ADVERTISEMENT

ಡೋಪಿಂಗ್ ಖಚಿತ: ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಚೀನಾ ಈಜುಪಟುಗಳು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2024, 20:55 IST
Last Updated 20 ಏಪ್ರಿಲ್ 2024, 20:55 IST
.
.   

ನ್ಯೂಯಾರ್ಕ್: ಚೀನಾದ 23 ಈಜುಪಟುಗಳು ನಿಷೇಧಿತ ಉದ್ದೀಪನ ಮದ್ದು ಸೇವಿಸಿದ್ದು ದೃಢಪಟ್ಟಿದ್ದರೂ 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅವರಿಗೆ ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು. ಈಜುಪಟುಗಳು ಮದ್ದು ಸೇವನೆ ಮಾಡಿದ್ದ ಕುರಿತು ಚೀನಾ ನೀಡಿದ್ದ ವರದಿಗಳನ್ನು ವಿಶ್ವ ಕ್ರೀಡಾ ಫೆಡರೇಷನ್‌ಗಳು  ಗೌಪ್ಯವಾಗಿ ಒಪ್ಪಿಕೊಂಡಿದ್ದವು ಎಂದು ನ್ಯೂಯಾರ್ಕ್ ಟೈಮ್ಸ್‌ ಪತ್ರಿಕೆ ಶನಿವಾರ ವರದಿ ಮಾಡಿದೆ.  

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚೀನಾದ 30 ಈಜುಪಟುಗಳ ತಂಡವು 3 ಚಿನ್ನ ಸೇರಿದಂತೆ ಆರು ಪದಕಗಳನ್ನು ಗೆದ್ದಿತ್ತು. ಅವರಲ್ಲಿ ಕೆಲವು ಈಜುಪಟುಗಳು ಮುಂಬರುವ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿಯೂ ಸ್ಪರ್ಧಿಸುವ ಸಾಧ್ಯತೆ ಇದೆ.  2020ರ ಕೊನೆ ಮತ್ತು 2021ರ ಆರಂಭದಲ್ಲಿ ನಡೆದ ದೇಶಿ ಕ್ರೀಡಾಕೂಟದ ವೇಳೆ ದೇಹದ ಸಾಮರ್ಥ್ಯ ಹೆಚ್ಚಿಸುವ ನಿಷೇಧಿತ ಮದ್ದು ಸೇವಿಸಿರುವುದು ಪರೀಕ್ಷೆಯಿಂದ ದೃಢಪಟ್ಟಿತ್ತು ಎಂದು ಪತ್ರಿಕೆ ವರದಿ ಮಾಡಿದೆ.

‘ಕ್ರೀಡಾಪಟುಗಳು ತಿಳಿಯದೆ ನಿಷೇಧಿತ ಮದ್ದು ಸೇವಿಸಿದ್ದರು. ಆದ್ದರಿಂದ ಅವರ ವಿರುದ್ಧ ಯಾವುದೇ ಕ್ರಮದ ಅಗತ್ಯವಿಲ್ಲ‘ ಎಂದು ಚೀನಾದ ಉದ್ದೀಪನ ಮದ್ದು ತಡೆ ಘಟಕದ ಅಧಿಕಾರಿಗಳು ವರದಿ ನೀಡಿದ್ದರು. ಚೀನಾದ ಡೋಪಿಂಗ್ ವಿರೋಧಿ ಸಂಸ್ಥೆ ಸಂಗ್ರಹಿಸಿದ ಮತ್ತು ವಾಡಾಗೆ ಸಲ್ಲಿಸಿದ ವರದಿ ಸೇರಿದಂತೆ ಗೌಪ್ಯ ದಾಖಲೆಗಳು ಮತ್ತು ಇಮೇಲ್‌ಗಳ ಪರಿಶೀಲನೆಯನ್ನು ಟೈಮ್ಸ್ ಉಲ್ಲೇಖಿಸಿದೆ.

ADVERTISEMENT

ಈಜುಪಟುಗಳಿಗೆ ಅನುಮತಿ (ಸಿಡ್ನಿ ವರದಿ): ಉದ್ದೀಪನ ಮದ್ದು ಸೇವಿಸಿದ್ದ ಚೀನಾದ 23 ಈಜುಪಟುಗಳಿಗೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಅನುಮತಿ ನೀಡಲಾಗಿತ್ತು ಎಂದು ವಾಡಾ ಹೇಳಿದೆ. ಏಕೆಂದರೆ ಚೀನಾದ ಅಧಿಕಾರಿಗಳಿಂದ ಪಡೆದುಕೊಂಡ ಮಾದರಿಗಳು ಸೂಕ್ತವಾಗಿಲ್ಲ ಎಂದು ತಿಳಿಸಿದೆ.

ಹೃದಯದ ಚಿಕಿತ್ಸೆಗೆ ನೀಡುವ ಔಷಧಿ ಟ್ರಿಮೆಟಾಜಿಡಿನ್‌ ಅನ್ನು ಈಜುಪಟುಗಳು ಸೇವಿಸಿರುವುದು ದೃಢಪಟ್ಟಿತ್ತು ಎಂದು ವಾಡಾ ಶನಿವಾರ ಹೇಳಿದೆ. ಆದರೆ    ಮಾದರಿಗಳು ಕಲುಷಿತಗೊಂಡಿತು ಎಂದು ಚೀನಾ ಅಧಿಕಾರಿಗಳು ಹೇಳಿದ್ದರು ಎಂದಿದೆ. 

‘ಅಂತಿಮವಾಗಿ ಮಾದರಿಗಳ ಬಗ್ಗೆ ಪ್ರಶ್ನಿಸಲು ಯಾವುದೇ ದೃಢವಾದ ಆಧಾರವಿಲ್ಲ ಎಂದು  ನಾವು ತೀರ್ಮಾನಿಸಿದೆವು’ ಎಂದು ವಾಡಾದ  ಹಿರಿಯ ನಿರ್ದೇಶಕ ಒಲಿವಿಯರ್ ರಾಬಿನ್  ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.