ಬೋಚುಮ್ (ಜರ್ಮನಿ): ಭಾರತದ ದೇವ್ ಕುಮಾರ್ ಮೀನಾ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಯೂನಿವರ್ಸಿಟಿ ಕ್ರೀಡಾಕೂಟದ ಪುರುಷರ ಪೋಲ್‌ವಾಲ್ಟ್ ಸ್ಪರ್ಧೆಯಲ್ಲಿ 5.40 ಮೀಟರ್ ಎತ್ತರ ಜಿಗಿದು ಫೈನಲ್‌ಗೆ ಅರ್ಹತೆ ಪಡೆದರು. ಅದರೊಂದಿಗೆ ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಉತ್ತಮ ಪಡಿಸಿಕೊಂಡರು.
20 ವರ್ಷದ ಮೀನಾ ಅವರು ‘ಎ’ ಗುಂಪಿನ ಅರ್ಹತಾ ಸುತ್ತಿನಲ್ಲಿ ಐದನೇ ಮತ್ತು ಒಟ್ಟಾರೆಯಾಗಿ ಆರನೇ ಸ್ಥಾನ ಪಡೆದರು. ಏಪ್ರಿಲ್‌ನಲ್ಲಿ (ಕೊಚ್ಚಿ) ನಡೆದ ಫೆಡರೇಷನ್ ಕಪ್‌ನಲ್ಲಿ ಅವರೇ ನಿರ್ಮಿಸಿದ್ದ (5.35 ಮೀಟರ್) ದಾಖಲೆಯನ್ನು ಸುಧಾರಿಸಿಕೊಂಡರು.
ಮೀನಾ ಅವರು ಪ್ರಸಕ್ತ ಋತುವಿನಲ್ಲಿ ಮೂರನೇ ಬಾರಿ ರಾಷ್ಟ್ರೀಯ ದಾಖಲೆಯನ್ನು ಮುರಿದಂತಾಗಿದೆ. ಫೆಬ್ರುವರಿಯಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 5.32 ಮೀಟರ್ ಸಾಧನೆ ಮಾಡಿ, ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದರು.
ಅನಿಮೇಶ್ ಕುಜೂರ್ ಅವರು ಪುರುಷರ 200 ಮೀಟರ್ ಫೈನಲ್‌ನಲ್ಲಿ 20.85 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ನಾಲ್ಕನೇ ಸ್ಥಾನ ಪಡೆದರು. ಭಾರತ ಮಿಶ್ರ 4x400 ಮೀಟರ್ ರಿಲೆ ತಂಡ 3ನಿಮಿಷ 18.40 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ನಾಲ್ಕನೇ ಸ್ಥಾನ ಗಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.