ಮೊನಾಕೊ: ಭಾರತದ ಅನುಭವಿ ಅಥ್ಲೀಟ್ ಅವಿನಾಶ್ ಸಾಬ್ಳೆ ಅವರು ಮೊನಾಕೊ ಡೈಮಂಡ್ ಲೀಗ್‌ನಲ್ಲಿ ತಮ್ಮ ಮೆಚ್ಚಿನ 3000 ಮೀ. ಸ್ಟೀಪಲ್‌ಚೇಸ್ ಓಟದ ವೇಳೆ ಬಿದ್ದು ಗಾಯಗೊಂಡರು. ಆದರೆ ಪುರುಷರ 23 ವರ್ಷದೊಳಗಿನವರ ವಿಭಾಗದಲ್ಲಿ ಉದಯೋನ್ಮುಖ ತಾರೆ ಅನಿಮೇಶ್ ಕುಜೂರ್ 200 ಮೀ. ಓಟದಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದು ಗಮನಸೆಳೆಯಿತು.
ಏಷ್ಯನ್ ಚಾಂಪಿಯನ್ ಆಗಿರುವ ಸಾಬ್ಳೆ, ಶುಕ್ರವಾರ ರಾತ್ರಿ ಓಟದ ಆರಂಭದಲ್ಲೇ ಬಿದ್ದು ಸ್ವಲ್ಪ ನರಳಿದಂತೆ ಕಂಡರು. ಈ ಓಟದಲ್ಲಿ ಮೊರಾಕೊದ ಸೌಫಿಯಾನ್ ಎಲ್ ಬಕ್ಕಲಿ (8 ನಿ.01.18 ಸೆ.) ಅಗ್ರಸ್ಥಾನ ಪಡೆದರು. ಜಪಾನ್‌ನ ರುಜಿ ಮಿಯುರಾ (8:03.43) ಎರಡನೇ ಮತ್ತು ಕೆನ್ಯಾದ ಎಡ್ಮಂಟ್ ಸೆರಿಮ್ (8:04.00) ಮೂರನೇ ಸ್ಥಾನ ಗಳಿಸಿದರು.
ಸಾಬ್ಳೆ ಈ ಹಿಂದಿನ ಡೈಮಂಡ್ ಲೀಗ್‌ಗಳಲ್ಲಿ ಕ್ರಮವಾಗಿ 13ನೇ ಮತ್ತು ಎಂಟನೇ ಸ್ಥಾನ ಗಳಿಸಿದ್ದರು.
23 ವರ್ಷದೊಳಗಿನವರ ವಿಭಾಗದಲ್ಲಿ ಛತ್ತೀಸಗಢದ ಕುಜೂರ್ 200 ಮೀ. ಓಟವನ್ನು 20.55 ಸೆಕೆಗಂಡುಗಳಲ್ಲಿ ಪೂರೈಸಿದ್ದು ಕಡಿಮೆಯೇನೂ ಆಗಿರಲಿಲ್ಲ. ಆಸ್ಟ್ರೇಲಿಯಾದ ಪ್ರತಿಭಾನ್ವಿತ ಗೌತ್ ಗೌತ್ (20.10 ಸೆ.) ಮೊದಲ ಸ್ಥಾನ ಗಳಿಸಿದರು. ಬೋಟ್ಸವಾನಾದ ಬುಸಾಂಗ್ ಕೊಲೆನ್ ಕೆನಿನಾತ್‌ಶಿಪಿ (20.28) ಮತ್ತು ದಕ್ಷಿಣ ಆಫ್ರಿಕಾದ ನಯೀಮ್ ಜಾಕ್ (20.42) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು.
ಕುಜೂರ್ ಈ ಓಟದಲ್ಲಿ ರಾಷ್ಟ್ರೀಯ ದಾಖಲೆ (20.42 ಸೆ.) ಹೊಂದಿದ್ದು, ದೇಶದ ಸ್ಪ್ರಿಂಟ್ ತಾರೆಯಾಗಿ ಗುರುತಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.