ADVERTISEMENT

ಉದ್ದೀಪನ ಮದ್ದು ಪರೀಕ್ಷೆಗೆ ಕೊರೊನಾ ವೈರಸ್ ಕಂಟಕ

ಪಿಟಿಐ
Published 22 ಮಾರ್ಚ್ 2020, 7:52 IST
Last Updated 22 ಮಾರ್ಚ್ 2020, 7:52 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಭಾರತದಲ್ಲಿ ಉದ್ದೀಪನ ಮದ್ದು ತಡೆ ಪರೀಕ್ಷೆ ಕಾರ್ಯಗಳಿಗೆ ಕೊರೊನಾ ವೈರಸ್‌ ಭೀತಿಯ ಹಿನ್ನೆಯಲ್ಲಿಯಲ್ಲಿ ಹಿನ್ನಡೆಯಾಗಿದೆ.

ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕವು ಯೋಜಿಸಿದ್ದಕ್ಕಿಂತ ಶೇ 25ರಷ್ಟು ಕಡಿಮೆ ಪ್ರಮಾಣದಲ್ಲಿ ಮಾದರಿಗಳನ್ನು ಸಂಗ್ರಹಿಸಿದೆ ಎಂದು ಹೇಳಲಾಗಿದೆ. ’ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಅಥ್ಲೀಟ್‌ಗಳ ಸ್ಯಾಂಪಲ್‌ಗಳನ್ನು ನಾಡಾ ಸಂಗ್ರಹಿಸುತ್ತಿದೆ.

‘ನಿಗದಿಯ ಅವಧಿಯೊಳಗೆ ಅಂದುಕೊಂಡಷ್ಟು ಪ್ರಮಾಣದಲ್ಲಿ ಸ್ಯಾಂಪಲ್‌ಗಳನ್ನು ಸಂಗ್ರಹಿಸುತ್ತೇವೆ’ ಎಂದು ನಾಡಾ ಮಹಾಪ್ರಧಾನ ವ್ಯವಸ್ಥಾಪಕ ನವೀನ್ ಅಗರವಾಲ್ ತಿಳಿಸಿದ್ದಾರೆ.

ADVERTISEMENT

‘ನಾಡಾದಲ್ಲಿ ಸದ್ಯ ಸ್ಯಾಂಪಲ್‌ ಸಂಗ್ರಹಕಾರರ ಸಂಖ್ಯೆ ಕಡಿಮೆ ಇದೆ. ಅವರಲ್ಲಿ ಬಹುತೇಕರು ಸರ್ಕಾರಿ ಆಸ್ಪತ್ರೆಗಳಲ್ಲಿ ನೌಕರರಾಗಿದ್ದಾರೆ. ಡೋಪ್ ಕಂಟ್ರೋಲ್ ಅಧಿಕಾರಿಗಳು ಕೂಡ ವೈದ್ಯಕೀಯ ಮತ್ತು ಅರೆವೈದ್ಕಕೀಯ ಸಿಬ್ಬಂದಿಯೇ ಆಗಿದ್ಧಾರೆ. ಅವರೂ ಕೂಡ ಸರ್ಕಾರಿ ಆಸ್ಪತ್ರೆಯ ನೌಕರರಾಗಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಅವರೆಲ್ಲರೂ ಇತ್ತ ಗಮನ ಹರಿಸುವುದು ಕಷ್ಟವಾಗಿದೆ’ ಎಂದು ಅಗರವಾಲ್ ಹೇಳಿದ್ದಾರೆ.

‘ಸದ್ಯದ ಪರಿಸ್ಥಿತಿಯಲ್ಲಿ ಸ್ಯಾಂಪಲ್‌ಗಳನ್ನು ಶೇ 75ರಷ್ಟು ಕಡಿಮೆ ಮಾಡಲಾಗಿದೆ. ಶೇ 25ರಷ್ಟು ಪರೀಕ್ಷೆಗಳನ್ನು ಮಾತ್ರ ಕೈಗೊಳ್ಳಲಾಗಿದೆ. ಅದರಲ್ಲೂ ಹೆಚ್ಚು ಉದ್ದೀಪನ ಮದ್ದು ಸೇವನೆಗೆ ಒಳಗಾಗುವಂತಹ ಸಾಧ್ಯತೆಇರುವ ವಿಭಾಗಗಳ ಅಥ್ಲೀಟ್‌ಗಳನ್ನು ಆದ್ಯತೆ ಮೇರೆಗೆ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ’ ಎಂದಿದ್ದಾರೆ.

‘ಉದ್ದೀಪಮ ಮದ್ದು ಪರೀಕ್ಷೆಗೆ ಇನ್ನೊಂದು ಪ್ರಮುಖ ತೊಂದರೆ ಇದೆ. ಎಲ್ಲ ಕಡೆ ಲಾಕ್‌ಡೌನ್‌ ಸ್ಥಿತಿ ಇರುವುದರಿಂದ ಸ್ಯಾಂಪಲ್‌ಗಳ ಸಂಗ್ರಹ ಮತ್ತು ಪ್ರಯೋಗಾಲಯಕ್ಕೆ ಸಾಗಾಟ ಮಾಡುವ ಕಾರ್ಯವು ಸೂಸುತ್ರವಾಗಿ ನಡೆಯುತ್ತಿಲ್ಲ’ ಎಂದಿದ್ದಾರೆ.

‘ಸದ್ಯ ಲಭ್ಯ ಇರುವ ಮಾದರಿ ಸಂಗ್ರಹ ತಜ್ಞರು, ವೈದ್ಯರು ಮತ್ತು ಸಿಬ್ಬಂದಿಯ ಸುರಕ್ಷೆಗೂ ಹೆಚ್ಚು ಒತ್ತು ನೀಡಿದ್ದೇವೆ. ಅವರಿಗೆ ಅಗತ್ಯವಾಗಿರುವ ಮಾಸ್ಕ್, ಕೈಗವಸು, ಸ್ಯಾನಿಟೈಸರ್ ಮತ್ತಿತರ ಪರೀಕ್ಷಾ ಕಿಟ್‌ಗಳನ್ನು ಒದಗಿಸಿದ್ದೇವೆ. ಅಲ್ಲದೇ ಅಥ್ಲೀಟ್‌ಗಳ ಸುರಕ್ಷೆಗೂ ಕ್ರಮ ಕೈಗೊಂಡಿದ್ದೇವೆ’ ಎಂದು ಅಗರವಾಲ್ ತಿಳಿಸಿದ್ದಾರೆ.

ಡೋಪ್ ಪರೀಕ್ಷೆಯ ಕುರಿತು ವಿಶ್ವ ಉದ್ದೀಪನ ಮದ್ದು ತಡೆ ಘಟಕ (ವಾಡಾ) ಹೊಸ ನಿಯಮಾವಳಿಯನ್ನು ಪ್ರಕಟಿಸಿದೆ. ಅದರ ಪ್ರಕಾರ ನಾಡಾ ಅಧಿಕಾರಿಗಳು ಮತ್ತು ಅಥ್ಲೀಟ್‌ಗಳು ತಮಗೆ ವೈರಸ್‌ ಸೋಂಕು ಇದ್ದರೆ ಮುಕ್ತವಾಗಿ ಹೇಳಿಕೊಳ್ಳಬೇಕು. ಉದ್ದೀಪನ ಮದ್ದು ತಡೆಗೆ ಸಂಬಂಧಿಸಿದಂತೆ ಸದ್ಯ ಮದ್ದು ಸೇವನೆಯ ಸಾಧ್ಯತೆಗಳು ಹೆಚ್ಚು ಇರುವ ಕ್ರೀಡೆಗಳ ಸ್ಪರ್ಧಿಗಳನ್ನು ಮಾತ್ರ ಪರೀಕ್ಷೆಗೆ ಒಳಪಡಿಸಬೇಕು.

ಈ ಕುರಿತು ಪ್ರತಿಕ್ರಿಯಿಸಿದ ಅಗರವಾಲ್, ‘ವಾಡಾದ ಸೂಚನೆಯನ್ನು ಪಾಲಿಸಲಾಗುತ್ತಿದೆ. ಮದ್ದು ಸೇವನೆಯ ಹೆಚ್ಚು ಸಾಧ್ಯತೆಗಳು ಇರುವ ಕ್ರೀಡೆಗಳ ಆಟಗಾರರನ್ನು ಗುರಿಯಾಗಿಟ್ಟುಕೊಂಡು ಪರೀಕ್ಷೆ ನಡೆಸಲಾಗುವುದು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.