ಡಿ. ಗುಕೇಶ್
ಪಿಟಿಐ
ನವದೆಹಲಿ: ವೃತ್ತಿಯಲ್ಲಿ ವೈದ್ಯರಾಗಿದ್ದ ತಂದೆ –ತಾಯಿ, ಮಗ ಗುಕೇಶ್ ಕಂಡ ವಿಶ್ವ ಚಾಂಪಿಯನ್ ಕನಸನ್ನು ಈಡೇರಿಸಲು ಸಂಕಲ್ಪ ತೊಟ್ಟು ವೃತ್ತಿಗೆ ವಿರಾಮ ನೀಡಿದ್ದರು. ಕ್ರೌಡ್ ಫಂಡಿಂಗ್ ಮೋರೆ ಹೋಗಿದ್ದರು. ಏಳನೇ ವರ್ಷ ವಯಸ್ಸಿನಲ್ಲಿ ಚೆಸ್ ಆಡಲು ಆರಂಭಿಸಿದ ಗುಕೇಶ್ ವಿಶ್ವ ಚಾಂಪಿಯನ್ ಆಗಬೇಕೆಂಬ ತಮ್ಮ ಕನಸನ್ನು ಒಂದು ದಶಕದ ನಂತರ ಸಾಕಾರಗೊಳಿಸಿದ್ದಾರೆ. 18 ವರ್ಷ ವಯಸ್ಸಿನಲ್ಲಿ ಅತಿ ಕಿರಿಯ ವಿಶ್ವ ಚಾಂಪಿಯನ್ ಆಗಿದ್ದಾರೆ.
ಈ ಹಿಂದಿನ ವಿಶ್ವ ಚಾಂಪಿಯನ್ ಆದ ಡಿಂಗ್ ಲಿರೆನ್ ಅವರನ್ನು 14 ಪಂದ್ಯಗಳ ಫೈನಲ್‌ನಲ್ಲಿ ಸೋಲಿಸಿ, 2024ನೇ ಸಾಲನ್ನು ಸಾಧನೆಗಳ ದೃಷ್ಟಿಯಿಂದ ಅವಿಸ್ಮರಣೀಯಗೊಳಿಸಿಕೊಂಡಿದ್ದಾರೆ.
ಆದರೆ ಚೆನ್ನೈ ಆಟಗಾರನ ಈ ಪಯಣ ಹೂವಿನ ಹಾದಿಯಾಗಿರಲಿಲ್ಲ. ಅದಕ್ಕೆ ಅವರ ಕಠಿಣ ಪರಿಶ್ರಮದ ಜೊತೆಗೆ ಪೋಷಕರ ತ್ಯಾಗದ ಬಲವೂ ಇದೆ. ತಂದೆ ಇಎನ್‌ಟಿ ತಜ್ಞ ಡಾ.ರಜನಿಕಾಂತ್ ಮತ್ತು ಮೈಕ್ರೊ ಬಯಾಲಜಿಸ್ಟ್ ಆಗಿರುವ ತಾಯಿ ಪದ್ಮಾ ಅವರು ಮಗನ ಯಶಸ್ಸಿನ ಹಿಂದೆ ಸಾಕಷ್ಟು ಶ್ರಮಪಟ್ಟಿದ್ದಾರೆ. ರಜನಿಕಾಂತ್ ಅವರು 2017–18ರಲ್ಲೇ ವೈದ್ಯ ವೃತ್ತಿಗೆ ಬಹುತೇಕ ವಿದಾಯ ಹೇಳಿಯಾಗಿತ್ತು. ವಿಶ್ವದ ವಿವಿಧ ಕಡೆ ಟೂರ್ನಿಗಳಲ್ಲಿ ಆಡುವಾಗ ಮಗನೊಡನೆ ಅವರೂ ತೆರಳಿದರು. ಅದೂ ಆರ್ಥಿಕ ಇತಿಮಿತಿಗಳ ನಡುವೆ. ತಾಯಿ ಮನೆಯ ಖರ್ಚುವೆಚ್ಚ ಸರಿದೂಗಿಸುವ ಕಡೆ ಗಮನಹರಿಸಿದರು.
‘ಗುಕೇಶ್ ಯಶಸ್ಸಿನಲ್ಲಿ ಪೋಷಕರ ತ್ಯಾಗ ಬಹಳ ದೊಡ್ಡದು’ ಎಂದು ಅವರ ಬಾಲ್ಯದ ಕೋಚ್ ವಿಷ್ಣು ಪ್ರಸನ್ನ ಅವರು ಏಪ್ರಿಲ್‌ನಲ್ಲಿ ಗುಕೇಶ್ ಕ್ಯಾಂಡಿಡೇಟ್ಸ್ ಟೂರ್ನಿ ಗೆದ್ದ ಬಳಿಕ ಸುದ್ದಿಸಂಸ್ಥೆಗೆ ತಿಳಿಸಿದ್ದರು.
‘ತಂದೆ ವೃತ್ತಿಗೆ ವಿರಾಮ ನೀಡಿದ್ದರು. ತಾಯಿಯ ದುಡಿಮೆಯಲ್ಲಿ ಮನೆ ನಡೆಯುತಿತ್ತು. ಗುಕೇಶ್ ವಿವಿಧ ಟೂರ್ನಿಗಳಿಗೆ ಹೋಗುತ್ತಿದ್ದ ಕಾರಣ ಒಬ್ಬರನ್ನೊಬ್ಬರು ನೋಡುತ್ತಿದ್ದುದೇ ಕಡಿಮೆ’ ಎಂದು ಅವರು ನೆನಪಿಸಿದ್ದರು.
ಗ್ರ್ಯಾಂಡ್‌ಮಾಸ್ಟರ್ ಬಿರುದು ಪಡೆದಾಗ ಗುಕೇಶ್ ವಯಸ್ಸು 12 ವರ್ಷ, 7 ತಿಂಗಳು 17 ದಿನ. 2700 ರೇಟಿಂಗ್ ಕ್ಲಬ್‌ಗೆ ಸೇರ್ಪಡೆಗೊಂಡ ಮೂರನೇ ಅತಿ ಕಿರಿಯ ಈತ. 2750ರ ರೇಟಿಂಗ್ ಮೈಲಿಗಲ್ಲು ದಾಟಿದ ವಿಶ್ವದ ಅತಿ ಕಿರಿಯ ಆಟಗಾರ ಎಂಬ ಶ್ರೇಯಸ್ಸು.
2024– ಅವರ ಪಾಲಿಗೆ ಅತ್ಯಂತ ಯಶಸ್ಸಿನ ವರ್ಷ. ಏಪ್ರಿಲ್‌ನಲ್ಲಿ ಕೆನಡಾದ ಟೊರಾಂಟೊದಲ್ಲಿ ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಗೆಲುವು. ಹಂಗೆರಿಯ ಬುಡಾಪೆಸ್ಟ್‌ನಲ್ಲಿ ನಡೆದ ಒಲಿಂಪಿಯಾಡ್‌ನಲ್ಲಿ ಭಾರತಕ್ಕೆ ಐತಿಹಾಸಿಕ ಚಿನ್ನದ ಜೊತೆ ಮೊದಲ ಬೋರ್ಡ್‌ನಲ್ಲಿ ಅಜೇಯ ಸಾಧನೆಗಾಗಿ ವೈಯಕ್ತಿಕ ಚಿನ್ನ. ಇದರ ಜೊತೆಗೆ ಕಳಶಪ್ರಾಯವಾಗಿ ಈಗ ವಿಶ್ವ ಚಾಂಪಿಯನ್ ಪಟ್ಟ.
2013ರಲ್ಲಿ ಅವರ ಚೆಸ್ ಕಲಿಕೆ ಆರಂಭವಾಯಿತು. ಕೆಲವೇ ವರ್ಷಗಳಲ್ಲಿ ಈ ಪ್ರತಿಭಾನ್ವಿತ ವಿವಿಧ ವಯೋವರ್ಗಗಳಲ್ಲಿ ಏಷ್ಯನ್ ಚಾಂಪಿಯನ್ ಆದರು. 2017ರಲ್ಲಿ ಫ್ರಾನ್ಸ್‌ನ ಕಾನ್‌ನಲ್ಲಿ ನಡೆದ ಟೂರ್ನಿಯನ್ನು ಗೆದ್ದು ಇಂಟರ್‌ನ್ಯಾಷನಲ್ ಮಾಸ್ಟರ್ ಪಟ್ಟ. 2018ರಲ್ಲಿ ವಿಶ್ವ ಯೂತ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ 12 ವರ್ಷದೊಳಗಿನವರ ವಿಭಾಗದಲ್ಲಿ ಚಾಂಪಿಯನ್ ಪಟ್ಟ.
ಚೆಸ್ ಕಡೆ ಗುಕೇಶ್ ಅವರ ಉತ್ಕಟ ಮೋಹ ಕಂಡ ಅವರ ಪೋಷಕರು ನಾಲ್ಕನೇ ತರಗತಿಯಲ್ಲೇ ಪೂರ್ಣಾವಧಿ ಶಾಲಾ ಕಲಿಕೆಗೆ ಕೊನೆಹಾಡಿದರು. 2019ರಲ್ಲಿ ದೆಹಲಿಯಲ್ಲಿ ನಡೆದ ಟೂರ್ನಿಯಲ್ಲಿ ಅವರು (ಆಗ) ವಿಶ್ವದ ಎರಡನೇ ಅತಿ ಕಿರಿಯ ಗ್ರ್ಯಾಂಡ್‌ಮಾಸ್ಟರ್ ಆದರು. ಆ ವೇಳೆ ರಷ್ಯಾದ ಸೆರ್ಗಿ ಕರ್ಯಾಕಿನ್ ಅತಿ ಕಿರಿಯ ಗ್ರ್ಯಾಂಡ್‌ಮಾಸ್ಟರ್ ಆಗಿದ್ದರು. ನಂತರದ ವರ್ಷದಲ್ಲಿ ಭಾರತ ಮೂಲದ ಅಮೆರಿಕ ಆಟಗಾರ ಅಭಿಮನ್ಯು ಮಿಶ್ರಾ ನಂತರ ಅತಿ ಕಿರಿಯ ಗ್ರ್ಯಾಂಡ್‌ಮಾಸ್ಟರ್ ಗೌರವಕ್ಕೆ ಭಾಜರಾದರು.
ಚೆನ್ನೈ ಸಮೀಪದ ಮಹಾಬಲಿಪುರಂನಲ್ಲಿ ನಡೆದ 2022ರ ಒಲಿಂಪಿಯಾಡ್‌ನಲ್ಲಿ ಭಾರತ ‘ಬಿ’ ತಂಡದ ಪರ ಆಡಿದ್ದ ಗುಕೇಶ್ ವೈಯಕ್ತಿಕ ಚಿನ್ನ ಗೆದ್ದು ವಿಶ್ವದ ಗಮನ ಸೆಳೆದರು. ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ 2700 ರೇಟಿಂಗ್ ಮೈಲಿಗಲ್ಲು ದಾಟಿದರು. ಆಗ ವಿಶ್ವ ಚಾಂಪಿಯನ್ ಆಗಿದ್ದಾಗ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಸೋಲಿಸಿದ ಅತಿ ಕಿರಿಯ ಆಟಗಾರ ಕೂಡ ಎಂಬ ಹಿರಿಮೆಯೂ ಚೆನ್ನೈನ ಈ ಪ್ರತಿಭಾನ್ವಿತನ ಪಾಲಾಯಿತು.
ಆದರೆ ಕ್ಯಾಂಡಿಡೇಟ್ಸ್ ಟೂರ್ನಿಗೆ ಅರ್ಹತೆ ಪಡೆಯುವಲ್ಲಿ ಅವರಿಗೆ ಅದೃಷ್ಟದ ಬಲವೂ ಇತ್ತು. ತಮಿಳುನಾಡು ಸರ್ಕಾರ ಕೆಲವೇ ಆಟಗಾರರನ್ನು ಒಳಗೊಂಡ ಗ್ರ್ಯಾಂಡ್‌ಮಾಸ್ಟರ್ಸ್ ಟೂರ್ನಿ ಹಮ್ಮಿಕೊಂಡಿತು. ಇದರಲ್ಲಿ ಗೆದ್ದ ಗುಕೇಶ್ ಎಂಟು ಆಟಗಾರರ ಕ್ಯಾಂಡಿಡೇಟ್ಸ್ ಟೂರ್ನಿಗೆ ಟಿಕೆಟ್ ಪಡೆದರು. ಅಲ್ಲಿನ ಗೆಲುವು ಅವರನ್ನು ವಿಶ್ವ ಚಾಂಪಿಯನ್ ಪಟ್ಟಕ್ಕೆ ಅತಿ ಕಿರಿಯ ಚಾಲೆಂಜರ್ ಎಂಬ ಗೌರವಕ್ಕೆ ಪಾತ್ರರನ್ನಾಗಿಸಿತು. ಆಗ ಅವರ ವಯಸ್ಸು 17.
ಕ್ಯಾಂಡಿಡೇಟ್ಸ್ ಟೂರ್ನಿಗೆ ಅರ್ಹತೆ ಪಡೆದ ಮೂರನೇ ಅತಿ ಕಿರಿಯ ಆಟಗಾರ ಗುಕೇಶ್. ಅಮೆರಿಕದ ಬಾಬಿ ಫಿಷರ್ ಮತ್ತು ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಮಾತ್ರ ಅವರಿಗಿಂತ ಸಣ್ಣ ವಯಸ್ಸಿನಲ್ಲಿ ಕ್ಯಾಂಡಿಡೇಟ್ಸ್ ಆಡಿದ್ದರು.
ಈ ಪಯಣದಲ್ಲಿ ಅವರಿಗೆ ಪ್ರಾಯೋಜಕರು ಇರಲಿಲ್ಲ. ಬಹುಮಾನದ ಹಣ ಮತ್ತು ಪೋಷಕರ ಆಸಕ್ತಿಯಿಂದ ಕ್ರೌಡ್ ಫಂಡಿಂಗ್ ಮೂಲಕ ಅವರು ಪ್ರಯಾಣದ ವೆಚ್ಚ ಭರಿಸುತ್ತಿದ್ದರು.
ಈ ವರ್ಷದ ಆರಂಭದಲ್ಲಿ ತಮ್ಮ ಮೆಂಟರ್ ವಿಶ್ವನಾಥನ್ ಆನಂದ್ ಅವರನ್ನು ರ‍್ಯಾಂಕಿಂಗ್‌ನಲ್ಲಿ ಹಿಂದೆಹಾಕಿ ಭಾರತದ ಅಗ್ರಮಾನ್ಯ ಆಟಗಾರ ಎನಿಸಿದ್ದ ಗುಕೇಶ್, ಈಗ ಆನಂದ್ ಅವರ ವೆಸ್ಟ್‌ಬ್ರಿಜ್–ಆನಂದ್ ಚೆಸ್ ಅಕಾಡೆಮಿಯಲ್ಲಿ ಆಟ ಹುರಿಗೊಳಿಸುತ್ತಿದ್ದಾರೆ. ಕೋವಿಡ್ ವೇಳೆ ಈ ಅಕಾಡೆಮಿ ಅಸ್ತಿತ್ವಕ್ಕೆ ಬಂದಿತ್ತು.
‘ಕೋವಿಡ್ ಸಂದರ್ಭದಲ್ಲಿ ನಾವು ಆನಂದ್ ಅವರ ಅಕಾಡೆಮಿಯಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದೆವು. ವಿಶಿ (ಆನಂದ್) ಜೊತೆ ನಾವು ಗುಕೇಶ್ ಭವಿಷ್ಯದ ಬಗ್ಗೆ ಚರ್ಚಿಸುತ್ತಿದ್ದೆವು’ ಎಂದು ವಿಷ್ಣು ಪ್ರಸನ್ನ ಹೇಳುತ್ತಾರೆ.
‘ವಿಶಿ ಸರ್ ನನ್ನ ಪಾಲಿಗೆ ಸ್ಫೂರ್ತಿಯ ಸೆಲೆ. ಅವರ ಅಕಾಡೆಮಿಯಿಂದ ನನಗೆ ಸಾಕಷ್ಟು ಅನುಕೂಲವಾಗಿದೆ. ಅವರಿಗೆ ಆಭಾರಿ. ಅವರ ನೆರವು ಇಲ್ಲದೇ ಹೋಗಿದ್ದಲ್ಲಿ ನಾನು ಈ ಸ್ಥಾನಕ್ಕೆ ತಲುಪುತ್ತಿರಲಿಲ್ಲ’ ಎಂದು ಗುಕೇಶ್ ಹಲವು ಬಾರಿ ಹೇಳಿದ್ದಾರೆ.
ಗುರುವಾರ ಅವರು ವಿಶ್ವನಾಥನ್ ಆನಂದ್ ಮಾಡಿದ ಸಾಧನೆಯನ್ನು ಸರಿಗಟ್ಟಿದ್ದಾರೆ. ತಮ್ಮ ತಂದೆ–ತಾಯಿ ಪಟ್ಟ ಶ್ರಮವನ್ನು ಸಾರ್ಥಕಗೊಳಿಸಿದ್ದಾರೆ.
ಕ್ರಿಕೆಟಿಗ ಎಂ.ಎಸ್.ಧೋನಿ ಮತ್ತು ಟೆನಿಸ್ ದಿಗ್ಗಜ ನೊವಾಕ್ ಜೊಕೊವಿಚ್ ನೆಚ್ಚಿನ ಕ್ರೀಡಾಪಟುಗಳು.ಚಿಕ್ಕವನಿದ್ದಾಗ ಧೋನಿ ಅವರಿಂದ ಮತ್ತು ಈಗ ಜೊಕೊವಿಚ್‌ರಿಂದಸ್ಫೂರ್ತಿ ಪಡೆದಿದ್ದೇನೆ.ಡಿ.ಗುಕೇಶ್, ವಿಶ್ವ ಚೆಸ್ ಚಾಂಪಿಯನ್
ಗುಕೇಶ್ ಅವರ ಈ ಗೆಲುವು, ಚೆಸ್ ಇತಿಹಾಸದ ಪುಟದಲ್ಲಿ ದಾಖಲಾಗಿರುವುದು ಮಾತ್ರವಲ್ಲ ಕೋಟಿ ಕೋಟಿ ಯುವ ಮನಸ್ಸುಗಳಿಗೆ ಕನಸು ಕಾಣಿರಿ, ಅದನ್ನು ಸಾಧಿಸಿ ಎನ್ನುವ ಸ್ಫೂರ್ತಿಯನ್ನೂ ತುಂಬುತ್ತಿದೆನರೇಂದ್ರ ಮೋದಿ, ಪ್ರಧಾನಿ
18ನೇ ವಯಸ್ಸಿಗೆ ವಿಶ್ವ ಚಾಂಪಿಯನ್ ಆಗುವುದು ಎಂದರೆ ಸಣ್ಣ ಮಾತಲ್ಲ. ಇದೊಂದು ಅಭೂತಪೂರ್ವವಾದುದು. ಗೆಲುವನ್ನು ಆತ ಸಂಭ್ರಮಿಸಿದ್ದು ನೋಡುವುದಕ್ಕೆ ಅದ್ಬುತ ದೃಶ್ಯವಾಗಿತ್ತುವಿಶ್ವನಾಥನ್ ಆನಂದ್, ಚೆಸ್ ದಿಗ್ಗಜ
ಭಾರತಕ್ಕೆ ಅತ್ಯಂತ ಹೆಮ್ಮೆ ತಂದುಕೊಟ್ಟಿದ್ದಾರೆ. ಚೆಸ್‌ನಲ್ಲಿ ಭಾರತ ಹೊಂದಿರುವ ಪಾರಮ್ಯವನ್ನು ಈ ಗೆಲುವು ಸಾಬೀತು ಮಾಡಿತು. ಪ್ರತಿಯೊಬ್ಬ ಭಾರತೀಯನ ಪರವಾಗಿ ನಿನ್ನ ಉಜ್ವಲ ಭವಿಷ್ಯಕ್ಕೆ ಶುಭಕಾಮನೆಗಳುದ್ರೌಪದಿ ಮುರ್ಮು, ರಾಷ್ಟ್ರಪತಿ
ವಿಶ್ವ ಚೆಸ್ ಪರಂಪರೆಯಲ್ಲಿ ಭಾರತದ ಸಾಧನೆಯು ಗುಕೇಶ್ ಗೆಲುವಿನ ಮೂಲಕ ಮುಂದುವರಿದಿದೆ. ಮತ್ತೊಬ್ಬ ವಿಶ್ವ ಚಾಂಪಿಯನ್ ಅನ್ನು ಜಗತ್ತಿಗೆ ನೀಡುವುದರ ಮೂಲಕ ಚೆನ್ನೈ ನಗರವು ವಿಶ್ವ ಚೆಸ್ ರಾಜಧಾನಿ ಎಂದು ಮತ್ತೊಮ್ಮೆ ಸಾಬೀತಾಯಿತುಎಂ.ಕೆ. ಸ್ಟಾಲಿನ್, ತಮಿಳುನಾಡು ಮುಖ್ಯಮಂತ್ರಿ
ನೀವು ದೇಶವು ಹೆಮ್ಮೆ ಪಡುವಂತೆ ಮಾಡಿದ್ದೀರಿ. ಇದೊಂದು ಅಸಾಧಾರಣ ಸಾಧನೆ. ದೃಢ ನಿಶ್ಚಯವೊಂದಿದ್ದರೆ ಏನನ್ನೂ ಸಾಧಿಸಬಹುದು ಎನ್ನುವುದನ್ನು ನಿಮ್ಮ ಕಠಿಣ ಪರಿಶ್ರಮ ತೋರಿಸಿಕೊಟ್ಟಿದೆರಾಹುಲ್ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.