ADVERTISEMENT

CWG ನಾಳೆಯಿಂದ ಅಥ್ಲೆಟಿಕ್ಸ್‌: ಸೀಮಾ, ಶ್ರೀಶಂಕರ್‌, ಸಬ್ಳೆ ಮೇಲೆ ಭರವಸೆ

ಪಿಟಿಐ
Published 1 ಆಗಸ್ಟ್ 2022, 13:47 IST
Last Updated 1 ಆಗಸ್ಟ್ 2022, 13:47 IST
ಎಲ್ದೋಸ್‌ ಪೌಲ್
ಎಲ್ದೋಸ್‌ ಪೌಲ್   

ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್‌ ಕೂಟದ ಅಥ್ಲೆಟಿಕ್ಸ್‌ ಸ್ಪರ್ಧೆಗಳು ಮಂಗಳವಾರ ಆರಂಭವಾಗಲಿದ್ದು, ನೀರಜ್‌ ಚೋಪ್ರಾ ಅವರ ಅನುಪಸ್ಥಿತಿಯ ನಡುವೆಯೂ ಭಾರತ ತಂಡ ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದೆ.

ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿದ್ದ ಕಳೆದ ಬಾರಿಯ ಕೂಟದಲ್ಲಿ ನೀರಜ್, ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ಚಿನ್ನ ಜಯಿಸಿದ್ದರು. ಆ ಬಳಿಕ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದ ಅವರು, ಈಚೆಗೆ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪಡೆದಿದ್ದರು.

ವಿಶ್ವ ಚಾಂಪಿಯನ್‌ಷಿಪ್‌ನ ವೇಳೆ ತೊಡೆಯ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಕಾಮನ್‌ವೆಲ್ತ್‌ ಕೂಟದಿಂದ ಹಿಂದೆ ಸರಿದಿದ್ದರು.

ADVERTISEMENT

ಅವರ ಗೈರುಹಾಜರಿ ಭಾರತಕ್ಕೆ ಹಿನ್ನಡೆ ಉಂಟುಮಾಡಿದೆಯಾದರೂ, ಪದಕದ ಭರವಸೆ ಮೂಡಿಸಿರುವ ಇತರ ಅಥ್ಲೀಟ್‌ಗಳಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಲಾಗಿದೆ.

ಲಾಂಗ್‌ಜಂಪರ್ ಮುರಳಿ ಶ್ರೀಶಂಕರ್‌, ಸ್ಟೀಪಲ್‌ ಚೇಸ್‌ನಲ್ಲಿ ಅವಿನಾಶ್‌ ಸಬ್ಳೆ, ಮಹಿಳಾ ಡಿಸ್ಕಸ್‌ ಥ್ರೋ ಅಥ್ಲೀಟ್ ಸೀಮಾ ಪೂನಿಯಾ ಮತ್ತು ಜಾವೆಲಿನ್ ಥ್ರೋ ಸ್ಪರ್ಧಿ ಅನುರಾಣಿ ಅವರು ಪದಕದ ಭರವಸೆ ಮೂಡಿಸಿದ್ದಾರೆ.

ಟ್ರಿಪಲ್‌ಜಂಪ್‌ನಲ್ಲಿ ಪ್ರವೀಣ್‌ ಚಿತ್ರವೇಲ್, ಅಬ್ದುಲ್ಲಾ ಅಬೂಬಕರ್‌ ಮತ್ತು ಎಲ್ದೋಸ್‌ ಪೌಲ್‌ ಅವರಲ್ಲಿ ಕನಿಷ್ಠ ಒಬ್ಬರು ಪದಕ ಗೆಲ್ಲುವರೆಂದು ನಿರೀಕ್ಷಿಸಲಾಗಿದೆ.

ಯೂಜಿನ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ ಪ್ರವೇಶಿಸಿದ್ದ ಐವರು ಅಥ್ಲೀಟ್‌ಗಳು ತಂಡದಲ್ಲಿರುವ ಕಾರಣ ಭಾರತ ಈ ಬಾರಿ ಕನಿಷ್ಠ ಆರು ಪದಕಗಳನ್ನು ಎದುರುನೋಡುತ್ತಿದೆ.

ಕಾಮನ್‌ವೆಲ್ತ್‌ನಲ್ಲಿ ಭಾರತದ ಅಥ್ಲೀಟ್‌ಗಳ ಅತ್ಯುತ್ತಮ ಪ್ರದರ್ಶನ 2010ರ ನವದೆಹಲಿ ಕೂಟದಲ್ಲಿ ದಾಖಲಾಗಿತ್ತು. ಅಲ್ಲಿ 2 ಚಿನ್ನ, 3 ಬೆಳ್ಳಿ ಮತ್ತು 7 ಕಂಚು ಜಯಿಸಿತ್ತು.

ಎರಡನೇ ಅತ್ಯುತ್ತಮ ಪ್ರದರ್ಶನ 2014 ಮತ್ತು 2018ರ ಕೂಟಗಳಲ್ಲಿ ಮೂಡಿಬಂದಿತ್ತು. ಈ ಕೂಟಗಳಲ್ಲಿ ತಲಾ ಒಂದು ಚಿನ್ನ, ಬೆಳ್ಳಿ, ಕಂಚು ಪಡೆದಿತ್ತು.

ಭಾನುವಾರ ಪುರುಷರ ಲಾಂಗ್‌ಜಂಪ್‌ ಸ್ಪರ್ಧೆಯ ಅರ್ಹತಾ ಸುತ್ತು ನಡೆಯಲಿದ್ದು, ಶ್ರೀಶಂಕರ್‌ ಮತ್ತು ಮಹಮ್ಮದ್‌ ಅನೀಸ್‌ ಯಹ್ಯಾ ಕಣಕ್ಕಿಳಿಯಲಿದ್ದಾರೆ. ಇತ್ತೀಚಿನ ಹಲವು ಕೂಟಗಳಲ್ಲಿ 8 ಮೀ. ಗಿಂತ ಹೆಚ್ಚಿನ ಸಾಧನೆ ಮಾಡಿರುವ ಶ್ರೀಶಂಕರ್‌, ಅದೇ ಪ್ರದರ್ಶನ ಪುನರಾವರ್ತಿಸಿದರೆ ಪದಕ ಗೆಲ್ಲುವ ಸಾಧ್ಯತೆಯಿದೆ.

ಕಾಮನ್‌ವೆಲ್ತ್‌ ಕೂಟದ ಲಾಂಗ್‌ಜಂಪ್‌ನಲ್ಲಿ ಕಣಕ್ಕಿಳಿಯಲಿರುವ ಸ್ಪರ್ಧಿಗಳಲ್ಲಿ ಈ ಋತುವಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವುದು ಶ್ರೀಶಂಕರ್‌. ಆದ್ದರಿಂದ ಅವರ ಮೇಲಿನ ನಿರೀಕ್ಷೆ ಹೆಚ್ಚಿದೆ.

ಮಹಿಳಾ ಡಿಸ್ಕಸ್‌ ಥ್ರೋ ಸ್ಪರ್ಧೆಯಲ್ಲಿ ಸೀಮಾ, ಪದಕ ಗೆಲ್ಲುವುದು ಬಹುತೇಕ ಖಚಿತ. ಈ ಹಿಂದಿನ ನಾಲ್ಕು ಕೂಟಗಳಲ್ಲಿ ಅವರು ಒಮ್ಮೆಯೂ ಬರಿಗೈಯಲ್ಲಿ ಮರಳಿಲ್ಲ. ಮೂರು ಬೆಳ್ಳಿ ಹಾಗೂ ಒಂದು ಕಂಚು ಗೆದ್ದಿದ್ದು, ಐದನೇ ಪದಕದ ನಿರೀಕ್ಷೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.