ADVERTISEMENT

ಕೋವಿಡ್–19 | ‘ಅಥ್ಲೀಟುಗಳ ಗ್ರಾಮ’ ಆಸ್ಪತ್ರೆಯಾಗಿ ಬಳಕೆ?

ಏಜೆನ್ಸೀಸ್
Published 4 ಏಪ್ರಿಲ್ 2020, 1:21 IST
Last Updated 4 ಏಪ್ರಿಲ್ 2020, 1:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಟೋಕಿಯೊ: ನಿರ್ಮಾಣ ಹಂತದಲ್ಲಿರುವ ಟೋಕಿಯೊದ ‘ಅಥ್ಲೀಟುಗಳ ಗ್ರಾಮ’ವನ್ನು ಕೊರೊನಾ ಸೋಂಕುಪೀಡಿತರಿಗೆ ತಾತ್ಕಾಲಿಕ ಆಸ್ಪತ್ರೆಯಾಗಿ ಪರಿವರ್ತಿಸುವ ಸಾಧ್ಯತೆಯೂ ಇದೆ.

‘ಟೋಕಿಯೊ ಬೇ’ಯಲ್ಲಿ ನಿರ್ಮಾಣವಾಗುತ್ತಿರುವ ಈ ಬೃಹತ್‌ ಕ್ರೀಡಾಸಮುಚ್ಚಯದಲ್ಲಿ ಒಲಿಂಪಿಕ್ಸ್‌ ವೇಳೆ 11,000 ಮಂದಿ ಅಥ್ಲೀಟುಗಳ ಮತ್ತು ಸಿಬ್ಬಂದಿ ವಾಸ್ತವ್ಯಕ್ಕೆ ಏರ್ಪಾಡು ಮಾಡಲಾಗುತ್ತಿದೆ. ಈ ಕ್ರೀಡಾಗ್ರಾಮದಲ್ಲಿ 24 ಕಟ್ಟಡಗಳ ನಿರ್ಮಾಣವಾಗಲಿದೆ. ಆದರೆ ಒಲಿಂಪಿಕ್‌ ಕ್ರೀಡೆಗಳು ಮುಂದಕ್ಕೆ ಹೋಗಿರುವುದರಿಂದ 16 ತಿಂಗಳು ಇವು ಖಾಲಿಯಾಗಿರಲಿವೆ.

‘ತಾತ್ಕಾಲಿಕ ಆಸ್ಪತ್ರೆಯಾಗಿ ಪರಿವರ್ತಿಸುವುದು ಒಂದು ಆಯ್ಕೆ ಮಾತ್ರ. ಅಥ್ಲೀಟುಗಳ ಗ್ರಾಮದ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. ಇಂದು ಅಥವಾ ಮುಂದೆ ಲಭ್ಯವಾಗುವ ಸ್ಥಳಗಳ ಬಗ್ಗೆ ನಾವು ಚರ್ಚೆ ನಡೆಸುತ್ತಿದ್ದೇವೆ. ಅವುಗಳನ್ನು ಬಳಸುವ ಸಾಧ್ಯತೆಗಳ ಬಗ್ಗೆಯೂ ಪರಿಶೀಲಿಸುತ್ತಿದ್ದೇವೆ‘ ಎಂದು ಟೋಕಿಯೊ ಗವರ್ನರ್‌ ಯುರಿಕೊ ಕೊಯಿಕೆ ತಿಳಿಸಿದರು.

ADVERTISEMENT

ಜಪಾನ್‌ನಲ್ಲಿ ಗುರುವಾರದ ಕೊನೆಗೆ 3,300 ಸೋಂಕುಪೀಡಿತ ಪ್ರಕರಣಗಳು ವರದಿಯಾಗಿದ್ದು, 74 ಮಂದಿ ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಹೀಗಾಗಿ ಹೆಚ್ಚುವರಿ ವ್ಯವಸ್ಥೆ ಮಾಡಬೇಕಾದ ಪರಿಸ್ಥಿತಿ ಒದಗಿದೆ.

ಕ್ರೀಡಾ ಗ್ರಾಮದಲ್ಲಿ 5,600 ಫ್ಲ್ಯಾಟ್‌ಗಳಿರಲಿವೆ. ಇವುಗಳನ್ನು ಕ್ರೀಡೆಗಳ ನಂತರ ನವೀಕರಿಸಿ ಮಾರಾಟ ಮಾಡುವ ಯೋಜನೆಯಿದೆ. ಸದ್ಯಕ್ಕೆ ಒಂದು ಸಾವಿರ ಫ್ಲ್ಯಾಟ್‌ಗಳು ಸಿದ್ಧವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.