ADVERTISEMENT

ರವಿಚಂದ್ರ, ದಿನಚಂದ್ರ ಸಿಂಗ್‌ಗೆ ಚಿಂಗ್ಲೆನ್ಸಾನ, ಹರ್ಮನ್‌ಪ್ರೀತ್‌ ಮಾದರಿ

ಪಿಟಿಐ
Published 31 ಜುಲೈ 2020, 9:37 IST
Last Updated 31 ಜುಲೈ 2020, 9:37 IST
ಗೋಲು ಗಳಿಸಿ ಸಂಭ್ರಮಿಸಿದ ಹರ್ಮನ್‌ಪ್ರೀತ್ ಸಿಂಗ್ –ಪಿಟಿಐ ಚಿತ್ರ
ಗೋಲು ಗಳಿಸಿ ಸಂಭ್ರಮಿಸಿದ ಹರ್ಮನ್‌ಪ್ರೀತ್ ಸಿಂಗ್ –ಪಿಟಿಐ ಚಿತ್ರ   

ನವದೆಹಲಿ: 'ಹಾಕಿ ಕಣದಲ್ಲಿ ಮಿಂಚಬೇಕೆಂಬ ಬಯಕೆ ಇರುವ ಯಾವುದೇ ಆಟಗಾರನ ಮೇಲೆ ಪರಿಣಾಮ ಬೀರುವ ಮತ್ತು ಪ್ರೇರಕ ಶಕ್ತಿಯಾಗುವ ವ್ಯಕ್ತಿತ್ವಗಳು ಚಿಂಗ್ಲೆನ್ಸಾನ ಸಿಂಗ್ ಕಂಗುಜಮ್ ಮತ್ತು ಹರ್ಮನ್‌ಪ್ರೀತ್‌ ಸಿಂಗ್...’ ಭಾರತ ಹಾಕಿ ತಂಡವನ್ನು ಸೇರಲು ತುದಿಗಾಲಲ್ಲಿ ನಿಂತಿರುವ ಜೂನಿಯರ್ ತಂಡದ ಆಟಗಾರರಾದ ರವಿಚಂದ್ರ ಸಿಂಗ್ ಮೊಯಿರಂಗ್‌ಥೆಮ್ ಮತ್ತು ದಿನಚಂದ್ರ ಸಿಂಗ್ ಮೊಯಿರಂಗ್‌ಥೆಮ್ ಆಡಿದ ಮಾತು ಇದು.

2017ರಲ್ಲಿ ಜೂನಿಯರ್ ತಂಡಕ್ಕೆ ಪದಾರ್ಪಣೆ ಮಾಡಿರುವ ರವಿಚಂದ್ರ 31 ಪಂದ್ಯಗಳನ್ನು ಆಡಿದ್ದಾರೆ. ಚಿಂಗ್ಲೆನ್ಸಾನ ಸಿಂಗ್ ಅವರು ಮಣಿಪುರದಲ್ಲಿ ಹಾಕಿ ಆಟಗಾರರನ್ನು ಬೆಳೆಸುವಲ್ಲಿ ನೀಡಿರುವ ಕಾಣಿಕೆ ಅಸಾಮಾನ್ಯ ಎಂದು ಅವರು ಹೇಳಿದ್ದಾರೆ.

‘ಇತ್ತೀಚಿನ ವರ್ಷಗಳಲ್ಲಿ ಮಣಿಪುರದಲ್ಲಿ ಹಾಕಿ ಕ್ರೀಡೆ ಬೆಳೆದುಬಂದಿರುವ ಬಗೆ ಕುತೂಹಲಕಾರಿಯಾಗಿದೆ. ಭಾರತಕ್ಕಾಗಿ 200ಕ್ಕೂ ಅಧಿಕ ಪಂದ್ಯಗಳನ್ನು ಆಡಿರುವಚಿಂಗ್ಲೆನ್ಸಾನ ಯುವ ತಲೆಮಾರಿನಲ್ಲಿ ಹಾಕಿ ಬಗ್ಗೆ ಆಸಕ್ತಿ ಬೆಳೆಯಲು ಪ್ರೇರಣೆಯಾಗಿದ್ದಾರೆ. ಅವರ ಆಟದ ಶೈಲಿಯನ್ನು ಹತ್ತಿರದಿಂದ ನೋಡಿದ್ದೇನೆ. ಅವರು ಈ ಮಟ್ಟಕ್ಕೆ ಬೆಳೆಯುತ್ತಾರೆ ಎಂದು ಹಿಂದೆಯೇ ಗೊತ್ತಿತ್ತು. ಖೊತಾಜೀತ್ ಸಿಂಗ್ ಖಡಂಗ್ಬಂ ಕೂಡ ಭಾರತ ಹಾಕಿಗಾಗಿ ಸಾಕಷ್ಟು ಬೆವರು ಸುರಿಸಿದ್ದಾರೆ’ ಎಂದು ಮಿಡ್‌ಫೀಲ್ಡರ್ ರವಿಚಂದ್ರ ಹೇಳಿದರು.

ADVERTISEMENT

2018ರ ಯೂತ್ ಒಲಿಂಪಿಕ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತ ತಂಡದಲ್ಲಿ ಆಡಿದ್ದ ರವಿಚಂದ್ರ ಕಳೆದ ವರ್ಷ ನಡೆದಿದ್ದ ಸುಲ್ತಾನ್ ಆಫ್ ಜೊಹೊರ್ ಕಪ್ ಟೂರ್ನಿಯಲ್ಲಿ ಕಣಕ್ಕೆ ಇಳಿದಿದ್ದರು. ‘ಜೂನಿಯರ್ ತಂಡದಲ್ಲಿ ಸಾಕಷ್ಟು ಆಡಿದ್ದೇನೆ. ಭಾರತ ಸೀನಿಯರ್ ತಂಡಕ್ಕಾಗಿ ಗೋಲು ಗಳಿಸಬೇಕು ಎಂಬುದು ನನ್ನ ಜೀವನದ ಅತಿದೊಡ್ಡ ಬಯಕೆ’ ಎಂದು ಅವರು ಹೇಳಿದರು.

‘ಕಠಿಣ ಪರಿಶ್ರಮ ಹಾಕಿ ಅಭ್ಯಾಸ ಮಾಡುತ್ತಿದ್ದೇನೆ. ಅದನ್ನು ಇನ್ನೂ ಮುಂದುವರಿಸಲಿದ್ದೇನೆ. ಅದು, ಮುಂದೊಂದು ದಿನ ಭಾರತ ತಂಡದಲ್ಲಿ ಸ್ಥಾನ ಗಳಿಸಲು ನೆರವಾಗುವ ನಿರೀಕ್ಷೆ ಇದೆ’ ಎಂದು 18 ವರ್ಷದ ರವಿಚಂದ್ರ ನುಡಿದರು.

‘ಡಿಫೆನ್ಸ್ ವಿಭಾಗದಲ್ಲಿ ಮಿಂಚಬೇಕು ಎಂದು ಬಯಸುವ ಆಟಗಾರರು ಅಳವಡಿಸಿಕೊಳ್ಳಬಹುದಾದ ಅತ್ಯುತ್ತಮ ಶೈಲಿ ಹರ್ಮನ್‌ಪ್ರೀತ್ ಅವರದು. ಅವರ ಆಟವನ್ನು ಕಣ್ತುಂಬಿಕೊಳ್ಳುವುದೇ ಖುಷಿ. ಭಾರತದ ಅಪರೂಪದ ಅನೇಕ ಜಯದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಯುವ ಆಟಗಾರರಿಗೆ ಅವರು ಅತ್ಯುತ್ತಮ ಪ್ರೇರಣೆ’ ಎಂಬುದು ದಿನಚಂದ್ರ ಅವರ ಅಭಿಪ್ರಾಯ.

‘ಒತ್ತಡದ ಪರಿಸ್ಥಿತಿಗಳನ್ನು ತಾಳ್ಮೆಯಿಂದ ಎದುರಿಸುವ ಹರ್ಮನ್‌ಪ್ರೀತ್ ಸಿಂಗ್ ಅವರ ರೀತಿ ನನಗೆ ಹೆಚ್ಚು ಹಿಡಿಸಿದೆ. ಅವರಂಥ ಆಟಗಾರರು ಭಾರತ ತಂಡದಲ್ಲಿ ಇದ್ದಾರೆ ಎಂಬುದು ಭಾರಿ ಅದೃಷ್ಟ’ ಎಂದು ಅವರು ಹೇಳಿದರು.

‘ಸದ್ಯ ಸುಲ್ತಾನ್ ಆಫ್ ಜೊಹೊರ್ ಕಪ್‌ ಟೂರ್ನಿ ನಾನು ಆಡಿದ ಪ್ರಮುಖ ಟೂರ್ನಿ. ಜೂನಿಯರ್ ತಂಡದಲ್ಲಿ ಇನ್ನಷ್ಟು ಸಾಧನೆ ಮಾಡಬೇಕು. ಆ ಮೂಲಕ ಮುಂದಿನ ಹಾದಿಯನ್ನು ಸುಗಮಗೊಳಿಸಬೇಕು. ಕೌಶಲವನ್ನು ಹೆಚ್ಚಿಸಿಕೊಳ್ಳಲು ಮತ್ತು ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳುವತ್ತ ಚಿತ್ತ ನೆಟ್ಟಿದ್ದೇನೆ. ಒಂದಿಲ್ಲೊಂದು ದಿನ ಭಾರತ ತಂಡಕ್ಕಾಗಿ ಆಡುವ ಅವಕಾಶ ಸಿಕ್ಕಿಯೇ ಸಿಗುತ್ತದೆ ಎಂಬ ವಿಶ್ವಾಸವಿದೆ’ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.