ADVERTISEMENT

ಟೋಕಿಯೊ ಒಲಿಂಪಿಕ್ಸ್ –2020: ಹಾಕಿ ಅಂಗಳದಲ್ಲಿ ಪದಕ ಧ್ಯಾನ

ಭಾರತದ ಕನಸಿನ ಪಯಣ

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 19:35 IST
Last Updated 7 ಜುಲೈ 2021, 19:35 IST
ಬಲ್ಬೀರ್ ಸಿಂಗ್, ಮೇಜರ್ ಧ್ಯಾನಚಂದ್
ಬಲ್ಬೀರ್ ಸಿಂಗ್, ಮೇಜರ್ ಧ್ಯಾನಚಂದ್    

ಭಾರತದ ಹಾಕಿ ಕ್ರೀಡೆಯ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ. ಟೋಕಿಯೊದ ಒಲಿಂಪಿಕ್ಸ್‌ ಅಂಗಳದಲ್ಲಿ ಚಿನ್ನದ ನೆನಪುಗಳಿವೆ. 1964ರಲ್ಲಿ ಜಪಾನಿನ ರಾಜಧಾನಿಯಲ್ಲಿ ನಡೆದಿದ್ದ ಕೂಟದ ಫೈನಲ್‌ನಲ್ಲಿ ಪಾಕಿಸ್ತಾನದ ಎದುರು ಗೆದ್ದು ಚಿನ್ನದ ಪದಕ ಕೊರಳಿಗೇರಿಸಿಕೊಂಡಿತ್ತು.

1960ರಲ್ಲಿ ಪಾಕಿಸ್ತಾನದ ಎದುರಿನ ಸೋಲಿಗೆ ಭಾರತ ಸೇಡು ಕೂಡ ತೀರಿಸಿಕೊಂಡಿತ್ತು. 1928 ರಿಂದ 1956ರವರೆಗೆ ಒಲಿಂಪಿಕ್ಸ್‌ ಹಾಕಿಯಲ್ಲಿ ದೊರೆಯಂತೆ ಮೆರೆದಿದ್ದ ಭಾರತ ಮತ್ತೆ ಚಿನ್ನದ ಹೊಳಪು ಕಂಡಿದ್ದು ಟೋಕಿಯೊ ನೆಲದಲ್ಲಿ. ಈಗ ಮತ್ತೆ ಅಂತಹ ದೊಡ್ಡ ಕನಸಿನೊಂದಿಗೆ ಮನಪ್ರೀತ್ ಸಿಂಗ್ ಬಳಗವು ಜಪಾನಿಗೆ ಹೊರಟಿದೆ. ನಾಲ್ಕು ದಶಕಗಳಿಂದ ಒಲಿಯದ ಪದಕವನ್ನು ಗೆದ್ದು ಬರುವ ಛಲದಲ್ಲಿದೆ.

1980ರ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಗೆದ್ದ ಚಿನ್ನವೇ ಕೊನೆ. ಮತ್ತೆ ಭಾರತಕ್ಕೆ ಒಂದು ಕಂಚು ಕೂಡ ಒಲಿದಿಲ್ಲ. ಒಟ್ಟು ಎಂಟು ಚಿನ್ನ, ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಒಲಿಂಪಿಕ್ಸ್‌ನಲ್ಲಿ ಗಳಿಸಿದ ಮತ್ತೊಂದು ಹಾಕಿ ತಂಡ ವಿಶ್ವದಲ್ಲಿ ಇದುವರೆಗೂ ಇಲ್ಲ. ಆದರೆ. ಸಹಜ ಹುಲ್ಲಿನಂಕಣದಿಂದ ಆಸ್ಟ್ರೋಟರ್ಫ್‌ ಕ್ರೀಡಾಂಗಣ, ವೇಗ ತಂತ್ರಗಾರಿಕೆಗೆ ಭಾರತ ಹೊಂದಿಕೊಳ್ಳುವಷ್ಟರಲ್ಲಿ ಯುರೋಪ್ ದೇಶಗಳು ಹಾಕಿ ಅಂಗಳದಲ್ಲಿ ತಮ್ಮ ಪಾರುಪತ್ಯ ಸ್ಥಾಪಿಸಿಬಿಟ್ಟವು. 2008ರ ಬೀಜಿಂಗ್ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ಕೂಡ ಸಾಧ್ಯವಾಗಿರಲಿಲ್ಲ. 2012ರಲ್ಲಿ ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಿತಾದರೂ, 12ನೇ ಸ್ಥಾನದಲ್ಲಿ ಆಟ ಮುಗಿಸಿತು. 2016ರಲ್ಲಿ ಸ್ವಲ್ಪ 8ನೇ ಸ್ಥಾನಕ್ಕೇರಿತ್ತು.

ADVERTISEMENT
ಮನ್‌ಪ್ರೀತ್ ಸಿಂಗ್

ಹಲವು ದಿಗ್ಗಜ ಆಟಗಾರರು ಮನ್‌ಪ್ರೀತ್ ಬಳಗದ ಕುರಿತು ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ ಹಾದಿ ಸುಗಮವಲ್ಲ. ಈ ಬಳಗದಲ್ಲಿರುವ 10 ಮಂದಿಗೆ ಇದೇ ಮೊದಲ ಒಲಿಂಪಿಕ್ಸ್. ಅಲ್ಲದೇ ಭಾರತವು ಕಣಕ್ಕಿಳಿಯಲಿರುವ ಎ ಗುಂಪಿನಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ಸೇರಿದಂತೆ ಬಲಿಷ್ಠ ತಂಡಗಳು ಇವೆ. ಜಪಾನ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಸ್ಪೇನ್ ತಂಡಗಳ ಪೈಪೋಟಿಯನ್ನು ಎದುರಿಸಲಿದೆ.

ಗುರ್ಜಂತ್ ಸಿಂಗ್, ಹರಿಂದರ್ ಪಾಲ್ ಸಿಂಗ್, ಬಿರೇಂದ್ರ ಲಾಕ್ರಾ ಅವರಂತಹ ಪ್ರತಿಭಾವಂತ ಆಟಗಾರರು ತಂಡದಲ್ಲಿದ್ದಾರೆ. ಕೋವಿಡ್ ಸಂಕಷ್ಟದಲ್ಲಿ ಬೆಂದು ಸೋತಿರುವ ದೇಶವಾಸಿಗಳಿಗೆ ಗೆಲುವಿನ ಸಿಹಿಸುದ್ದಿ ಕೊಡುವ ಹೊಣೆ ಭಾರತ ತಂಡದ ಮೇಲೆ ಇದೆ. ಮೇಜರ್ ಧ್ಯಾನಚಂದ್, ಬಲ್ಬೀರ್ ಸಿಂಗ್ ಸೀನಿಯರ್, ಕೌಶಿಕ್, ಅಶೋಕ್‌ ಕುಮಾರ್, ಎಂ.ಪಿ. ಗಣೇಶ್, ಶಂಕರ್ ಲಕ್ಷ್ಮಣ್ ಅವರಂತಹ ದಿಗ್ಗಜರ ಸಾಲಿಗೆ ಸೇರುವ ಅವಕಾಶವೂ ಈಗಿನ ಯುವಪಡೆಗೆ ಇದೆ.

ಮಹಿಳೆಯರ ಹೆಜ್ಜೆಗುರುತು
ರಾಣಿ ರಾಂಪಾಲ್ ನಾಯಕತ್ವದ ಮಹಿಳಾ ಹಾಕಿ ತಂಡವು ಈ ಬಾರಿ ಒಲಿಂಪಿಕ್ಸ್‌ನಲ್ಲಿ ಆಡಲಿದೆ. ಭಾರತ ವನಿತೆಯರ ತಂಡವು ಒಲಿಂಪಿಕ್ಸ್‌ಗೆ ತೆರಳುತ್ತಿರುವುದು ಇದು ಮೂರನೇ ಸಲ. 1980ರಲ್ಲಿ ಒಂದು ಬಾರಿ ಭಾಗವಹಿಸಿತ್ತು. ಅದಾದ ನಂತರ 2016ರಲ್ಲಿ ಅರ್ಹತೆ ಗಿಟ್ಟಿಸಿತ್ತು. ಅಲ್ಲಿ 12ನೇ ಸ್ಥಾನ ಪಡೆದಿತ್ತು.

ಈ ತಂಡವು 2018ರ ಏಷ್ಯಾ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿತ್ತು. ಮಹಿಳೆಯರ ವಿಭಾಗದ ಎ ಗುಂಪಿನಲ್ಲಿ ಭಾರತ ತಂಡವು ಕಣಕ್ಕಿಳಿಯಲಿದೆ. ನೆದರ್ಲೆಂಡ್ಸ್, ಐರ್ಲೆಂಡ್, ದಕ್ಷಿಣ ಆಫ್ರಿಕಾ, ಬ್ರಿಟನ್, ಜರ್ಮನಿ ತಂಡಗ ಳೊಂದಿಗೆ ಪೈಪೋಟಿ ನಡೆಸಲಿದೆ.

ಒಲಿಂಪಿಕ್ಸ್‌: ಹೆಚ್ಚುವರಿ ವಸತಿ ವ್ಯವಸ್ಥೆ
ನವದೆಹಲಿ (ಪಿಟಿಐ):
ಒಲಿಂಪಿಕ್ಸ್ ಸಂದರ್ಭದಲ್ಲಿ ಟೋಕಿಯೊದಲ್ಲಿ ಕೋವಿಡ್ ಕಾರಣದಿಂದ ಪರಿಸ್ಥಿತಿ ಬಿಗಡಾಯಿಸಿದರೆ ಆಟಗಾರರ ಕ್ವಾರಂಟೈನ್‌ಗಾಗಿ ಹೆಚ್ಚುವರಿ ವಸತಿ ವ್ಯವಸ್ಥೆಯನ್ನು ಕಾಯ್ದಿರಿಸಲಾಗಿದೆ ಎಂದು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ಬುಧವಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.