಂಗ್ಲೆಂಡ್‌, ಆಸ್ಟ್ರೇಲಿಯಾ ದೇಶಗಳು ಈ ಮೊದಲೇ ಪ್ರಕಟಿಸಿವೆ. ಇನ್ನೊಂದೆಡೆ, ಬಹಿಷ್ಕಾರ ಕ್ರಮಕ್ಕೆ ‘ತಕ್ಕ ಉತ್ತರ ನೀಡಲಾಗುವುದು’ ಎಂದು ಚೀನಾ ಕೂಡ ಅಮೆರಿಕ ಬಣದ ರಾಷ್ಟ್ರಗಳಿಗೆ ಎಚ್ಚರಿಸಿದೆ.

ಬಹಿಷ್ಕಾರ ನಿರ್ಧಾರದ ಬಗ್ಗೆ ಮಿತ್ರ ರಾಷ್ಟ್ರಗಳೊಂದಿಗೆ ಇತ್ತೀಚಿನ ಕೆಲ ತಿಂಗಳಿಂದ ಮಾತುಕತೆ ನಡೆಸಿದ್ದಾಗಿ ಟ್ರುಡೊ ತಿಳಿಸಿದ್ದಾರೆ. ‘ಚೀನಾ ಸರ್ಕಾರದಿಂದ ಪದೇ ಪದೇ ಮಾನವ ಹಕ್ಕುಗಳ ಉಲ್ಲಂಘನ ನಡೆಯುತ್ತಿರುವುದರಿಂದ ನಾವು ತೀವ್ರ ಕಳವಳಗೊಂಡಿದ್ದೇವೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಈ ನಿರ್ಧಾರವು, ಒಲಿಂಪಿಕ್ಸ್‌ಗೆ ಕಳುಹಿಸುವ ಅಥ್ಲೀಟುಗಳ ತಂಡದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದೂ ರಾಜತಾಂತ್ರಿಕ ಬಹಿಷ್ಕಾರ ಹಾಕಿರುವ ರಾಷ್ಟ್ರಗಳು ಹೇಳಿಕೊಂಡಿವೆ.

ಚೀನಾ ವಾಯುವ್ಯ ಭಾಗದ ಕ್ಸಿನ್‌ಝಿಯಾಂಗ್‌ ಪ್ರಾಂತ್ಯದಲ್ಲಿ ಉಯಿಘರ್‌ ಅಲ್ಪಸಂಖ್ಯಾತ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಮಾನವ ಹಕ್ಕು ಸಂಘಟನೆಗಳು ಚಳಿಗಾಲದ ಒಲಿಂಪಿಕ್ಸ್‌ಗೆ ಪೂರ್ಣ ಪ್ರಮಾಣದಲ್ಲಿ ಬಹಿಷ್ಕಾರ ಹಾಕುವಂತೆ ಕರೆ ನೀಡಿವೆ. ಚೀನಾ ಅಲ್ಲಿ ನಡೆಸುತ್ತಿರುವುದು ನರಮೇಧ ಎಂದು ಅವು ಕರೆದಿರುವ ಸಂಘಟನೆಗಳು, ಹಾಂಗ್‌ಕಾಂಗ್‌ನಲ್ಲಿ ಚೀನಾ ಪ್ರಜಾಸತ್ತಾತ್ಮಕ ರೀತಿಯ ಪ್ರತಿಭಟನೆಗಳನ್ನು ಅಡಗಿಸಲು ಕೈಗೊಂಡ ಕ್ರಮಗಳನ್ನೂ ಬೊಟ್ಟು ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.