ADVERTISEMENT

2 ವರ್ಷವಾದರೂ ಸಿಗಲಿಲ್ಲ ಬಹುಮಾನ

ಕ್ರೀಡಾ ಇಲಾಖೆ ನಿರ್ಲಕ್ಷ್ಯ: ಗ್ರ್ಯಾಂಡ್‌ಮಾಸ್ಟರ್‌ ತೇಜ್‌ಕುಮಾರ್‌ ಬೇಸರ

ಕೆ.ಓಂಕಾರ ಮೂರ್ತಿ
Published 28 ಆಗಸ್ಟ್ 2019, 20:15 IST
Last Updated 28 ಆಗಸ್ಟ್ 2019, 20:15 IST
ತೇಜ್‌ಕುಮಾರ್
ತೇಜ್‌ಕುಮಾರ್   

ಮೈಸೂರು: ರಾಜ್ಯದ ಮೊದಲ ಚೆಸ್‌ ಗ್ರ್ಯಾಂಡ್‌ಮಾಸ್ಟರ್‌ ಎಂ.ಎಸ್‌.ತೇಜ್‌ಕುಮಾರ್‌ ಅವರಿಗೆ ರಾಜ್ಯ ಕ್ರೀಡಾ ಇಲಾಖೆಯು ₹ 10 ಲಕ್ಷ ಬಹುಮಾನ ಘೋಷಿಸಿ ಎರಡು ವರ್ಷಗಳಾಗಿವೆ. ಆದರೆ ಹಣ ಇನ್ನೂ ಬಿಡುಗಡೆ ಆಗಿಲ್ಲ.

2017ರ ದಸರಾ ಕ್ರೀಡಾಕೂಟದ ಉದ್ಘಾಟನೆ ವೇಳೆ ಅಂದಿನ ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ಈ ನಗದು ಘೋಷಣೆ ಮಾಡಿದ್ದರು. ಅದಾಗಿ ಮೂರನೇ ಸರ್ಕಾರ ಬಂದಿದೆ, ಮೂರನೇ ದಸರೆಗೆ ಸಿದ್ಧತೆಗಳು ನಡೆಯುತ್ತಿವೆ.

‘ಕ್ರೀಡಾ ಇಲಾಖೆಗೆ ಅಲೆದು ಸುಸ್ತಾಗಿದೆ. ಮೈಸೂರು ಜಿಲ್ಲಾ ಚೆಸ್‌ ಸಂಸ್ಥೆ ಕಾರ್ಯದರ್ಶಿ ಆಗಿರುವ ನನ್ನ ತಂದೆ ಕೂಡ ಇಲಾಖೆಯ ನಿರ್ದೇಶಕರನ್ನು ಭೇಟಿಯಾಗಿ ಕೇಳಿದ್ದಾರೆ. ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ. ಸಾಧಕ ಕ್ರೀಡಾಪಟುಗಳಿಗೂ ಈ ರೀತಿ ಅನ್ಯಾಯ ಮಾಡಿದರೆ ಹೇಗೆ’ ಎಂದು ತೇಜ್‌ಕುಮಾರ್‌ ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಗ್ರ್ಯಾಂಡ್‌ಮಾಸ್ಟರ್ ಪಟ್ಟ ಗಿಟ್ಟಿಸಲು ತರಬೇತಿ ಹಾಗೂ ಪ್ರವಾಸಕ್ಕೆಂದು ₹ 20 ಲಕ್ಷ ಖರ್ಚು ಮಾಡಿದ್ದೆ. ಪೋಷಕರು ಸಾಲ ಮಾಡಿ ಪ್ರೋತ್ಸಾಹ ನೀಡಿದ್ದಾರೆ. ಆದರೆ, ಇಲಾಖೆಯು ಸಂಪೂರ್ಣವಾಗಿ ನಿರ್ಲಕ್ಷಿಸಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸರ್ಕಾರ ಅಲ್ಲಿನ ಚೆಸ್‌ ಆಟಗಾರರನ್ನು ಪ್ರೋತ್ಸಾಹಿಸುತ್ತಿವೆ. ಕರ್ನಾಟಕ ಸರ್ಕಾರ ಮಾತ್ರ ಕ್ರೀಡಾಪಟುಗಳತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ. ಇನ್ನೆಷ್ಟು ಸಾಧನೆ ಮಾಡಬೇಕು’ ಎಂದು ಪ್ರಶ್ನಿಸಿದರು.

ಮೈಸೂರಿನ ತೇಜ್‌ಕುಮಾರ್ ಸುಮಾರು 14 ವರ್ಷಗಳಿಂದ ರಾಜ್ಯದ ಮುಂಚೂಣಿ ಆಟಗಾರ. ಅವರಿಗೆ 2017ರಲ್ಲಿ ಗ್ರ್ಯಾಂಡ್‌ಮಾಸ್ಟರ್‌ ಪಟ್ಟ ಲಭಿಸಿತ್ತು. ರಾಜ್ಯದಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ. ದೇಶ ವಿದೇಶಗಳ ಹಲವು ಟೂರ್ನಿಗಳಲ್ಲಿ ಪಾಲ್ಗೊಂಡು ಪ್ರಮುಖ ಆಟಗಾರರಿಗೆ ಆಘಾತ ನೀಡಿದ ಶ್ರೇಯ ಹೊಂದಿದ್ದಾರೆ.

‘ಚೆಸ್‌ ಆಟಗಾರರು ಬಹುಮಾನ ಮೊತ್ತವನ್ನು ನಂಬಿಯೇ ಆಡಬೇಕಾದ ಪರಿಸ್ಥಿತಿ ಬಂದಿದೆ. ಫಿಡೆ ಪಾಯಿಂಟ್‌ ಗಿಟ್ಟಿಸಲು ವಿದೇಶಕ್ಕೆ ಪ್ರವಾಸ ಮಾಡುವಾಗ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಕೋಚ್‌ಗಳನ್ನು ನೇಮಿಸಿಕೊಳ್ಳುವುದೂ ಕಷ್ಟ. ಸರ್ಕಾರದಿಂದ ಪ್ರೋತ್ಸಾಹ ದೊರೆಯುತ್ತಿಲ್ಲ. ಹೀಗಾಗಿಯೇ ಪ್ರತಿಭಾವಂತ ಆಟಗಾರರು ಕ್ರೀಡೆಯಿಂದ ದೂರ ಸರಿಯುತ್ತಿದ್ದಾರೆ’ ಎಂದು ಚೆಸ್‌ ಸಂಸ್ಥೆಯ ಪದಾಧಿಕಾರಿಗಳು ಹೇಳುತ್ತಾರೆ.

***

ಬಹುಮಾನ ಹಣಕ್ಕಾಗಿ ಕಾದು ಸುಸ್ತಾಗಿದೆ. ಕ್ರೀಡಾ ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ ಒಬ್ಬರ ಮೇಲೆ ಒಬ್ಬರು ಹಾಕುತ್ತಾರೆ

–ಎಂ.ಎಸ್‌.ತೇಜ್‌ಕುಮಾರ್‌,ಚೆಸ್‌ ಗ್ರ್ಯಾಂಡ್‌ಮಾಸ್ಟರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.