ADVERTISEMENT

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿ ಸೆಮಿಫೈನಲ್‌: ಭಾರತ- ಪಾಕಿಸ್ತಾನ ಫೈಟ್

ಪಾಕಿಸ್ತಾನ ಎದುರು ಹಣಾಹಣಿ

ಪಿಟಿಐ
Published 16 ಡಿಸೆಂಬರ್ 2021, 13:46 IST
Last Updated 16 ಡಿಸೆಂಬರ್ 2021, 13:46 IST
ಭಾರತ ತಂಡದ ಆಟಗಾರರು ಪಾಕಿಸ್ತಾನದ ವಿರುದ್ಧ ಗೆಲುವಿನ ವಿಶ್ವಾಸದಲ್ಲಿದ್ದಾರೆ –ಟ್ವಿಟರ್ ಚಿತ್ರ
ಭಾರತ ತಂಡದ ಆಟಗಾರರು ಪಾಕಿಸ್ತಾನದ ವಿರುದ್ಧ ಗೆಲುವಿನ ವಿಶ್ವಾಸದಲ್ಲಿದ್ದಾರೆ –ಟ್ವಿಟರ್ ಚಿತ್ರ   

ಢಾಕಾ: ಆರಂಭದ ಎರಡು ಪಂದ್ಯಗಳಲ್ಲಿ ಏಳುಬೀಳು ಕಂಡಿರುವ ಭಾರತ ತಂಡ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಶುಕ್ರವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ರೌಂಡ್ ರಾಬಿನ್ ಮೂರನೇ ಪಂದ್ಯದಲ್ಲಿ ಗೆದ್ದರೆ ಹಾಲಿ ಚಾಂಪಿಯನ್ ಭಾರತದ ಸೆಮಿಫೈನಲ್‌ ಹಾದಿ ಸುಗಮವಾಗಲಿದೆ.

ಮೊದಲ ಪಂದ್ಯವನ್ನು ಕೊರಿಯಾ ಜೊತೆ 2–2ರಲ್ಲಿ ಡ್ರಾ ಮಾಡಿಕೊಂಡ ಭಾರತ ಎರಡನೇ ಪಂದ್ಯದಲ್ಲಿ ಪುಟಿದೆದ್ದು ಬಾಂಗ್ಲಾದೇಶವನ್ನು 9–0ಯಿಂದ ಮಣಿಸಿತ್ತು. ಹೀಗಾಗಿ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಜಯ ಗಳಿಸುವ ವಿಶ್ವಾಸದಲ್ಲಿದೆ.

ಹ್ಯಾಟ್ರಿಕ್ ಫೀಲ್ಡ್‌ಗೋಲುಗಳನ್ನು ಗಳಿಸಿರುವ ದಿಲ್‌ಪ್ರೀತ್‌ ಸಿಂಗ್ ಮತ್ತು ಎರಡು ಗೋಲು ಗಳಿಸಿದ್ದ ಜರ್ಮನ್‌ಪ್ರೀತ್‌ ಸಿಂಗ್‌ ಬಾಂಗ್ಲಾ ಎದುರಿನ ಪಂದ್ಯದಲ್ಲಿ ಮಿಂಚಿದ್ದರು. ಈ ಪಂದ್ಯದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶಗಳಲ್ಲಿ ನೇರವಾಗಿ ಫ್ಲಿಕ್‌ ಮಾಡಲು ಮುಂದಾಗದೆ ವಿಭಿನ್ನ ಮಾರ್ಗವನ್ನು ತುಳಿಯಲು ಗ್ರಹಾಂ ರೀಡ್ ತರಬೇತಿ ನೀಡಿರುವ ಭಾರತ ತಂಡ ಮುಂದಾಗಿತ್ತು. ಉಪನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ವರುಣ್ ಕುಮಾರ್ ಅವರು ಈ ಪ್ರಯೋಗವನ್ನು ಯಶಸ್ವಿಗೊಳಿಸಿದ್ದರು.

ADVERTISEMENT

ಹರ್ಮನ್‌ಪ್ರೀತ್ ನೇತೃತ್ವದ ರಕ್ಷಣಾ ವಿಭಾಗ ಮತ್ತು ನಾಯಕ ಮನ್‌ಪ್ರೀತ್ ಸಿಂಗ್ ಮುಂದಾಳತ್ವದವರು ಮಿಡ್‌ಫೀಲ್ಡ್ ವಿಭಾಗ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಸಂಪೂರ್ಣ ಆಧಿಪತ್ಯ ಸ್ಥಾಪಿಸಲು ನೆರವಾಗಿದ್ದರು. ಲಲಿತ್ ಉಪಾಧ್ಯಾಯ ಮತ್ತು ಆಕಾಶ್‌ ದೀಪ್ ಸಿಂಗ್ ಫಾರ್ವರ್ಡ್‌ ವಿಭಾಗದ ಶಕ್ತಿಯಾಗಿದ್ದಾರೆ. ಲಲಿತ್ ಎರಡು ಪಂದ್ಯಗಳಲ್ಲಿ ಮೂರು ಗೋಲು ದಾಖಲಿಸಿದ್ದಾರೆ.

ಪಾಕಿಸ್ತಾನವೂ ಬಲಿಷ್ಠ ತಂಡವಾಗಿರುವುದರಿಂದ ಭಾರತ ಶುಕ್ರವಾರ ಎಚ್ಚರಿಕೆಯಿಂದ ಆಡಲು ಪ್ರಯತ್ನಿಸಲಿದೆ. ಒಲಿಂಪಿಕ್ಸ್‌ನಲ್ಲಿ ಒಟ್ಟಾರೆ ತಲಾ ಮೂರು ಚಿನ್ನ ಮತ್ತು ಬೆಳ್ಳಿ, ಎರಡು ಕಂಚಿನ ಪದಕ ಗೆದ್ದಿರುವ ಪಾಕಿಸ್ತಾನ ಈ ಬಾರಿ ಟೋಕಿಯೊ ಟಿಕೆಟ್ ಗಿಟ್ಟಿಸಿಕೊಳ್ಳಲು ವಿಫಲವಾಗಿತ್ತು. ಹಾಕಿಯ ಗತವೈಭವ ಮರಳಿ ತರಲು ಪ್ರಯತ್ನಿಸುತ್ತಿರುವ ತಂಡಕ್ಕೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಉತ್ತಮ ವೇದಿಕೆಯಾಗಿದೆ.

ಕಳೆದ ಬಾರಿ ಪಾಕಿಸ್ತಾನ ತಂಡ ಭಾರತದ ಜೊತೆ ಪ್ರಶಸ್ತಿ ಹಂಚಿಕೊಂಡಿತ್ತು. ಆ ಟೂರ್ನಿಯ ಲೀಗ್ ಹಂತದ ಪಂದ್ಯ, ಭಾರತ ಮತ್ತು ಪಾಕಿಸ್ತಾನ ತಂಡಗಳ ಕೊನೆಯ ಮುಖಾಮುಖಿಯಾಗಿತ್ತು. ಆ ಪಂದ್ಯದಲ್ಲಿ ಭಾರತ 3–1ರಲ್ಲಿ ಜಯ ಗಳಿಸಿತ್ತು. ಮಳೆಯಿಂದಾಗಿ ಫೈನಲ್ ಪಂದ್ಯ ನಡೆದಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.