ADVERTISEMENT

ಏಷ್ಯನ್ ಆರ್ಚರಿ ಚಾಂಪಿಯನ್‌ಷಿಪ್‌; ನಾಲ್ಕರ ಘಟ್ಟಕ್ಕೆ ಅಭಿಷೇಕ್‌ ವರ್ಮಾ

ಪಿಟಿಐ
Published 15 ನವೆಂಬರ್ 2021, 14:32 IST
Last Updated 15 ನವೆಂಬರ್ 2021, 14:32 IST
ಜ್ಯೋತಿ ಸುರೇಖಾ ವೆನ್ನಂ– ಎಎಫ್‌ಪಿ ಚಿತ್ರ
ಜ್ಯೋತಿ ಸುರೇಖಾ ವೆನ್ನಂ– ಎಎಫ್‌ಪಿ ಚಿತ್ರ   

ಢಾಕಾ: ಯುವ ಆರ್ಚರಿಪಟು ಮೋಹಿತ್ ದೇಸ್ವಾಲ್ ಅವರು ಅಗ್ರಶ್ರೇಯಾಂಕದ ಕೊರಿಯಾ ಬಿಲ್ಗಾರ ಚೊಯ್‌ ಯೊಂಗಿಗೆ ಆಘಾತ ನೀಡಿದರು. ಏಷ್ಯನ್‌ ಆರ್ಚರಿ ಚಾಂಪಿಯನ್‌ಷಿಪ್‌ನ ಸೆಮಿಫೈನಲ್ ತಲುಪಿದರು.

ಮೊದಲ ಬಾರಿ ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕಿಳಿದಿರುವ ಮೋಹಿತ್‌ ಸೋಮವಾರ ಪುರುಷರ ಕಾಂಪೌಂಡ್‌ ವಿಭಾಗದಲ್ಲಿ ನಾಲ್ಕರ ಘಟ್ಟ ತಲುಪಿದ್ದು, ಭಾರತದವರೇ ಆದ ಅಭಿಷೇಕ್ ವರ್ಮಾ ಅವರೊಂದಿಗೆ ಸೆಣಸಲಿದ್ದಾರೆ.

ರಿಕರ್ವ್‌ ವಿಭಾಗದಲ್ಲಿ ಭಾರತದ ಆರ್ಚರಿಪಟುಗಳು ಕೊರಿಯಾ ಎದುರು ಮತ್ತೊಮ್ಮೆ ಪರದಾಡಿದರು. ಆದರೆ ಮಹಿಳೆಯರ ಕಾಂಪೌಂಡ್‌ ವಿಭಾಗದಲ್ಲಿ ಜ್ಯೋತಿ ಸುರೇಖಾ ವೆನ್ನಂ ಕೂಡ ಸೆಮಿಫೈನಲ್‌ ಪ್ರವೇಶಿಸಿದರು.

ADVERTISEMENT

ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ವಿಜೇತ ಮೋಹಿತ್ ಅವರು, ಟೂರ್ನಿಯಲ್ಲಿ ಪದಕದ ಕನಸಿಗೆ ಮುನ್ನುಡಿ ಬರೆದರು. ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಅವರು ಚೊಯ್‌ಗೆ ಸೋಲುಣಿಸಿದರು. ಎಂಟರಘಟ್ಟದ ಹಣಾಹಣಿಯಲ್ಲಿ ಮೋಹಿತ್‌ ಇರಾನ್‌ನ ಅಮಿರ್‌ ಕಜೆಂಪೂರ್ ಸವಾಲು ಮೀರಿದರು.

ಅರ್ಹತಾ ಸುತ್ತಿನಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದ ರಿಷಭ್ ಯಾದವ್‌ ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ಕಜಕಸ್ತಾನದ ಸೆರ್ಜೆಯ್ ಕ್ರಿಸ್ಟಿಚ್ ಎದುರು ಎಡವಿದರು.

ಈ ವರ್ಷ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮೂರು ಬೆಳ್ಳಿ ಪದಕಗಳ ಒಡತಿಯಾಗಿರುವ ಸುರೇಖಾ ವೆನ್ನಂ ಭಾರತದವರೇ ಆದ ಪರ್ಣೀತ್ ಕೌರ್‌ ಅವರನ್ನು ಮಣಿಸಿ ಸೆಮಿಫೈನಲ್ ತಲುಪಿದರು.

ಪುರುಷರ ವೈಯಕ್ತಿಕ ವಿಭಾಗದಲ್ಲಿ ಪ್ರವೀಣ್ ಜಾಧವ್‌, ಪಾರ್ಥ್‌ ಸಾಳುಂಕೆ ಕೂಡ ಎಂಟರಘಟ್ಟದಲ್ಲಿ ಕೊರಿಯಾ ಪಟುಗಳ ಎದುರು ಮುಗ್ಗರಿಸಿದರು. ಮಹಿಳೆಯರ ವಿಭಾಗದಲ್ಲಿ ಕೋಮಲಿಕಾ ಬಾರಿ, ಮಧು ವೇದ್ವಾನ್‌ ಹಾಗೂ ರಿಧಿ ಕೂಡ ನಿರಾಸೆ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.