ADVERTISEMENT

ಸೈಕ್ಲಿಂಗ್ ರಾಯಭಾರಿ

ಮೈಸೂರಿನ ಲೋಕೇಶ್ ಸಾಧನೆಯ ಹಾದಿ

ಮಹಮ್ಮದ್ ನೂಮಾನ್
Published 20 ಜನವರಿ 2019, 19:45 IST
Last Updated 20 ಜನವರಿ 2019, 19:45 IST
ಲೋಕೇಶ್
ಲೋಕೇಶ್   

ಕರ್ನಾಟಕದಲ್ಲಿ ಸೈಕ್ಲಿಂಗ್‌ ಸ್ಪರ್ಧೆ ಎಂದರೆ ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳ ಹೆಸರು ನೆನಪಿಗೆ ಬರುತ್ತವೆ. ಏಕೆಂದರೆ ಈ ಭಾಗದ ಸ್ಪರ್ಧಿಗಳು ಮಾತ್ರ ಸೈಕ್ಲಿಂಗ್‌ನಲ್ಲಿ ಮಿಂಚು ಹರಿಸಿ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಪದಕ ಗೆಲ್ಲುತ್ತಾರೆ. ದಕ್ಷಿಣ ಕರ್ನಾಟಕ ಜಿಲ್ಲೆಗಳಲ್ಲಿ ಈ ಕ್ರೀಡೆ ಅಷ್ಟೊಂದು ಜನಪ್ರಿಯತೆ ಪಡೆದಿಲ್ಲ.

ಆದರೆ ಇದೀಗ ರಾಜ್ಯದ ಸೈಕ್ಲಿಂಗ್‌ ಸ್ಪರ್ಧೆಯಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿದೆ. ಮೈಸೂರು, ಬೆಂಗಳೂರು ಒಳಗೊಂಡಂತೆ ಇತರ ನಗರಗಳಿಂದಲೂ ಸೈಕ್ಲಿಂಗ್‌ ಸ್ಪರ್ಧಿಗಳು ಬರುತ್ತಿದ್ದಾರೆ. ಅದರಲ್ಲೂ ಮೈಸೂರಿನಲ್ಲಿ ಮೌಂಟೇನ್‌ ಟೂರ್‌ ಬೈಕ್‌ (ಎಂಟಿಬಿ) ಸೈಕ್ಲಿಂಗ್‌ ರೇಸ್ ಜನಪ್ರಿಯತೆ ಪಡೆಯುತ್ತಿದೆ.

ಅರಮನೆ ನಗರಿಯಲ್ಲಿ ಸೈಕ್ಲಿಸ್ಟ್‌ಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವವರಲ್ಲಿ ಎನ್‌.ಲೋಕೇಶ್ ಒಬ್ಬರು. ಅಂತರರಾಷ್ಟ್ರೀಯ ಸೈಕ್ಲಿಸ್ಟ್‌ ಆಗಿರುವ ಅವರು ಆಗಿಂದಾಗ್ಗೆ ಸ್ಪರ್ಧೆಗಳನ್ನು ಆಯೋಜಿಸಿ ಯುವ ಪ್ರತಿಭೆಗಳನ್ನು ಬೆಳಕಿಗೆ ತರುತ್ತಿದ್ದಾರೆ. ಇವರ ಕೈಕೆಳಗೆ ತರಬೇತಿ ಪಡೆಯುತ್ತಿರುವವರಲ್ಲಿ ನಾಲ್ಕು ಮಂದಿ ಈಗಾಗಲೇ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದಿದ್ದಾರೆ.

ADVERTISEMENT

ಏಕಲವ್ಯ ಪ್ರಶಸ್ತಿ ವಿಜೇತರೂ ಆಗಿರುವ ಲೋಕೇಶ್‌ ಕಳೆದ ಮೂರು ವರ್ಷಗಳಿಂದ ಮೈಸೂರಿನಲ್ಲಿ ಎಂಟಿಬಿ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ ಆಯೋಜಿಸುತ್ತಾ ಬಂದಿದ್ದಾರೆ. ಮೂರನೇ ವರ್ಷದ ಸ್ಪರ್ಧೆ ಭಾನುವಾರ (ಜ.20) ನಡೆಯಿತು. ಲೋಕೇಶ್‌ ನಡೆಸುತ್ತಿರುವ ಬೈಸಿಕಲ್‌ ಸ್ಟೋರ್‌ ‘ಸೈಕ್ಲೊಪಿಡಿಯಾ’, ಸ್ಕಾಟ್‌ ಸೈಕ್ಲಿಂಗ್‌ ಬ್ರಾಂಡ್‌, ಕರ್ನಾಟಕ ರಾಜ್ಯ ಸೈಕ್ಲಿಂಗ್‌ ಸಂಸ್ಥೆ ಮತ್ತು ಮೈಸೂರು ಜಿಲ್ಲಾ ಸೈಕ್ಲಿಂಗ್‌ ಸಂಸ್ಥೆ ಸಹಯೋಗದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ವಿವಿಧ ವಯೋವರ್ಗಗಳಲ್ಲಿ 200ಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಂಡಿದ್ದರು.

ಲೋಕೇಶ್ ಅವರೊಂದಿಗಿನ ಸಂದರ್ಶನದ ವಿವರ ಇಲ್ಲಿದೆ.

* ಮೈಸೂರಿನಲ್ಲಿ ಸೈಕ್ಲಿಂಗ್‌ ಕ್ರೀಡೆ ಉತ್ತೇಜಿಸುವಲ್ಲಿ ನಿಮ್ಮ ಪಾತ್ರ...

ಕೆಲ ವರ್ಷಗಳ ಹಿಂದೆ ನಗರದಲ್ಲಿ ಸೈಕ್ಲಿಂಗ್‌ ಸ್ಟೋರ್‌ ಆರಂಭಿಸಿ, ಮೈಸೂರಿಗರಲ್ಲಿ ಸೈಕ್ಲಿಂಗ್‌ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದೇನೆ. ಸೈಕ್ಲಿಂಗ್‌ ಬಗ್ಗೆ ಆಸಕ್ತಿ ಇರುವ ಒಂದಷ್ಟು ಮಂದಿಯನ್ನು ಹುಡುಕಿದೆ. ಅವರನ್ನು ವಾರಾಂತ್ಯದಲ್ಲಿ ನಗರದ ಹೊರವಲಯಕ್ಕೆ ಸೈಕ್ಲಿಂಗ್‌ಗಾಗಿ ಕರೆದೊಯ್ಯುತ್ತಿದ್ದೆ. ಹೆಚ್ಚಿನ ಜನರು ಆಸಕ್ತಿ ತೋರಿದ್ದರಿಂದ ನಮ್ಮ ಗುಂಪು ದೊಡ್ಡದಾಗುತ್ತಾ ಬಂತು. ಮಕ್ಕಳಿಗಾಗಿ ಸಣ್ಣ ಮಟ್ಟದ ಸ್ಪರ್ಧೆಗಳನ್ನು ಆಯೋಜಿಸಿದೆ. 14, 16 ವರ್ಷದ ಹುಡುಗರೂ ಸೈಕ್ಲಿಂಗ್‌ಗೆ ಬರತೊಡಗಿದರು.

ಹವ್ಯಾಸಕ್ಕಾಗಿ ನಮ್ಮ ಜತೆ ಸೈಕ್ಲಿಂಗ್‌ಗೆ ಬರುತ್ತಿರುವವರಿಗೆ ಸೈಕ್ಲಿಂಗ್‌ ಸ್ಪರ್ಧೆಯ ಬಗ್ಗೆ ತಿಳಿಸಿದೆ. ನಗರಗಳಲ್ಲಿ ಹವ್ಯಾಸಕ್ಕೆ ಸೈಕ್ಲಿಂಗ್‌ ಮಾಡುವವರು ತುಂಬಾ ಮಂದಿ ಸಿಗುವರು. ಆದರೆ ಅವರನ್ನು ಸ್ಪರ್ಧೆಗೆ ಎಳೆದುಕೊಂಡು ಬರುವುದು ತುಂಬಾ ಕಷ್ಟ. ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಮುಂದೆ ಬಂದವರಿಗೆ ಸೂಕ್ತ ತರಬೇತಿ ನೀಡಿದೆ.

*ಎಂಟಿಬಿ ರೇಸಿಂಗ್‌ ಜನಪ್ರಿಯತೆ ಪಡೆಯುತ್ತಿರುವ ಬಗ್ಗೆ...
ಈಗ ಕರ್ನಾಟಕದಲ್ಲಿ ಮೌಂಟೇನ್‌ ಟೂರ್‌ ಬೈಕ್‌ (ಎಂಟಿಬಿ) ರೇಸಿಂಗ್‌ ಎಂದರೆ ಮೈಸೂರಿನ ಹೆಸರು ಮೊದಲು ಕೇಳಿಬರುತ್ತದೆ. ಅಷ್ಟರಮಟ್ಟಿಗೆ ಮೈಸೂರು ಈ ವಿಭಾಗದಲ್ಲಿ ಬೆಳವಣಿಗೆ ಸಾಧಿಸಿದೆ. ರೋಡ್‌ ಸೈಕ್ಲಿಂಗ್ ತುಂಬಾ ಕಷ್ಟ. ಸ್ಪರ್ಧಿಗಳು ಹಲವು ಕಿ.ಮೀ.ಗಳವರೆಗೆ ಸೈಕ್ಲಿಂಗ್‌ ಮಾಡಬೇಕು. ಆದರೆ ಎಂಟಿಬಿ ಸ್ಪರ್ಧೆ ಗುಡ್ಡಗಾಡು ಪ್ರದೇಶದಲ್ಲಿ ಆಯೋಜಿಸಲಾಗುತ್ತದೆ. ಕೆಲವು ಹೆತ್ತವರು ತಮ್ಮ ಮಕ್ಕಳನ್ನು ರೋಡ್‌ ಸೈಕ್ಲಿಂಗ್‌ಗೆ ಕಳುಹಿಸಲು ಹಿಂಜರಿದರೂ, ಎಂಟಿಬಿ ರೇಸ್‌ಗೆ ಕಳುಹಿಸಲು ಧೈರ್ಯ ತೋರುತ್ತಾರೆ.

*ಮೈಸೂರಿನ ಸ್ಪರ್ಧಿಗಳ ಸಾಧನೆ ಹೇಗಿದೆ?
ಕಳೆದ ಅಕ್ಟೋಬರ್‌ನಲ್ಲಿ ಪುಣೆಯಲ್ಲಿ ನಡೆದಿದ್ದ ಎಂಟಿಬಿ ರೇಸ್‌ಗೆ ರಾಜ್ಯ ತಂಡದಲ್ಲಿ ಮೈಸೂರು ಜಿಲ್ಲೆಯ 9 ಮಂದಿ ಸ್ಥಾನ ಪಡೆದುಕೊಂಡಿದ್ದರು. ಪಾಲ್ಗೊಂಡ ಎಲ್ಲರೂ ಪದಕ ಜಯಿಸಿದ್ದರು. ಇದರಿಂದ ಕರ್ನಾಟಕ ತಂಡ ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತ್ತು. ಯುವ ಸ್ಪರ್ಧಿ ವೈಶಾಖ್‌ ಅವರು ಎರಡು ಪದಕ ಜಯಿಸಿದ್ದರು. ಹರಿಯಾಣದಲ್ಲಿ ಇತ್ತೀಚೆಗೆ ನಡೆದಿದ್ದ ರಾಷ್ಟ್ರೀಯ ರೋಡ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲೂ ಅವರಿಗೆ ಪದಕ ಲಭಿಸಿತ್ತು.

* ಮೈಸೂರಿನಲ್ಲಿ ರೋಡ್‌ ಸೈಕ್ಲಿಂಗ್ ಆಯೋಜಿಸುವ ಯೋಜನೆ ಇದೆಯೇ?
ಎಂಟಿಬಿ ರೇಸ್‌ ಆಯೋಜನೆಗೆ ಹೋಲಿಸಿದರೆ ರೋಡ್‌ ರೇಸ್‌ ಆಯೋಜಿಸುವುದು ಕಷ್ಟ. ಟ್ರಾಫಿಕ್ ನಿಯಂತ್ರಣ, ಹೆಚ್ಚಿನ ಸಂಖ್ಯೆಯ ಸಿಬ್ಬಂದಿ ಬೇಕು. ಮೈಸೂರಿನಲ್ಲಿ ರೋಡ್‌ ಸೈಕ್ಲಿಂಗ್ ಸ್ಪರ್ಧೆಗಳು ಆಯೋಜನೆಯಾಗುತ್ತಿಲ್ಲವಾದರೂ ರೋಡ್‌ ಸೈಕ್ಲಿಂಗ್‌ ಸ್ಪರ್ಧಿಗಳು ಬೆಳೆದುಬರುತ್ತಿದ್ದಾರೆ. ಹಲವು ಯುವ ಪ್ರತಿಭೆಗಳು ರೋಡ್‌ ಸೈಕ್ಲಿಂಗ್‌ ತರಬೇತಿ ನಡೆಸುತ್ತಿದ್ದು, ವಿವಿಧ ಕಡೆ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಾರೆ.

* ಸೈಕ್ಲಿಂಗ್‌ ಸ್ಪರ್ಧಿಗಳಿಗೆ ಪ್ರಾಯೋಜಕರ ಕೊರತೆ ಕಾಡುತ್ತಿದ್ದೆಯೇ?
ಸ್ಪರ್ಧಿಗಳ ಬೆಳವಣಿಗೆಗೆ ಪ್ರಾಯೋಜಕತ್ವ ದೊರೆಯುವುದು ಮುಖ್ಯ. ನಾನು 2001 ರಲ್ಲಿ ಸೈಕ್ಲಿಂಗ್‌ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಆರಂಭಿಸಿದ್ದೆ. 2011ರ ವರೆಗೂ ಸ್ವಂತ ದುಡ್ಡಿನಲ್ಲಿ ತರಬೇತಿ ಹಾಗೂ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. 2012 ರ ಬಳಿಕವಷ್ಟೇ ನನಗೆ ಪ್ರಾಯೋಜಕರು ದೊರೆತದ್ದು. ಆದರೆ ಈಗ ಹಿಂದಿನಷ್ಟು ಕಷ್ಟ ಇಲ್ಲ. ರಾಷ್ಟ್ರಮಟ್ಟದಲ್ಲಿ ಮಿಂಚಬಲ್ಲ ಸ್ಪರ್ಧಿಗಳಿಗೆ ಪ್ರಾಯೋಜಕತ್ವ ನೀಡಲು ವಿವಿಧ ಸೈಕಲ್‌ ಬ್ರಾಂಡ್‌ಗಳು ಮುಂದೆ ಬರುತ್ತಿವೆ. ಇದು ಆಶಾದಾಯಕ ಬೆಳವಣಿಗೆ ಎನ್ನಬಹುದು.

ಎನ್‌.ಲೋಕೇಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.