ADVERTISEMENT

ವಿಶ್ವಕಪ್‌ ಆರ್ಚರಿ: ಕಂಚಿನ ಪದಕದ ಸುತ್ತಿಗೆ ಕಾಂಪೌಂಡ್‌ ಮಿಶ್ರತಂಡ

ಪಿಟಿಐ
Published 9 ಮೇ 2025, 14:14 IST
Last Updated 9 ಮೇ 2025, 14:14 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ಶಾಂಘೈ: ಭಾರತದ ಕಾಂಪೌಂಡ್‌ ಮಿಶ್ರ ತಂಡವು ವಿಶ್ವ ಕಪ್‌ ಸ್ಟೇಜ್2 ಟೂರ್ನಿಯಲ್ಲಿ ಶುಕ್ರವಾರ ಕಂಚಿನ ಪದಕ ಸುತ್ತಿಗೆ ತಲುಪಿದೆ. ದೀಪಿಕಾ ಕುಮಾರಿ ಮತ್ತು ಪಾರ್ಥ ಸುಶಾಂತ್ ಸಾಲುಂಖೆ ಅವರು ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ರಿಕರ್ವ್‌ ವೈಯಕ್ತಿಕ ವಿಭಾಗದ ಸಮಿಫೈನಲ್‌ಗೆ ತಲುಪಿದ್ದಾರೆ.

ಮಧುರಾ ಧಾಮಣಗಾಂವಕರ್ ಮತ್ತು ಅಭಿಷೇಕ್‌ ವರ್ಮಾ ಅವರು ಕಾಂಪೌಂಡ್‌ ವಿಶ್ರ ವಿಭಾಗದ ಸೆಮಿಫೈನಲ್‌ನಲ್ಲಿ ಬ್ರಿಟನ್‌ನ ಎಲ್ಲಾ ಗಿಬ್ಸನ್ ಮತ್ತು ಅಜಯ್‌ ಸ್ಕಾಟ್‌ ಅವರಿಗೆ ಮಣಿಯಿತು. ಭಾರತದ ಜೋಡಿ ಮೊದಲ ಮತ್ತು ಮೂರನೇ ಸರಣಿಯನ್ನು 38–39, 30–40ರಲ್ಲಿ ಸೋತಿತು. ಎರಡನೇ ಮತ್ತು ನಾಲ್ಕನೇ ಸರಣಿಯಲ್ಲಿ 40–40 ಮತ್ತು 39–39ರಲ್ಲಿ ಟೈಮಾಡಿಕೊಂಡಿತ್ತು.

ADVERTISEMENT

ಹೀಗಾಗಿ ಭಾರತ ತಂಡ ಕಂಚಿನ ಪದಕಕ್ಕಾಗಿ ಸೆಣಸಾಟ ನಡೆಸುವ ಅವಕಾಶ ಹೊಂದಿತು. ಭಾರತದ ಸ್ಪರ್ಧಿಗಳು ಶನಿವಾರ ನಡೆಯುವ ಈ ಹಣಾಹಣಿಯಲ್ಲಿ ಮಲೇಷ್ಯಾದ ತಂಡವನ್ನು ಎದುರಿಸಲಿದ್ದಾರೆ. ಮಲೇಷ್ಯಾದ ಜೋಡಿ ಇನ್ನೊಂದು ಸೆಮಿಫೈನಲ್‌ನಲ್ಲಿ ಟರ್ಕಿಯೆ ಸ್ಪರ್ಧಿಗಳಿಗೆ 156–157ರಲ್ಲಿ ಮಣಿದರು.

ಕಾಂಪೌಂಡ್ ವಿಭಾಗದಲ್ಲಿ ಸ್ಪರ್ಧೆಯಲ್ಲಿ ಬಳಸುವ ಬಿಲ್ಲು ಕೇಬಲ್‌ಗಳು, ರಾಟೆಯಂಥ ಸಲಕರಣೆಗಳನ್ನು ಹೊಂದಿದ್ದು, ಸಾಂಪ್ರದಾಯಿಕ ಬಿಲ್ಲಿಗಿಂತ ಭಿನ್ನವಾಗಿದೆ.

ಗಮನ ಸೆಳೆದ ಸಾಲುಂಖೆ:

ಪುರುಷರ ವೈಯಕ್ತಿಕ  ರಿಕರ್ವ್ ವಿಭಾಗದ ಸೆಮಿಫೈನಲ್ ತಲುಪುವ ಹಾದಿಯಲ್ಲಿ ಸಾಲುಂಖೆ ಮೊದಲ ಸುತ್ತಿನಲ್ಲಿ ಶೂಟ್‌ಆಫ್‌ ಮೂಲಕ 6–5 ರಿಂದ ಟೋಕಿಯೊ ಒಲಿಂಪಿಕ್‌ ಕ್ರೀಡೆಗಳ ಚಿನ್ನದ ಪದಕ ವಿಜೇತ ಮೆಟೆ ಗಝೋಝ್ ಅವರನ್ನು ಸೋಲಿಸಿ ಗಮನ ಸೆಳೆದರು. ನಂತರ 32ರ ಸುತ್ತಿನಲ್ಲಿ ಅವರು ಜಪಾನ್‌ನ ಅಯೊಶಿಮಾ ಟೆತ್ಸುವಾ ಅವರನ್ನು, ಬಳಿಕ ಆಸ್ಟ್ರೇಲಿಯಾದ ರಯಾನ್ ಟಿಯಾಕ್ ಅವರನ್ಜು 6–2 ರಿಂದ ಮಣಿಸಿ ಎಂಟರ ಘಟ್ಟ ತಲುಪಿದರು.

ಕ್ವಾರ್ಟರ್‌ಫೈನಲ್‌ನಲ್ಲಿ ಅವರು ದಕ್ಷಿಣ ಕೊರಿಯಾದ ಕಿಮ್‌ ಜೇ ದಿಯೊಕ್ ಅವರನ್ನು 6–2 ರಿಂದ ಸೋಲಿಸಿದರು. ಅವರು ಭಾನುವಾರ ನಡೆಯುವ ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಮತ್ತೊಬ್ಬ ಸ್ಪರ್ಧಿ ಹಾಗೂ ಪ್ಯಾರಿಸ್ ಒಲಿಂಪಿಕ್‌ ಸ್ವರ್ಣ ವಿಜೇತ ಕಿಮ್‌ ವೂಜಿನ್‌ ಅವರನ್ನು ಎದುರಿಸಲಿದ್ದಾರೆ.

ವೂಜಿನ್ ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ಅತನು ದಾಸ್‌ ಅವರನ್ನು ಸೋಲಿಸಿದ್ದರು.

ಸೆಮಿಗೆ ದೀಪಿಕಾ:

ಮಹಿಳೆಯರ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ದೀಪಿಕಾ ಅವರು 6–2 ರಿಂದ ಚೀನಾದ ಲಿ ಜಿಯಾಮನ್ ಅವರನ್ನು ಸೋಲಿಸಿದರು. ಭಾರತದ ಅನುಭವಿ ಬಿಲ್ಗಾರ್ತಿ ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಲಿಮ್‌ ಸಿಹಯೊನ್ ಅವರನ್ನು ಎದುರಿಸಲಿದ್ದಾರೆ. ಸಿಹಯೋನ್ ಇನ್ನೊಂದು ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ಅಂಕಿತಾ ಭಕತ್‌ ಅವರನ್ನು ಮಣಿಸಿದ್ದರು.

ದೀಪಿಕಾ ಈ ಮೊದಲಿನ ಸುತ್ತುಗಳಲ್ಲಿ 6–4 ರಿಂದ ಲೂಸಿಯಾ ಇಬನೆಝ್ ರೊಮೆರೊ (ಸ್ಪೇನ್‌) ವಿರುದ್ಧ, ನಂತರ ಡಯಾನಾ ತುರ್ಸುನ್‌ಬೆಕ್ (ಕಜಕಸ್ತಾನ) ವಿರುದ್ಧ, ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ 6–4 ರಿಂದ ಫ್ರಾನ್ಸ್‌ನ ವಿಕ್ಟೋರಿಯಾ ಸೆಬಾಸ್ಟಿಯನ್ ವಿರುದ್ಧ ಜಯಗಳಿಸಿದ್ದರು.

ಚಿನ್ನಕ್ಕೆ ಸೆಣಸಾಟ:

ಶನಿವಾರ ಭಾರತದ ಜೋಡಿ ಕಾಂಪೌಂಡ್‌ ಮಿಶ್ರ ವಿಭಾಗದಲ್ಲಿ ಕಂಚಿನ ಪದಕಕ್ಕೆ ಸೆಣಸಾಟ ನಡೆಸಲಿದೆ. ಇದರ ಜೊತೆಗೆ ಎರಡು ಚಿನ್ನದ ಪದಕಗಳಿಗೆ ಸೆಣಸಾಟ ನಡೆಸಲಿದೆ.

ಪುರುಷರ ಕಾಂಪೌಂಡ್‌ ತಂಡ ವಿಭಾಗದ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಭಾರತ (ಅಭಿಷೇಕ್ ವರ್ಮಾ, ರಿಷಭ್ ಯಾದವ್‌ ಮತ್ತು ಓಜಸ್‌ ದೇವತಳೆ), ಮೆಕ್ಸಿಕೊ ತಂಡವನ್ನು ಎದುರಿಸಲಿದೆ.

ಮಹಿಳೆಯರ ವಿಭಾಗದಲ್ಲಿ ಮಧುರಾ, ಜ್ಯೋತಿ ಸುರೇಖಾ ವೆನ್ನಂ ಮತ್ತು ಚಿಕಿತಾ ತನಿಪರ್ತಿ ಅವರಿರುವ ತಂಡ ಫೈನಲ್‌ನಲ್ಲಿ ಮೆಕ್ಸಿಕೊ ವಿರುದ್ಧ ಸೆಣಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.