ADVERTISEMENT

ಗಿರೀಶ್‌ ಕೌಶಿಕ್‌ಗೆ ಗ್ರ್ಯಾಂಡ್‌ಮಾಸ್ಟರ್‌ ಗೌರವ

ಮೈಸೂರಿನ ಆಟಗಾರನ ಅಮೋಘ ಸಾಧನೆ; ಅಧಿಕೃತ ಘೋಷಣೆಯೊಂದೇ ಬಾಕಿ

ಕೆ.ಓಂಕಾರ ಮೂರ್ತಿ
Published 25 ಜೂನ್ 2019, 20:15 IST
Last Updated 25 ಜೂನ್ 2019, 20:15 IST
ಗಿರೀಶ್‌ ಕೌಶಿಕ್‌
ಗಿರೀಶ್‌ ಕೌಶಿಕ್‌   

ಮೈಸೂರು: ಚೆಸ್‌ ಪ್ರತಿಭೆ ಮೈಸೂರಿನ ಗಿರೀಶ್‌ ಎ.ಕೌಶಿಕ್‌ ಅವರು ಗ್ರ್ಯಾಂಡ್‌ಮಾಸ್ಟರ್‌ (ಜಿ.ಎಂ) ಗೌರವಕ್ಕೆ ಪಾತ್ರರಾಗಿದ್ದಾರೆ.

ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಈಚೆಗೆ ನಡೆದ ‘ಬುಡಾಪೆಸ್ಟ್‌ ಗ್ರ್ಯಾಂಡ್‌ಮಾಸ್ಟರ್‌ ಚೆಸ್‌ ಚಾಂಪಿಯನ್‌ಷಿಪ್‌’ನಲ್ಲಿ ಅವರು ಈ ಪಟ್ಟಕ್ಕೆ ಅಗತ್ಯವಿದ್ದ ಮೂರನೇ ಗ್ರ್ಯಾಂಡ್‌ಮಾಸ್ಟರ್‌ ನಾರ್ಮ್‌ ಪೂರೈಸಿದ್ದಾರೆ. ಅಲ್ಲದೇ, ಮತ್ತೊಂದು ಟೂರ್ನಿಯಲ್ಲಿ ಆಡಿ ಈ ಸಾಧನೆ ಮಾಡಲು ಅಗತ್ಯವಿದ್ದ 2,500 ಇಎಲ್‌ಒ ರೇಟಿಂಗ್‌ ಕಲೆಹಾಕಿದ್ದಾರೆ.

ಗ್ರ್ಯಾಂಡ್‌ಮಾಸ್ಟರ್‌ ಪಟ್ಟ ಪಡೆದ ಕರ್ನಾಟಕದ ಮೂರನೇ ಮತ್ತು ಭಾರತದ 63ನೇ ಸ್ಪರ್ಧಿ ಎಂಬ ಗೌರವ ಅವರಿಗೆ ಒಲಿದಿದೆ. ಅವರೀಗ ಒಟ್ಟು 2,501 ಇಎಲ್‌ಒ ರೇಟಿಂಗ್‌ ಹೊಂದಿದ್ದಾರೆ. ಮುಂದಿನ ವಾರ ಫಿಡೆ ರೇಟಿಂಗ್ ಪಟ್ಟಿ ಪರಿಷ್ಕೃತಗೊಳ್ಳಲಿದ್ದು, ಸದ್ಯದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ.

ADVERTISEMENT

‘ಚೆಸ್‌ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಬೇಕೆಂಬ ಕನಸು ಕಟ್ಟಿಕೊಂಡಿದ್ದೇನೆ. ಆ ಹಾದಿಯಲ್ಲಿ ಈಗ ಮೊದಲ ಯಶಸ್ಸು ಸಿಕ್ಕಿದೆ. ಕಷ್ಟದ ಹಾದಿಯಲ್ಲಿ ಸಾಗಿ ಗ್ರ್ಯಾಂಡ್‌ಮಾಸ್ಟರ್‌ ಗೌರವ ಗಿಟ್ಟಿಸಿಕೊಂಡಿದ್ದೇನೆ. ಮುಂದಿನ ಹೆಜ್ಜೆ ಇಡಲು ಈ ಸಾಧನೆ ಸ್ಫೂರ್ತಿಯಾಗಲಿದೆ. ಇನ್ನೂ ದೊಡ್ಡ ಸಾಧನೆ ಮಾಡಬೇಕು. ಅದಕ್ಕೆ ಬೆಂಬಲವೂ ಅಗತ್ಯವಿದೆ’ ಎಂದು ಗಿರೀಶ್‌ ಕೌಶಿಕ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

2017ರ ಸೆಪ್ಟೆಂಬರ್‌ನಲ್ಲಿ ಗ್ರ್ಯಾಂಡ್‌ಮಾಸ್ಟರ್‌ ಪಟ್ಟಕ್ಕೇರಿದ್ದ ಮೈಸೂರಿನವರೇ ಆದ ತೇಜ್‌ಕುಮಾರ್‌ ಈ ಸಾಧನೆ ಮಾಡಿದ ರಾಜ್ಯದ ಮೊದಲ ಆಟಗಾರ. ಆ ಬಳಿಕ ಶಿವಮೊಗ್ಗದ ಜಿ.ಎ.ಸ್ಟ್ಯಾನಿ ಈ ಗೌರವ ಪಡೆದಿದ್ದರು.

2,444 ಇಎಲ್‌ಒ ರೇಟಿಂಗ್‌ ಹೊಂದಿದ್ದ ಕೌಶಿಕ್‌ ಕಳೆದ ಎರಡು ತಿಂಗಳಿನಿಂದ ಯೂರೋಪ್‌ನಲ್ಲಿ ವಿವಿಧ ಟೂರ್ನಿಗಳಲ್ಲಿ ಆಡುತ್ತಿದ್ದಾರೆ. ಸ್ಪೇನ್‌ ಹಾಗೂ ಹಂಗೇರಿಯಲ್ಲಿ ನಡೆದ ಮೂರು ಟೂರ್ನಿಗಳಲ್ಲಿ 57 ಇಎಲ್‌ಒ ಪಾಯಿಂಟ್‌ ಪಡೆದಿದ್ದಾರೆ.

ವಿಶ್ವ ಯೂತ್‌ ಹಾಗೂ ಏಷ್ಯನ್‌ ಯೂತ್‌ ಚೆಸ್‌ ಟೂರ್ನಿಗಳಲ್ಲಿ ಚಾಂಪಿಯನ್ ಆಗಿ ಸಂಚಲನ ಮೂಡಿಸಿದ್ದ ಕೌಶಿಕ್‌, ಆರ್ಥಿಕ ತೊಂದರೆಯಿಂದಾಗಿ ಹಲವು ವರ್ಷ ಯಾವುದೇ ಟೂರ್ನಿಯಲ್ಲಿ ಪಾಲ್ಗೊಂಡಿರಲಿಲ್ಲ. ಬದಲಾಗಿ ವ್ಯಾಸಂಗಕ್ಕೆ ಆದ್ಯತೆ ನೀಡಿದ್ದರು. ಅವರು 2011ರಲ್ಲೇ ಮೊದಲ ಗ್ರ್ಯಾಂಡ್‌ಮಾಸ್ಟರ್‌ ನಾರ್ಮ್‌ ಪೂರೈಸಿದ್ದರು. 2017ರಿಂದ ಮತ್ತೆ ಚೆಸ್‌ ಆಟದಲ್ಲಿ ಸಕ್ರಿಯರಾಗಿದ್ದಾರೆ.

ಬೆಂಗಳೂರಿನ ಆರ್‌.ವಿ.ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಪದವಿ ಮುಗಿಸಿರುವ ಅವರೀಗ ಉದ್ಯೋಗದಲ್ಲಿದ್ದಾರೆ.

ಗಿರೀಶ್‌ ಸಾಧನೆಯ ಹೆಜ್ಜೆಗಳು...

* ಏಷ್ಯನ್ ಯೂತ್‌ ಚೆಸ್‌ ಟೂರ್ನಿಗಳಲ್ಲಿ ಐದು ಚಿನ್ನದ ಪದಕ

* 10 ವರ್ಷದೊಳಗಿನವರ ವಿಶ್ವ ಯೂತ್‌ ಚೆಸ್‌ ಟೂರ್ನಿಯಲ್ಲಿ ಚಾಂಪಿಯನ್‌

* 14 ವರ್ಷದೊಳಗಿನವರ ಕಾಮನ್‌ವೆಲ್ತ್‌ ಚೆಸ್‌ ಟೂರ್ನಿಯಲ್ಲಿ ಚಿನ್ನ

* ಅಂತರರಾಷ್ಟ್ರೀಯ ಓಪನ್‌ ಫಿಡೆ ರೇಟೆಡ್‌ ಚೆಸ್‌ ಟೂರ್ನಿಯಲ್ಲಿ ಪ್ರಶಸ್ತಿ

* ‘ಬುಡಾಪೆಸ್ಟ್‌ ಗ್ರ್ಯಾಂಡ್‌ಮಾಸ್ಟರ್‌ ಚೆಸ್‌ ಚಾಂಪಿಯನ್‌ಷಿಪ್‌’ನಲ್ಲಿ ಅಗ್ರಸ್ಥಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.