ADVERTISEMENT

ಕಾಮನ್ವೆಲ್ತ್ ಗೇಮ್ಸ್‌: ಫ್ಲ್ಯಾಟ್ ಜಪ್ತಿಗೆ ಆದೇಶ

ಪಿಟಿಐ
Published 2 ಆಗಸ್ಟ್ 2019, 19:45 IST
Last Updated 2 ಆಗಸ್ಟ್ 2019, 19:45 IST

ನವದೆಹಲಿ: ಇಲ್ಲಿ 2010ರಲ್ಲಿ ನಡೆದಿದ್ದ ಕಾಮನ್ವೆಲ್ತ್ ಕ್ರೀಡಾಕೂಟಕ್ಕಾಗಿ ಎರಡು ಕ್ರೀಡಾಂಗಣಗಳ ನವೀಕರಣದ ಗುತ್ತಿಗೆ ಪಡೆಯುವುದಕ್ಕಾಗಿ ಅಕ್ರಮ ಎಸೆಗಿದ ನಿರ್ಮಾಣ ಸಂಸ್ಥೆಯ ಫ್ಲ್ಯಾಟ್‌ ಜಪ್ತಿ ಮಾಡಲು ಜಾರಿ ನಿರ್ದೇಶನಾಲಯ (ಇ.ಡಿ) ಆದೇಶ ಹೊರಡಿಸಿದೆ.

ಅಕ್ರಮ ಹಣ ವರ್ಗಾವಣೆ ನಿಯಂತ್ರಣ ನಿಯಮದಡಿ ಕೈಲಾಶ್‌ ಪ್ರದೇಶದ ರಾಜಾ ಅಧೇರಿ ಕನ್ಸಲ್ಟೆಂಟ್ಸ್ ಸಂಸ್ಥೆಯ ₹ 36.6 ಲಕ್ಷ ಮೊತ್ತದ ಫ್ಲ್ಯಾಟ್‌ ಜಪ್ತಿ ಆಗಲಿದೆ. ಶಿವಾಜಿ ಮತ್ತು ತಲ್ಕತೋರ ಕ್ರೀಡಾಂಗಣದ ನವೀಕರಣ ಕಾಮಗಾರಿಗಾಗಿ ಈ ಸಂಸ್ಥೆ ಸುಳ್ಳು ಮಾಹಿತಿಯನ್ನು ಒದಗಿಸಿ ಗುತ್ತಿಗೆ ಪಡೆದಿತ್ತು ಎಂದು ಇ.ಡಿ ಆರೋಪಿಸಿದೆ.

ರಾಜಾ ಅಧೇರಿ ಕನ್ಸಲ್ಟೆಂಟ್ಸ್ ಸಂಸ್ಥೆಯ ವಿರುದ್ಧ ಸಿಬಿಐ ಈ ಹಿಂದೆ ಪ್ರಥಮ ವರ್ತಮಾನ ವರದಿ ದಾಖಲಿಸಿತ್ತು. ನಿರ್ದೇಶಕ ರಾಜಾ ಅಧೇರಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಉದಯಶಂಕರ್ ಭಟ್ ತಪ್ಪಿತಸ್ಥರು ಎಂದುವಿಚಾರಣಾ ನ್ಯಾಯಾಲಯ ಆದೇಶ ನೀಡಿತ್ತು. ಇದೇ ರೀತಿಯ ಮತ್ತೊಂದು ಪ್ರಕರಣದಲ್ಲಿ ಜೂನ್ ತಿಂಗಳಲ್ಲಿ ಈ ಸಂಸ್ಥೆಯ ₹ 94.24 ಲಕ್ಷ ಮೌಲ್ಯದ ಆಸ್ತಿ ಜಪ್ತಿಗೆ ಇ.ಡಿ ಮುಂದಾಗಿತ್ತು.

ADVERTISEMENT

ನವದೆಹಲಿ ಮುನ್ಸಿಪಲ್ ಕೌನ್ಸಿಲ್‌ಗೆ ಸುಳ್ಳು ದಾಖಲೆಗಳನ್ನು ಸಲ್ಲಿಸಿದ ಸಂಸ್ಥೆ ಕ್ರೀಡಾಂಗಣಗಳಿಗೆ ಸಂಬಂಧಿಸಿದ ಒಟ್ಟು ನಾಲ್ಕು ಗುತ್ತಿಗೆಗಳನ್ನು ಪಡೆದಿತ್ತು. ಅಗತ್ಯ ಅನುಭವ ಇಲ್ಲದಿದ್ದರೂ ಸಂಸ್ಥೆಗೆ ಒಟ್ಟು ₹ 5.25 ಕೋಟಿ ಮೊತ್ತದ ಗುತ್ತಿಗೆಯನ್ನು ನೀಡಲಾಗಿತ್ತು. ಸಿಬಿಐ ಸಲ್ಲಿಸಿದ್ದ ಆರೋಪ ಪಟ್ಟಿಯ ಆಧಾರದಲ್ಲಿ ಇ.ಡಿ ಕ್ರಮಕ್ಕೆ ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.