ಕೋನೇರು ಹಂಪಿ
ಪಿಟಿಐ ಚಿತ್ರ
ಬಟುಮಿ: ಕುತೂಹಲಕರ ಟೈಬ್ರೇಕರ್‌ನ ಕೊನೆಯ ಎರಡು ಬ್ಲಿಟ್ಜ್ ಗೇಮ್‌ಗಳಲ್ಲಿ ಜಯಶಾಲಿಯಾದ ಭಾರತದ ಗ್ರ್ಯಾಂಡ್ ಮಾಸ್ಟರ್ ಕೋನೇರು ಹಂಪಿ ಗುರುವಾರ 5–3 ರಿಂದ ಚೀನಾದ ಟಿಂಗ್ಜೀ ಲೀ ಅವರನ್ನು ಪರಾಭವಗೊಳಿಸಿ ಫಿಡೆ ಮಹಿಳಾ ಚೆಸ್ ವಿಶ್ವಕಪ್ ಫೈನಲ್ ತಲುಪಿದರು. ಇದರೊಂದಿಗೆ ಫೈನಲ್ ಭಾರತದ ಆಟಗಾರ್ತಿಯರ ವ್ಯವಹಾರವಾಯಿತು.
ಆಂಧ್ರ ಪ್ರದೇಶದ ಗುಡಿವಾಡದ 38 ವರ್ಷ ವಯಸ್ಸಿನ ಹಂಪಿ ಶನಿವಾರ ಆರಂಭವಾಗುವ ಐತಿಹಾಸಿಕ ಫೈನಲ್ ನಲ್ಲಿ ನಾಗ್ಪುರದ ಯುವ ಆಟಗಾರ್ತಿ, 19 ವರ್ಷ ವಯಸ್ಸಿನ ದಿವ್ಯಾ ದೇಶಮುಖ್ ಅವರನ್ನು ಎದುರಿಸಲಿದ್ದಾರೆ.
ಹಂಪಿ ಮತ್ತು ಟಿಂಗ್ಜೀ ನಡುವಣ ಎರಡು ಕ್ಲಾಸಿಕಲ್ ಪಂದ್ಯ ಡ್ರಾ ಆಗಿ ಸ್ಕೋರ್ 1–1 ಸಮನಾಗಿತ್ತು. ಗುರುವಾರ 15 ನಿಮಿಷಗಳ ರ್‍ಯಾಪಿಡ್ ಟೈಬ್ರೇಕ್‌ನ ಮೊದಲ ಎರಡು ಪಂದ್ಯಗಳು ಸಹ ಡ್ರಾ ಆದವು. ಮೂರನೇ ಪಂದ್ಯದಲ್ಲಿ ಟಿಂಗ್ಜೀ ಗೆದ್ದರು. ಆದರೆ ಒತ್ತಡದಲ್ಲೂ ಧೃತಿಗಡದೇ ಆಡಿದ ಹಂಪಿ ನಾಲ್ಕನೇ ಪಂದ್ಯ 52 ನಡೆಗಳಲ್ಲಿ ಗೆದ್ದೇಬಿಟ್ಟರು. ಸ್ಕೋರ್ 3–3 ರಲ್ಲಿ ಸಮನಾಯಿತು.
ಹೀಗಾಗಿ ನಿಯಮದಂತೆ ಬ್ಲಿಟ್ಝ್ ಪಂದ್ಯಗಳನ್ನು ಆಡಿಲಾಯಿತು. ಮೊದಲ ಪಂದ್ಯದಲ್ಲಿ ತಾಂತ್ರಿಕ ನೈಪುಣ್ಯ ತೋರಿದ ಹಂಪಿ ಸುಲಭವಾಗಿ ಗೆದ್ದರು. ಹೀಗಾಗಿ ಅವರಿಗೆ ಟಿಂಗ್ಜೀ ವಿರುದ್ಧ ಕೊನೆಯ ಪಂದ್ಯ ಡ್ರಾ ಮಾಡಿಕೊಂಡರೂ ಸಾಕಿತ್ತು. ಆದರೆ ಅವರು ಉತ್ತಮ ಕೌಶಲ ಮೆರೆದು ಆ ಪಂದ್ಯವನ್ನೂ ಗೆದ್ದು ಅರ್ಹ ರೀತಿಯಲ್ಲೇ ಫೈನಲ್ ತಲುಪಿದರು.
ದಿವ್ಯಾ ಅವರಂತೆ ಹಂಪಿ ಸಹ ಸೆಮಿಫೈನಲ್ ಗೆಲುವಿನಿಂದ ಮುಂದಿನ ವರ್ಷ ನಡೆಯಲಿರುವ ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಆಡುವ ಅರ್ಹತೆಯನ್ನು ಸಂಪಾದಿಸಿದರು. ವಿಶ್ವ ಚಾಂಪಿಯನ್‌ಗೆ ಸವಾಲು ಹಾಕುವ ಆಟಗಾರ್ತಿಯನ್ನು ನಿರ್ಧರಿಸಲು ನಡೆಯುವ ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಎಂಟು ಮಂದಿ ಮಾತ್ರ ಅರ್ಹತೆ ಪಡೆಯುತ್ತಾರೆ.
ಸೆಮಿಫೈನಲ್‌ನಲ್ಲಿ ಸೋತ ಚೀನಾದ ಆಟಗಾರ್ತಿಯರಾದ ತಾನ್ ಝೊಂಗ್ವಿ ಅವರು ಟಿಂಗ್ಜೀ ಲೀ ಅವರು ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ ಮುಖಾಮುಖಿ ಆಗಲಿದ್ದಾರೆ. ಝೊಂಗ್ವಿ ಮೊದಲ ಸೆಮಿಫೈನಲ್ ನಲ್ಲಿ ಭಾರತ ಐಎಂ ಆಟಗಾರ್ತಿ ದಿವ್ಯಾ ಎದುರು ಸೋತಿದ್ದರು. ವಿಶ್ವಕಪ್‌ನಲ್ಲಿ ಮೊದಲ ಮೂರು ಸ್ಥಾನ ಪಡೆದವರು ಕ್ಯಾಂಡಿಡೇಟ್ಸ್‌ಗೆ ಅರ್ಹತೆ ಪಡೆಯುವ ಕಾರಣ ಈ ಸೆಣಸಾಟ ಗೆದ್ದ ಆಟಗಾರ್ತಿ ಸಹ ಆ ಟೂರ್ನಿಗೆ ಅರ್ಹತೆ ಪಡೆಯುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.