ADVERTISEMENT

ವಿಶ್ವಕಪ್ ಆರ್ಚರಿ: ಫೈನಲ್‌ಗೆ ಭಾರತ ಕಾಂಪೌಂಡ್‌ ಮಿಶ್ರ ತಂಡ

ವಿಶ್ವಕಪ್‌ ಸ್ಟೇಜ್‌ 1 ಆರ್ಚರಿ ಟೂರ್ನಿ

ಪಿಟಿಐ
Published 21 ಏಪ್ರಿಲ್ 2023, 14:00 IST
Last Updated 21 ಏಪ್ರಿಲ್ 2023, 14:00 IST
ಜ್ಯೋತಿ ಸುರೇಖಾ ವೆನ್ನಂ ಹಾಗೂ ಓಜಸ್‌ ದೇವತಾಳೆ- ಎಸ್‌ಎಐ ಮೀಡಿಯಾ ಟ್ವಿಟರ್ ಚಿತ್ರ
ಜ್ಯೋತಿ ಸುರೇಖಾ ವೆನ್ನಂ ಹಾಗೂ ಓಜಸ್‌ ದೇವತಾಳೆ- ಎಸ್‌ಎಐ ಮೀಡಿಯಾ ಟ್ವಿಟರ್ ಚಿತ್ರ   

ಅಂತಲ್ಯಾ, ಟರ್ಕಿ: ಭಾರತದ ಜ್ಯೋತಿ ಸುರೇಖಾ ವೆನ್ನಂ ಹಾಗೂ ಓಜಸ್‌ ದೇವತಾಳೆ ಅವರು ಶುಕ್ರವಾರ ವಿಶ್ವಕಪ್ ಆರ್ಚರಿ ಸ್ಟೇಜ್ 1 ಟೂರ್ನಿಯ ಕಾಂಪೌಂಡ್‌ ಮಿಶ್ರ ತಂಡ ವಿಭಾಗದ ಫೈನಲ್‌ಗೆ ಲಗ್ಗೆಯಿಟ್ಟರು.

ಇಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಅನುಭವಿ ಬಿಲ್ಲುಗಾರ್ತಿ ಜ್ಯೋತಿ ಹಾಗೂ ಇದೇ ಮೊದಲ ಬಾರಿ ವಿಶ್ವಕಪ್‌ನಲ್ಲಿ ಸ್ಪರ್ಧಿಸಿರುವ ಓಜಸ್‌, ಸತತ ಮೂರು ಸುತ್ತುಗಳಲ್ಲಿ ಜಯ ದಾಖಲಿಸಿ ಚಿನ್ನದ ಪದಕದ ಸುತ್ತಿಗೆ ಕಾಲಿಟ್ಟರು.

ಸೆಮಿಫೈನಲ್‌ನಲ್ಲಿ ಜ್ಯೋತಿ– ಓಜಸ್‌ ಅವರಿಗೆ 157–154ರಿಂದ ಮಲೇಷ್ಯಾದ ಫಟಿನ್‌ ನೂರ್‌ಫತೆಹ್‌ ಮತ್ ಸಲೆಹ್‌– ಮೊಹಮ್ಮದ್‌ ಜುವೈದಿ ಮಜುಕಿ ಎದುರು ಗೆಲುವು ಒಲಿಯಿತು.

ADVERTISEMENT

ಜ್ಯೋತಿ ಮತ್ತು ಓಜಸ್‌ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ 159–157ರಿಂದ ಲುಕ್ಸೆಂಬರ್ಗ್‌ ಎದುರು, ಕ್ವಾರ್ಟರ್‌ಫೈನಲ್‌ನಲ್ಲಿ 159–156ರಿಂದ ಫ್ರಾನ್ಸ್ ಎದುರು ಗೆಲುವು ಸಾಧಿಸಿದ್ದರು.

ಶನಿವಾರ ನಡೆಯುವ ಫೈನಲ್‌ನಲ್ಲಿ ಭಾರತದ ಜೋಡಿಯು ಚೀನಾ ತೈಪೆ ತಂಡವನ್ನು ಎದುರಿಸಲಿದೆ.

ಗುರುವಾರ ಜ್ಯೋತಿ ಅವರು ವೈಯಕ್ತಿಕ ಕಾಂಪೌಂಡ್‌ ವಿಭಾಗದ ಸೆಮಿಫೈನಲ್ ತಲುಪಿದ್ದರು. ಅತನು ದಾಸ್‌, ಬಿ. ಧೀರಜ್‌ ಮತ್ತು ತರುಣದೀಪ್ ರಾಯ್ ಅವರನ್ನೊಳಗೊಂಡ ಪುರುಷರ ರಿಕರ್ವ್ ತಂಡವು ಪ್ರಶಸ್ತಿ ಸುತ್ತು ತಲುಪಿತ್ತು. ಹೀಗಾಗಿ ಭಾರತಕ್ಕೆ ಮೂರು ಪದಕ ಖಚಿತವಾಗಿವೆ.

ರಿಕರ್ವ್‌ ಮಿಶ್ರ ತಂಡಕ್ಕೆ ನಿರಾಸೆ: ರಿಕರ್ವ್‌ ವಿಭಾಗದ ಮಿಶ್ರ ತಂಡದಲ್ಲಿ ಸ್ಪರ್ಧಿಸಿದ್ದ ಅತನು ದಾಸ್‌– ಭಜನ್ ಕೌರ್ ಜೋಡಿಯು 3–5ರಿಂದ ಡೆನ್ಮಾರ್ಕ್‌ ತಂಡದ ಎದುರು ಮಣಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.