ನವದೆಹಲಿ: ಭಾರತದ ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್ ಅವರು ರಷ್ಯಾದ ದಂತಕಥೆ ಗ್ಯಾರಿ ಕ್ಯಾಸ್ಪರೋವ್ ಜೊತೆ ದೀರ್ಘ ಕಾಲದ ನಂತರ ಮುಖಾಮುಖಿಯಾಗಲಿದ್ದಾರೆ. ಹಾಲಿ ವಿಶ್ವ ಚಾಂಪಿಯನ್ ಗುಕೇಶ್, ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಅವರಿಗೆ ಎದುರಾಳಿಯಾಗಲಿದ್ದಾರೆ. ಅಕ್ಟೋಬರ್‌ನಲ್ಲಿ ಅಮೆರಿಕದ ಸೇಂಟ್ ಲೂಯಿಯಲ್ಲಿ ನಡೆಯಲಿರುವ ‘ಕ್ಲಚ್ ಚೆಸ್ (ಲೆಜೆಂಡ್ಸ್) ಪ್ರದರ್ಶನ ಪಂದ್ಯಗಳು ಈ ಮುಖಾಮುಖಿಗಳಿಗೆ ವೇದಿಕೆಯಾಗಿದೆ.
ಕ್ಯಾಸ್ಪರೋವ್ ಮತ್ತು ಆನಂದ್ 2021ರಲ್ಲಿ ಕೊನೆಯ ಬಾರಿ ಜಾಗ್ರೆಬ್‌ನ ಕ್ರೊವೇಷ್ಯಾ ರ‍್ಯಾಪಿಡ್ ಮತ್ತು ಬ್ಲಿಟ್ಝ್ ಟೂರ್ನಿಯಲ್ಲಿ ಎದುರಾಳಿಗಳಾಗಿದ್ದರು. ಆಗ ಆನಂದ್ ಜಯಶಾಲಿಯಾಗಿದ್ದರು. ಇವರಿಬ್ಬರು ವಿವಿಧ ಮಾದರಿಯಲ್ಲಿ 82 ಸಲ ಮುಖಾಮುಖಿ ಆಗಿದ್ದಾರೆ. 30 ಪಂದ್ಯಗಳು ಡ್ರಾ ಆಗಿದ್ದು, ಉಳಿದವುಗಳಲ್ಲಿ ಕ್ಯಾಸ್ಪರೋವ್ ಹೆಚ್ಚಿನ ಸಲ ಜಯಗಳಿಸಿದ್ದಾರೆ.
ಅಕ್ಟೋಬರ್ 7 ರಿಂದ11 ರವರೆಗೆ ಪ್ರದರ್ಶನ ಪಂದ್ಯಗಳು ರ್‍ಯಾಪಿಡ್ ಮತ್ತು ಬ್ಲಿಟ್ಝ್ ಮಾದರಿಗಳಲ್ಲಿ ನಡೆಯಲಿವೆ. ₹1.25 ಕೋಟಿ ಬಹುಮಾನ ನಿಧಿಯೂ ಇದೆ ಎಂದು ಸೇಂಟ್ ಲೂಯಿ ಚೆಸ್ ಕ್ಲಬ್ ಪ್ರಕಟಣೆಯಲ್ಲಿ ತಿಳಿಸಿದೆ. ಸೇಂಟ್ ಲೂಯಿ ನಗರ ಅಮೆರಿಕದ ಚೆಸ್ ರಾಜಧಾನಿಯಾಗಿ ಬೆಳೆದಿದೆ.
ಮಾಜಿ ಚಾಂಪಿಯನ್ನರ ಹಣಾಹಣಿಯ ಬಳಿಕ ಇದೇ ಸ್ಥಳದಲ್ಲಿ, ಅ. 27 ರಿಂದ 29ರವರೆಗೆ ಹಾಲಿ ಆಟಗಾರರು ಎದುರಾಗಲಿದ್ದಾರೆ. ಅತಿ ಹೆಚ್ಚಿನ ರೇಟಿಂಗ್ ಹೊಂದಿರುವ ಟೂರ್ನಿಯಲ್ಲಿ ಅಗ್ರ ಕ್ರಮಾಂಕದ ಆಟಗಾರ ಕಾರ್ಲ್‌ಸನ್, ಹಿಕಾರು ನಕಾಮುರಾ, ಫ್ಯಾಬಿಯಾನೊ ಕರುವಾಣ ಮತ್ತು ಗುಕೇಶ್ ಆಡಲಿದ್ದಾರೆ. ಈ ಟೂರ್ನಿ ₹3.58 ಕೋಟಿ ಬಹುಮಾನ ಹಣ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.