ADVERTISEMENT

ಲಯಕ್ಕೆ ಮರಳುವ ತವಕದಲ್ಲಿ ಬಿಎಫ್‌ಸಿ

ಇಂಡಿಯನ್ ಸೂಪರ್ ಲೀಗ್‌ ಫುಟ್‌ಬಾಲ್ ಟೂರ್ನಿ: ಹೈದರಾಬಾದ್ ಎದುರಾಳಿ

ಪಿಟಿಐ
Published 7 ಡಿಸೆಂಬರ್ 2021, 13:13 IST
Last Updated 7 ಡಿಸೆಂಬರ್ 2021, 13:13 IST
ಸುನಿಲ ಚೆಟ್ರಿ– ಐಎಸ್‌ಎಲ್ ಮೀಡಿಯಾ ಚಿತ್ರ
ಸುನಿಲ ಚೆಟ್ರಿ– ಐಎಸ್‌ಎಲ್ ಮೀಡಿಯಾ ಚಿತ್ರ   

ಬ್ಯಾಂಬೊಲಿಮ್‌: ಜಯದ ಲಯಕ್ಕೆ ಮರಳುವ ತವಕದಲ್ಲಿರುವ ಬೆಂಗಳೂರು ಎಫ್‌ಸಿ ಮತ್ತು ಹೈದರಾಬಾದ್ ಎಫ್‌ಸಿ ತಂಡಗಳು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಬುಧವಾರ ಮುಖಾಮುಖಿಯಾಗಲಿವೆ.

ಐಎಸ್‌ಎಲ್‌ ಟೂರ್ನಿಯಲ್ಲಿ ಸುನಿಲ್ ಚೆಟ್ರಿ ನಾಯಕತ್ವದ ಬೆಂಗಳೂರು ತಂಡವು ಹೈದರಾಬಾದ್ ಎದುರು ಒಂದು ಪಂದ್ಯವನ್ನೂ ಸೋತಿಲ್ಲ. ಇದುವರೆಗೆ ಆಡಿದ ನಾಲ್ಕು ಪಂದ್ಯಗಳ ಪೈಕಿ ಒಂದರಲ್ಲಿ ಜಯ ಸಾಧಿಸಿದರೆ ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.

ಈ ಆವೃತ್ತಿಯಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಬಿಎಫ್‌ಸಿ 4–2ರಿಂದ ನಾರ್ತ್‌ ಈಸ್ಟ್ ಯುನೈಟೆಡ್ ಎಫ್‌ಸಿ ಎದುರು ಗೆದ್ದು ಶುಭಾರಂಭ ಮಾಡಿತ್ತು. ಬಳಿಕ ಒಂದು ಡ್ರಾ ಹಾಗೂ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ.

ADVERTISEMENT

‘ತಂಡಕ್ಕೆ ಉತ್ತಮ ಆರಂಭ ಸಿಕ್ಕಿಲ್ಲ ಎನ್ನಲಾಗುವುದಿಲ್ಲ. ಕೆಲವೊಂದು ವಿಭಾಗಗಳಲ್ಲಿ ನಾವು ಇನಷ್ಟು ಸುಧಾರಿಸಬೇಕು. ಹೈದರಾಬಾದ್ ಎದುರು ಕ್ಲೀನ್ ಶೀಟ್‌ಗಾಗಿ ಹೋರಾಟ ನಡೆಸಲಾಗುವುದು. ಇದೇ ನಮ್ಮ ಗುರಿ‘ ಎಂದು ಬಿಎಫ್‌ಸಿ ಕೋಚ್ ಮಾರ್ಕ್ ಪೆಜೌಲಿ ಹೇಳಿದ್ದಾರೆ.

ನಾಯಕ ಚೆಟ್ರಿ ಲಯದಲ್ಲಿಲ್ಲದೇ ಇರುವುದು ಪೆಜೌಲಿಅವರ ಕಳವಳಕ್ಕೆ ಕಾರಣವಾಗಿದೆ. ನಾಲ್ಕು ಪಂದ್ಯಗಳಲ್ಲಿ ಅವರು ಒಂದು ಗೋಲನ್ನು ದಾಖಲಿಸಿಲ್ಲ.

ಈ ಆವೃತ್ತಿಯಲ್ಲಿ ಮೂರು ಪಂದ್ಯಗಳನ್ನು ಆಡಿರುವ ಹೈದರಾಬಾದ್ ಎಫ್‌ಸಿ ನಾಲ್ಕು ಪಾಯಿಂಟ್ಸ್ ಕಲೆಹಾಕಿದೆ. ಕಳೆದ ಪಂದ್ಯದಲ್ಲಿ ಜೆಮ್ಶೆಡ್‌ಪುರ ಎಫ್‌ಸಿ ಎದುರು 1–1ರ ಡ್ರಾ ಸಾಧಿಸಿದ್ದ ತಂಡವು ಬೆಂಗಳೂರು ತಂಡವನ್ನು ಮಣಿಸುವ ವಿಶ್ವಾಸದಲ್ಲಿದೆ.

ಪಂದ್ಯ ಆರಂಭ: ರಾತ್ರಿ 7.30

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.