ADVERTISEMENT

ವಿಶ್ವ ಚೆಸ್‌ ಚಾಂಪಿಯನ್‌ಷಿಪ್: ಹೊಸ ಚಾಂಪಿಯನ್‌ ಉದಯಕ್ಕೆ ವೇದಿಕೆ ಸಜ್ಜು

ವಿಶ್ವ ಚೆಸ್‌ ಕಿರೀಟಕ್ಕಾಗಿ ನೆಪೊಮ್‌ನಿಷಿ– ಲಿರೆನ್‌ ಸೆಣಸಾಟ ನಾಳೆಯಿಂದ

ರಾಯಿಟರ್ಸ್
Published 8 ಏಪ್ರಿಲ್ 2023, 16:21 IST
Last Updated 8 ಏಪ್ರಿಲ್ 2023, 16:21 IST
   

ಅಸ್ತಾನ (ಕಜಕಸ್ತಾನ): ಅಗ್ರಮಾನ್ಯ ಆಟಗಾರ ಮ್ಯಾಗ್ನಸ್‌ ಕಾರ್ಲ್‌ಸನ್‌ ವಿಶ್ವಚಾಂಪಿಯನ್‌ಷಿಪ್‌ನಲ್ಲಿ ಆಡುವುದಿಲ್ಲ ಎಂದು ಘೋಷಿಸಿರುವ ಕಾರಣ ಚೆಸ್‌ ಲೋಕ ಈಗ ಹೊಸ ವಿಶ್ವ ಚಾಂಪಿಯನ್‌ ಆಟಗಾರನನ್ನು ಬರಮಾಡಿಕೊಳ್ಳಲು ಸಜ್ಜಾಗಿದೆ. ಆ ಪಟ್ಟಕ್ಕಾಗಿ ಇಯಾನ್‌ ನೆಪೊಮ್‌ನಿಷಿ ಮತ್ತು ಡಿಂಗ್‌ ಲಿರೆನ್‌ ನಡುವೆ 14 ಪಂದ್ಯಗಳಿರುವ ಫೈನಲ್‌ ಭಾನುವಾರ ಆರಂಭವಾಗಲಿದೆ.

32 ವರ್ಷದ ಕಾರ್ಲ್‌ಸನ್‌ ದಶಕಕ್ಕೂ ಹೆಚ್ಚು ಕಾಲ ಚೆಸ್‌ ಲೋಕವನ್ನು ಆಳಿದ್ದಾರೆ. ನಾಲ್ಕು ಬಾರಿ ವಿಶ್ವ ಚಾಂಪಿಯನ್‌ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. 2021ರಲ್ಲಿ ಕೊನೆಯ ಬಾರಿ ಚಾಂಪಿಯನ್‌ ಆಗುವ ಹಾದಿಯಲ್ಲಿ ನಾರ್ವೆಯ ಈ ಆಟಗಾರ ಸೋಲಿಸಿದ್ದು ರಷ್ಯಾದ ನೆಪೊಮ್‌ನಿಷಿ ಅವರನ್ನು. ಪ್ರೇರಣೆ ಕಳೆದುಕೊಂಡಿರುವ ಕಾರಣ ಮತ್ತೊಮ್ಮೆ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಆಡುವುದಿಲ್ಲ ಎಂದು ಕಾರ್ಲ್‌ಸನ್‌ ಕಳೆದ ವರ್ಷವೇ ಸಾರಿದ್ದರು.

32 ವರ್ಷದ ನೆಪೊಮ್‌ನಿಷಿ ರಷ್ಯಾದವರಾಗಿದ್ದು, ಈಗ ತಟಸ್ಥ ಧ್ವಜದಡಿ ಆಡಲಿದ್ದಾರೆ. ಮೊದಲ ಪಂದ್ಯದಲ್ಲಿ ಅವರಿಗೆ ಬಿಳಿಕಾಯಿಗಳನ್ನು ಮುನ್ನಡೆಸುವ ಅವಕಾಶ ದಕ್ಕಿದೆ. ವಿಜೇತ ಆಟಗಾರನ ಜೇಬಿಗಿಳಿಯುವ ಬಹುಮಾನದ ಮೊತ್ತ ಸುಮಾರು ₹10.79 ಕೋಟಿ.

ADVERTISEMENT

ವಿಶ್ವ ಚಾಂ‍ಪಿಯನ್‌ಗೆ ಸವಾಲಿಗನನ್ನು ನಿರ್ಧರಿಸುವ ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿ ಕಳೆದ ವರ್ಷ ಮ್ಯಾಡ್ರಿಡ್‌ನಲ್ಲಿ ನಡೆದಿದ್ದು, ವಿಶ್ವದ ಎರಡನೇ ಕ್ರಮಾಂಕದ ಆಟಗಾರ ನೆಪೊಮ್‌ನಿಷಿ ಒಂದು ಸುತ್ತು ಉಳಿದಿರುವಂತೆಯೇ ವಿಜೇತರಾಗಿದ್ದರು. ಈ ಸಲ ಹಾಲಿ ಚಾಂಪಿಯನ್‌ ಆಡದ ಕಾರಣ, ಕ್ಯಾಂಡಿಡೇಟ್ಸ್ ಟೂರ್ನಿಯ ರನ್ನರ್‌ ಅಪ್‌ ಆಗಿದ್ದ ಮೂರನೇ ಕ್ರಮಾಂಕದ ಆಟಗಾರ ಲಿರೆನ್‌ ಅವರೂ ಫೈನಲ್‌ನಲ್ಲಿ ಆಡುವ ಅವಕಾಶ ಪಡೆದಿದ್ದಾರೆ. ಈ ಇಬ್ಬರೂ ಇದುವರೆಗೆ ವಿಶ್ವ ಚಾಂಪಿಯನ್‌ ಆಗಿಲ್ಲ. ಈ ರೀತಿಯ ವಿದ್ಯಮಾನ ನಡೆದಿರುವುದು ಇದೇ ಮೊದಲು.

ಚಾಂಪಿಯನ್‌ ಆಟಗಾರನೊಬ್ಬ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಆಡದೇ ಇದ್ದ ನಿದರ್ಶನ ಕೊನೆಯ ಬಾರಿ ನಡೆದಿದ್ದು 1975ರಲ್ಲಿ. ಆಗ ಅಮೆರಿಕದ ಬಾಬಿ ಫಿಷರ್‌, ಫಿಡೆ ಜೊತೆ ಭಿನ್ನಾಭಿಪ್ರಾಯದ ಕಾರಣ ಅನಾತೊಲಿ ಕಾರ್ಪೋವ್‌ ವಿರುದ್ಧ ಫೈನಲ್‌ ಆಡಲು ನಿರಾಕರಿಸಿದ್ದರು. ಹೀಗಾಗಿ ಫಿಡೆ, ಅಂದಿನ ಸೋವಿಯತ್‌ ಯೂನಿಯನ್‌ನ ಕಾರ್ಪೋವ್‌ ಅವರಿಗೆ ಚಾಂಪಿಯನ್‌ ಪಟ್ಟ ನೀಡಿತ್ತು.

15 ವರ್ಷಗಳ ಕಾಲ, 1985ರಿಂದ 2000ವರೆಗೆ ವಿಶ್ವ ಚಾಂಪಿಯನ್‌ ಆಗಿದ್ದ ಗ್ಯಾರಿ ಕ್ಯಾಸ್ಪರೋವ್ ಅವರು ನೆಪೊಮ್‌ನಿಷಿ– ಲಿರೆನ್‌ ನಡುವಣ ಸೆಣಸಾಟವನ್ನು ‘ಊನಗೊಂಡ ಸ್ಪರ್ಧೆ’ ಎಂದು ಕರೆದಿದ್ದಾರೆ. ಆದರೆ ದೊಡ್ಡ ಮಟ್ಟದ ಪೈಪೋಟಿ ಏರ್ಪಡಬಹುದು ಎಂಬ ಮಾತನ್ನೂ ಒಪ್ಪಿಕೊಳ್ಳುತ್ತಾರೆ.

‘ವಿಶ್ವ ಚಾಂಪಿಯನ್‌, ವಿಶ್ವದ ಅತ್ಯಂತ ಪ್ರಬಲ ಆಟಗಾರನನ್ನು ಒಳಗೊಂಡಿರಬೇಕು. ಇಲ್ಲಿ ಅಂಥದ್ದು ನಡೆದಿಲ್ಲವಲ್ಲ’ ಎನ್ನುತ್ತಾರೆ ರಷ್ಯಾದ ಆಟಗಾರ.

2007ರಲ್ಲಿ ವ್ಲಾದಿಮಿರ್‌ ಕ್ರಾಮ್ನಿಕ್‌ ವಿಶ್ವ ಚಾಂಪಿಯನ್‌ ಕಿರೀಟ ಕಳೆದುಕೊಂಡ ನಂತರ, ರಷ್ಯಾದ ಯಾವ ಆಟಗಾರನೂ ಚಾಂಪಿಯನ್‌ ಆಗಿಲ್ಲ. ಡಿಂಗ್‌ ಲಿರೆನ್‌ ಗೆದ್ದರೆ, ಪುರುಷರ ಮತ್ತು ಮಹಿಳೆಯರ ವಿಶ್ವ ಕಿರೀಟಗಳು ರಷ್ಯಾ ಪಾಲಾಗಲಿವೆ. ಹಾಲಿ ಚಾಂಪಿಯನ್‌ ರಷ್ಯಾದ ಜು ವೆನ್‌ಜುವಾನ್ ಮಹಿಳೆಯರ ವಿಶ್ವ ಕಿರೀಟಕ್ಕಾಗಿ ಜುಲೈನಲ್ಲಿ ಸ್ವದೇಶದ ಲೀ ಟಿಂಗ್ಜಿ ಅವರನ್ನು ಎದುರಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.