ADVERTISEMENT

ಚೆಸ್ ವಿಶ್ವಕಪ್‌: ಸೋತ ಅರ್ಜುನ್, ಭಾರತದ ಸವಾಲು ಅಂತ್ಯ

ಪಿಟಿಐ
Published 19 ನವೆಂಬರ್ 2025, 16:21 IST
Last Updated 19 ನವೆಂಬರ್ 2025, 16:21 IST
ಗೆದ್ದ ವೀ ಯಿ ಅವರಿಗೆ ಹಸ್ತಲಾಘವ ನೀಡಿದ ಅರ್ಜುನ್ ಇರಿಗೇಶಿ
ಫಿಡೆ ಚಿತ್ರ
ಗೆದ್ದ ವೀ ಯಿ ಅವರಿಗೆ ಹಸ್ತಲಾಘವ ನೀಡಿದ ಅರ್ಜುನ್ ಇರಿಗೇಶಿ ಫಿಡೆ ಚಿತ್ರ   

ಪಣಜಿ: ಭಾರತದ ಕೊನೆಯ ಭರವಸೆಯಾಗಿದ್ದ ಗ್ರ್ಯಾಂಡ್‌ಮಾಸ್ಟರ್ ಅರ್ಜುನ್ ಇರಿಗೇಶಿ ಅವರು ವಿಶ್ವಕಪ್‌ನಿಂದ ಹೊರಬಿದ್ದರು. ಚೀನಾದ ಆಟಗಾರ ವೀ ಯಿ ಅವರು ಬುಧವಾರ ನಡೆದ ಮೊದಲ ಸೆಟ್‌  ಟೈಬ್ರೇಕರ್‌ ನಂತರ 2.5–1.5 ರಿಂದ ಎರಡನೇ ಶ್ರೇಯಾಂಕದ ಅರ್ಜುನ್ ಅವರನ್ನು ಸೋಲಿಸಿ ಸೆಮಿಫೈನಲ್‌ಗೇರಿದರು. ಇದರೊಂದಿಗೆ ಟೂರ್ನಿಯಲ್ಲಿ ಆತಿಥೇಯ ಭಾರತದ ಸವಾಲು ಎಂಟರ ಘಟ್ಟದಲ್ಲೇ  ಅಂತ್ಯಕಂಡಿತು.

ಫಿಡೆ ಕ್ರಮಾಂಕಪಟ್ಟಿಯಲ್ಲಿ 11ನೇ ಕ್ರಮಾಂಕದಲ್ಲಿರುವ ಚೀನಾದ ಆಟಗಾರ, ಟೈಬ್ರೇಕರ್‌ನ ಮೊದಲ ಆಟದಲ್ಲಿ ಆರನೇ ಕ್ರಮಾಂಕದ ಅರ್ಜುನ್ ಅವರನ್ನು ಒತ್ತಡಕ್ಕೆ ಸಿಲುಕಿಸಿದರು. ಕಂಪ್ಯೂಟರ್‌ಗಳ ವಿಶ್ಲೇಷಣೆಯಲ್ಲಿ, ವೀ ಅವರೇ ಸ್ಪಷ್ಟ ಮೇಲುಗೈ ಸಾಧಿಸಿದ್ದು ಕಂಡುಬಂತು. ಆದರೆ 22 ವರ್ಷ ವಯಸ್ಸಿನ ಅರ್ಜುನ್ ಪ್ರತಿರೋಧ ತೋರಿ 66 ನಡೆಗಳಲ್ಲಿ ಆಟ ಡ್ರಾ ಮಾಡುವಲ್ಲಿ ಯಶಸ್ವಿಯಾದರು.

ಎರಡನೇ ಆಟದಲ್ಲಿ ಬಿಳಿಕಾಯಿಗಳಲ್ಲಿ ಆಡಿದ ಅರ್ಜುನ್‌ಗೆ ಹಿಡಿತ ಪಡೆಯಲಾಗಲಿಲ್ಲ. ಅವರು ಎದುರಾಳಿಯ ದುರ್ಬಲ ಪಡೆಯೊಂದಕ್ಕೆ ಬದಲಾಗಿ ಪ್ರಬಲ ರೂಕ್‌ ಕಳೆದುಕೊಂಡರು. ಮಧ್ಯಮ ಹಂತದ ಆಟದಲ್ಲಿ ಆರನೇ ರ‍್ಯಾಂಕ್‌ನಲ್ಲಿದ್ದ ವೀ ಯಿ ಅವರ ಬಿಳಿ ಬಿಷಪ್‌, ಅರ್ಜುನ್ ಅವರಿಗೆ ಸಾಕಷ್ಟು ತಲೆನೋವು ತಂದೊಡ್ಡಿತು. 79ನೇ ನಡೆಯಲ್ಲಿ ಅರ್ಜುನ್ ಚೆಕ್‌ಮೇಟ್‌ಗೆ ಒಳಗಾದರು.

ADVERTISEMENT

26 ವರ್ಷ ವಯಸ್ಸಿನ ವೀ ಸೆಮಿಫೈನಲ್ ಪಂದ್ಯದಲ್ಲಿ ‘ಫಿಡೆ’ಯನ್ನು ಪ್ರತಿನಿಧಿಸುತ್ತಿರುವ ರಷ್ಯಾದ ಆಟಗಾರ ಆ್ಯಂಡ್ರಿ ಇಸಿಪೆಂಕೊ ಅವರನ್ನು ಎದುರಿಸಲಿದ್ದಾರೆ.

ಉಜ್ಬೇಕಿಸ್ತಾನದ ಆಟಗಾರರ ವ್ಯವಹಾರವಾಗಿರುವ ಇನ್ನೊಂದು ಸೆಮಿಫೈನಲ್‌ನಲ್ಲಿ ನೊದಿರ್ಬೆಕ್‌ ಯಾಕುಬೊಯೇವ್ ಅವರು 19 ವರ್ಷ ವಯಸ್ಸಿನ ಜಾವೊಖಿರ್ ಸಿಂದರೋವ್ ಅವರನ್ನು ಎದುರಿಸಲಿದ್ದಾರೆ. ಈ ಟೂರ್ನಿಯಲ್ಲಿ ಮೊದಲ ಮೂರು ಸ್ಥಾನ ಗಳಿಸುವ ಆಟಗಾರರು ಕ್ಯಾಂಡಿಡೇಟ್ಸ್‌ ಟೂರ್ನಿಗೆ ಅರ್ಹತೆ ಪಡೆಯುವುದರಿಂದ ಅವರಲ್ಲಿ ಒಬ್ಬರು ಉಜ್ಬೇಕ್ ಆಟಗಾರನಿರುವುದು ಖಚಿತವಾಗಿದೆ.

23 ವರ್ಷ ವಯಸ್ಸಿನ ಇಸಿಪೆಂಕೊ ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ 34 ವರ್ಷ ವಯಸ್ಸಿನ ಸ್ಯಾಮ್‌ ಶಂಕ್ಲಾಂಡ್‌ (ಅಮೆರಿಕ) ಅವರನ್ನು 4–2 ರಿಂದ ಸೋಲಿಸಿದರು. ಮೊದಲ ಸೆಟ್‌ ಟೈಬ್ರೇಕಿನಲ್ಲಿ ಇಬ್ಬರೂ ಒಂದೊಂದು ಆಟ ಗೆದ್ದರು. ಇನ್ನೊಂದು ಸೆಟ್‌ನ ಎರಡೂ ಆಟಗಳಲ್ಲಿ ಇಸಿಪೆಂಕೊ ಗೆದ್ದರು.

ಎಂಟರ ಘಟ್ಟದ ಮತ್ತೊಂದು ಪಂದ್ಯದಲ್ಲಿ ಉಜ್ಬೇಕಿಸ್ತಾನದ ಜಾವೊಖಿರ್ ಸಿಂದರೋವ್‌ 3.5–2.5 ರಿಂದ ಮೆಕ್ಸಿಕೊದ ಹೊಸೆ ಎಡುವಾರ್ಡೊ ಮಾರ್ಟಿನೆಝ್ ಅಲ್ಕಂತಾರ ಅವರನ್ನು ಸೋಲಿಸಿದರು.

ಒಬ್ಬರಿಗಷ್ಟೇ ಅರ್ಹತೆ:

ಅರ್ಜುನ್ ಸೋಲಿನೊಡನೆ, ಮುಂದಿನ ವರ್ಷದ ಕ್ಯಾಂಡಿಡೇಟ್ಸ್‌ಗೆ ಭಾರತದ ಒಬ್ಬರಷ್ಟೇ ಆಡುವುದು ಖಚಿತವಾಗಿದೆ. 2025ರ ಪ್ರಮುಖ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಕಾರಣ ಪ್ರಜ್ಞಾನಂದ ಆರ್‌. ಅವರು ಅರ್ಹತೆ ಪಡೆಯುವುದು ನಿಚ್ಚಳವಾಗಿದೆ.

ವಿಶ್ವ ಚಾಂಪಿಯನ್‌ಗೆ ಸವಾಲು ಹಾಕುವ ಆಟಗಾರರನನ್ನು ನಿರ್ಧರಿಸಲು ನಡೆಯುವ ಕ್ಯಾಂಡಿಡೇಟ್ಸ್‌ನಲ್ಲಿ ಎಂಟು ಮಂದಿಗಷ್ಟೇ ಆಡುವ ಅವಕಾಶವಿದೆ.

ಸೆಮಿಫೈನಲ್ ಮುಖಾಮುಖಿ ಯಾಕುಬೊಯೇವ್ (37) – ಸಿಂದರೋವ್ (25) ವೀ ಯಿ (11)– ಆ್ಯಂಡ್ರಿ ಇಸಿಪೆಂಕೊ (41) (ಆವರಣದಲ್ಲಿರುವುದು ವಿಶ್ವ ಕ್ರಮಾಂಕ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.