ADVERTISEMENT

ಭಾರತ ಹಾಕಿ ತಂಡ ಪರಿಪಕ್ವ: ಹಸನ್ ಸರ್ದಾರ್

ಪಾಕಿಸ್ತಾನ ತಂಡದ ಮಾಜಿ ನಾಯಕ ಅಭಿಮತ

ಪಿಟಿಐ
Published 11 ಜನವರಿ 2023, 19:32 IST
Last Updated 11 ಜನವರಿ 2023, 19:32 IST

ನವದೆಹಲಿ: ಈ ಹಿಂದಿನ ತಂಡಗಳಿಗಿಂತ ಈಗಿರುವ ಭಾರತ ಹಾಕಿ ತಂಡವು ಹೆಚ್ಚು ಪರಿಪಕ್ವವಾಗಿದೆ ಎಂದು ಪಾಕಿಸ್ತಾನ ತಂಡದ ಮಾಜಿ ನಾಯಕ ಹಸನ್ ಸರ್ದಾರ್ ಅಭಿಪ್ರಾಯಪಟ್ಟಿದ್ದಾರೆ.

ಭಾರತವನ್ನು ಹೊರತುಪಡಿಸಿದರೆ ಆಸ್ಟ್ರೇಲಿಯಾ, ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್ ತಂಡಗಳು ಬಲಿಷ್ಠವಾಗಿವೆ ಎಂದು 1984ರ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ತಂಡದ ಆಟಗಾರ ಹೇಳಿದ್ದಾರೆ.

ಎಫ್‌ಐಎಚ್‌ ಪುರುಷರ ಹಾಕಿ ವಿಶ್ವಕಪ್ ಟೂರ್ನಿಯು ಇದೇ ಶುಕ್ರವಾರದಿಂದ ಒಡಿಶಾದ ಭುವನೇಶ್ವರ ಮತ್ತು ರೂರ್ಕೆಲಾದಲ್ಲಿ ನಡೆಯಲಿದೆ. ಭಾರತವು ಇಂಗ್ಲೆಂಡ್‌, ಸ್ಪೇನ್‌ ಮತ್ತು ವೇಲ್ಸ್ ತಂಡಗಳಿರುವ ಡಿ ಗುಂಪಿನಲ್ಲಿ ಸ್ಥಾನ ಪಡೆದಿದೆ.

ADVERTISEMENT

1982ರಲ್ಲಿ ಮುಂಬೈನಲ್ಲಿ ನಡೆದಿದ್ದ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಹಸನ್ ಅವರಿದ್ದ ತಂಡವು ಪ್ರಶಸ್ತಿ ಜಯಿಸಿತ್ತು. ಆ ಟೂರ್ನಿಯಲ್ಲಿ 11 ಗೋಲು ಗಳಿಸಿದ್ದ ಅವರು ಟೂರ್ನಿಯ ಶ್ರೇಷ್ಠ ಆಟಗಾರ ಎನಿಸಿಕೊಂಡಿದ್ದರು.

‘ಭಾರತ ತಂಡವು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸುವ ಸಾಮರ್ಥ್ಯ ಹೊಂದಿದೆ ಎಂದು ನಾನು ಮೊದಲೇ ಹೇಳಿದ್ದೆ. ತಂಡವು ಕಂಚು ಜಯಿಸಿತು. ವಿಶ್ವ ಹಾಕಿಯ ಅಗ್ರ ನಾಲ್ಕು ತಂಡಗಳಿಗಿಂತ ಭಾರತ ಭಿನ್ನವೇನಲ್ಲ‘ ಎಂದು ಸುದ್ದಿಸಂಸ್ಥೆಯೊಂದಿಗಿನ ಸಂದರ್ಶನದಲ್ಲಿ ಹಸನ್ ಹೇಳಿದ್ದಾರೆ.

‘ತವರಿನಲ್ಲಿ ಆಡುತ್ತಿರುವ ಪ್ರಯೋಜನವೂ ಭಾರತ ತಂಡಕ್ಕಿದೆ. ಒಡಿಶಾದಲ್ಲಿ ನಡೆಯುವ ಹಾಕಿ ಟೂರ್ನಿಗಳನ್ನು ನೋಡಿದ್ದೇನೆ. ದೊಡ್ಡ ಮಟ್ಟದಲ್ಲಿ ಹಾಕಿ ಕ್ರೀಡೆಗೆ ಉತ್ತೇಜನ ನೀಡುತ್ತಿರುವ ಅಲ್ಲಿಯ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಅಭಿನಂದಿಸುವೆ‘ ಎಂದು ಹಸನ್ ನುಡಿದರು.

ಭಾರತ ತಂಡವು ಏಕೈಕ ವಿಶ್ವಕಪ್ ಟ್ರೋಫಿ ಜಯಿಸಿದ್ದು, 48 ವರ್ಷಗಳ ಹಿಂದೆ. 1975ರಲ್ಲಿ ಮಲೇಷ್ಯಾದ ಕ್ವಾಲಾಲಂಪುರದಲ್ಲಿ ನಡೆದಿದ್ದ ಟೂರ್ನಿಯ ಫೈನಲ್‌ನಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸಿತ್ತು. ಆ ಬಳಿಕ ನಡೆದ ಯಾವುದೇ ಟೂರ್ನಿಯಲ್ಲಿ ತಂಡವು ಕನಿಷ್ಠ ಸೆಮಿಫೈನಲ್ ಕೂಡ ತಲುಪಿಲ್ಲ.

2021ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದು ಪದಕದ ಬರ ನೀಗಿಸಿತ್ತು.

ಈ ಬಾರಿಯ ಟೂರ್ನಿಯಲ್ಲಿ ಪಾಕಿಸ್ತಾನ ತಂಡವು ಅರ್ಹತೆ ಗಳಿಸಲು ಸಾಧ್ಯವಾಗದಿದ್ದುದ್ದಕ್ಕೆ ಹಸನ್ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.