ADVERTISEMENT

Tokyo Olympics: ಗೇಮ್‌ ‘ಲೆಕ್ಕ’ದಲ್ಲಿ ಹೊರಬಿದ್ದ ಚಿರಾಗ್‌–ಸಾತ್ವಿಕ್

ಪಿಟಿಐ
Published 27 ಜುಲೈ 2021, 19:31 IST
Last Updated 27 ಜುಲೈ 2021, 19:31 IST
ಸಾತ್ವಿಕ್ ಸಾಯಿರಾಜ್ (ಎಡ) ಮತ್ತು ಚಿರಾಗ್ ಶೆಟ್ಟಿ –ಎಎಫ್‌ಪಿ ಚಿತ್ರ
ಸಾತ್ವಿಕ್ ಸಾಯಿರಾಜ್ (ಎಡ) ಮತ್ತು ಚಿರಾಗ್ ಶೆಟ್ಟಿ –ಎಎಫ್‌ಪಿ ಚಿತ್ರ   

ಟೋಕಿಯೊ: ರೋಚಕ ಹಣಾಹಣಿಯಲ್ಲಿ ಬ್ರಿಟನ್‌ ಜೋಡಿಯ ಸವಾಲು ಮೀರಿದ ಭಾರತದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಪಂದ್ಯ ಗೆದ್ದರು. ಆದರೆ ಒಲಿಂಪಿಕ್ಸ್‌ ಬ್ಯಾಡ್ಮಿಂಟನ್‌ನ ನಾಕ್‌ಔಟ್ ಹಂತ ತಲುಪುವ ಅವರ ಕನಸು ಕಮರಿಹೋಯಿತು.

ಮಂಗಳವಾರ ನಡೆದ ಪುರುಷರ ಡಬಲ್ಸ್‌ ವಿಭಾಗದ ‘ಎ’ ಗುಂಪಿನ ಹಣಾಹಣಿಯಲ್ಲಿ ಭರ್ಜರಿ ಸ್ಮ್ಯಾಷ್‌ಗಳ ಮೂಲಕ ಮಿಂಚಿದ ಬೆನ್ ಲೇನ್ ಮತ್ತು ಸೀನ್ ವೆಂಡಿ ಅವರಿಗೆ ತಿರುಗೇಟು ತಾಳ್ಮೆಯ ಮತ್ತು ನಾಜೂಕಿನ ಆಟದ ಮೂಲಕ ತಿರುಗೇಟು ನೀಡಿದ ಭಾರತದ ಜೋಡಿ 21-17, 21-19ರಲ್ಲಿ ಜಯ ಗಳಿಸಿದರು.

ಗುಂಪಿನಲ್ಲಿ ಮೂರನೇ ಸ್ಥಾನ ಗಳಿಸಿದ್ದರಿಂದ ಚಿರಾಗ್ ಮತ್ತು ರಂಕಿರೆಡ್ಡಿ ಅವರಿಗೆ ಮುಂದಿನ ಮುಂದಿನ ಹಂತಕ್ಕೆ ಸಾಗಲು ಆಗಲಿಲ್ಲ. ಇಂಡೊನೇಷ್ಯಾದ ಮಾರ್ಗಸ್ ಗಿಡಿಯಾನ್ ಮತ್ತು ಕೆವಿನ್ ಸಂಜಯ ಸುಕಮುಲ್ಜಿ ಗುಂಪಿನಲ್ಲಿ ಅಗ್ರ ಸ್ಥಾನ ಗಳಿಸಿದರೆ ಚೀನಾ ಥೈಪೆಯ ಯಾಂಗ್ ಲೀ ಹಾಗೂ ಚಿನ್ ಲಿನ್ ವಾಂಗ್‌ ಎರಡನೇ ಸ್ಥಾನ ಗಳಿಸಿದರು.

ADVERTISEMENT

ಮೂರು ತಂಡಗಳು ಕೂಡ ಎರಡು ಪಂದ್ಯಗಳನ್ನು ಗೆದ್ದುಕೊಂಡು ಪಾಯಿಂಟ್‌ಗಳನ್ನು ಸಮವಾಗಿ ಹಂಚಿಕೊಂಡಿದ್ದವು. ಹೀಗಾಗಿ ಹೆಚ್ಚು ಗೇಮ್‌ಗಳನ್ನು ಗೆದ್ದ ತಂಡಗಳಿಗೆ ನಾಕೌಟ್‌ಗೆ ಬಡ್ತಿ ನೀಡಲು ನಿರ್ಧರಿಸಲಾಯಿತು. ಸೋಮವಾರದ ಪಂದ್ಯದಲ್ಲಿ ನೇರ ಗೇಮ್‌ಗಳಿಂದ ಇಂಡೊನೇಷ್ಯಾಗೆ ಮಣಿದದ್ದು ಭಾರತದ ಜೋಡಿಯ ಹಾದಿಗೆ ಅಡ್ಡಿಯಾಯಿತು.

ಉತ್ತಮ ಲಯದಲ್ಲಿದ್ದ ಭಾರತದ ಆಟಗಾರರು ಆರಂಭದಲ್ಲಿ 5–3ರ ಮುನ್ನಡೆ ಸಾಧಿಸಿದರು. ತಕ್ಷಣ ತಿರುಗೇಟು ನೀಡಿದ ಆಂಗ್ಲ ಜೋಡಿ ಪಾಯಿಂಟ್‌ಗಳನ್ನು ಕಲೆ ಹಾಕುತ್ತ ವಿರಾಮದ ವೇಳೆ 11–10ರ ಮುನ್ನಡೆ ಸಾಧಿಸಿದರು. ವಿರಾಮದ ನಂತರ ಚಿರಾಗ್ ಮತ್ತು ಸಾತ್ವಿಕ್ ಛಲ ಬಿಡದೆ ಆಡಿ ಗೇಮ್ ತಮ್ಮದಾಗಿಸಿಕೊಂಡರು.

ಎರಡನೇ ಗೇಮ್‌ನಲ್ಲೂ ಆರಂಭದಲ್ಲಿ 6–3ರ ಮುನ್ನಡೆ ಸಾಧಿಸಿದರು. ನಂತರ ಇದು 16–13ಕ್ಕೇರಿತು. ಅಷ್ಟರಲ್ಲಿ ಚೇತರಿಸಿಕೊಂಡ ಎದುರಾಳಿಗಳು 18–18ರಲ್ಲಿ ಸಮಬಲ ಸಾಧಿಸಿದರು. ಆದರೆ ಭಾರತದ ಜೋಡಿ ಪಂದ್ಯವನ್ನು ಬಿಟ್ಟುಕೊಡಲಿಲ್ಲ.

ಪಂದ್ಯದ ಅವಧಿ 44 ನಿಮಿಷ

ಗೇಮ್ ವಿವರ

ಭಾರತ 21 21

ಬ್ರಿಟನ್‌ 17 19

ಸಿಂಧುಗೆ ಇಂದು ಚ್ಯುಂಗ್ ಸವಾಲು

ಇಸ್ರೇಲ್ ಆಟಗಾರ್ತಿ ಪೊಲಿಕರ್ಪೋವ ಸೆನಿನಾ ವಿರುದ್ಧ ಮೊದಲ ಸುತ್ತಿನ ಪಂದ್ಯದಲ್ಲಿ ಸುಲಭ ಜಯ ಸಾಧಿಸಿರುವ ಪಿ.ವಿ.ಸಿಂಧು ಬುಧವಾರದ ಪಂದ್ಯದಲ್ಲಿ ಹಾಂಗ್‌ಕಾಂಗ್‌ನ ಚ್ಯುಂಗ್ ನಾನ್ ಇ ಅವರ ಸವಾಲನ್ನು ಎದುರಿಸುವರು.

‘ಜೆ’ ಗುಂಪಿನ ಮೊದಲ ಪಂದ್ಯದಲ್ಲಿ ಸಿಂಧು 21–7, 21–10ರಲ್ಲಿ ಜಯ ಗಳಿಸಿದ್ದರು. ಎರಡನೇ ಸುತ್ತಿನಲ್ಲೂ ಸುಲಭ ಜಯದ ನಿರೀಕ್ಷೆ ಇದೆ. ಚ್ಯುಂಗ್ ನಾನ್ ಕೂಡ ಮೊದಲ ಪಂದ್ಯದಲ್ಲಿ ಪೊಲಿಕರ್ಪೋವ ಎದುರು ಜಯಿಸಿದ್ದರು. ಆದರೆ ಆ ಪಂದ್ಯ ಮೂರು ಗೇಮ್‌ಗಳ ವರೆಗೆ ಸಾಗಿತ್ತು. ಮೊದಲ ಗೇಮ್‌ನಲ್ಲಿ 21–12ರಲ್ಲಿ ಜಯ ಸಾಧಿಸಿದ್ದ ಹಾಂಗ್‌ಕಾಂಗ್ ಆಟಗಾರ್ತಿ ನಂತರ 15–21ರಲ್ಲಿ ಮಣಿದಿದ್ದರು. ನಿರ್ಣಾಯಕ ಗೇಮ್‌ 21–16ರಲ್ಲಿ ಗೆದ್ದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.