ನವದೆಹಲಿ: ರೋಚಕವಾಗಿದ್ದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ತಂಡವು ‘ಟೈಬ್ರೇಕರ್’ನಲ್ಲಿ 7–5ರಿಂದ ತೆಲುಗು ಟೈಟನ್ಸ್ ತಂಡವನ್ನು ಮಣಿಸಿತು.
ತ್ಯಾಗರಾಜ ಒಳಾಂಗಣ ಕ್ರೀಡಾಂಗಣ ದಲ್ಲಿ ಬುಧವಾರ ನಡೆದ ಮೊದಲ ಪಂದ್ಯದಲ್ಲಿ, ನಾಯಕ ದೇವಾಂಕ್ ದಲಾಲ್ ಅವರ ಆಟದ ಬಲದಿಂದ ಬೆಂಗಾಲ್ ತಂಡವು ನಿಗದಿತ ಅವಧಿಯಲ್ಲಿ 45–45ರಲ್ಲಿ ಸಮಬಲ ಸಾಧಿಸಿತ್ತು.
ಅತ್ಯುತ್ತಮ ಲಯದಲ್ಲಿರುವ ದೇವಾಂಕ್ ಅವರು 18 ಪಾಯಿಂಟ್ಸ್‌ಗಳನ್ನು ಕಲೆಹಾಕಿ ಮಿಂಚಿದರು. ಅವರು ಈ ಆವೃತ್ತಿಯಲ್ಲಿ 14ನೇ ಬಾರಿ ಸೂಪರ್ ಟೆನ್ ಸಾಧನೆ ಮಾಡಿದರು. ಟೈಟನ್ಸ್ ತಂಡದ ಭರತ್ ಹೂಡಾ (16 ಅಂಕ) ಅವರ ಹೋರಾಟದ ಫಲವಾಗಿ ಪಂದ್ಯವು ರೋಚಕ ಹಣಾಹಣಿಯನ್ನು ಕಂಡಿತು.
ಅಗ್ರಸ್ಥಾನಕ್ಕೇರಿದ ಪುಣೇರಿ ಪಲ್ಟನ್: ಸಾಂಘಿಕ ಆಟವಾಡಿದ ಪುಣೇರಿ ಪಲ್ಟನ್ ತಂಡವು ಬುಧವಾರ ನಡೆದ ಇನ್ನೊಂದು ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು 57–33ರಿಂದ ಸುಲಭವಾಗಿ ಸೋಲಿಸಿತು. 16 ಪಂದ್ಯ ಗಳಲ್ಲಿ 13ನೇ ಗೆಲುವಿನೊಡನೆ 24 ಅಂಕ ಕಲೆಹಾಕಿದ ಪುಣೇರಿ ತಂಡ ಲೀಗ್‌ನಲ್ಲಿ ಮೊದಲ ಬಾರಿ ಅಗ್ರಸ್ಥಾನಕ್ಕೂ ಏರಿತು. ಮತ್ತೊಂದು ಪಂದ್ಯದಲ್ಲಿ ಹಿಮಾಂಶು ಸಿಂಗ್ (13 ಪಾಯಿಂಟ್ಸ್) ಅವರ ಆಟದ ಬಲದಿಂದ ಗುಜರಾತ್ ಜೈಂಟ್ಸ್ ತಂಡವು 42–35ರಲ್ಲಿ ತಮಿಳು ತಲೈವಾಸ್ ತಂಡವನ್ನು ಮಣಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.