ADVERTISEMENT

ಡೆಫ್‌ಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಮೊದಲ ಗಾಲ್ಫರ್ ಭಾರತದ ದೀಕ್ಷಾ ದಾಗರ್

ಬ್ರೆಜಿಲ್‌ನಲ್ಲಿ ಚಿನ್ನದ ಪದಕ; ಟರ್ಕಿಯಲ್ಲಿ ಬೆಳ್ಳಿ ಸಾಧನೆ

ಪಿಟಿಐ
Published 13 ಮೇ 2022, 5:35 IST
Last Updated 13 ಮೇ 2022, 5:35 IST
ದೀಕ್ಷಾ ದಾಗರ್ –ಟ್ವಿಟರ್ ಚಿತ್ರ
ದೀಕ್ಷಾ ದಾಗರ್ –ಟ್ವಿಟರ್ ಚಿತ್ರ   

ಕಕ್ಸಿಯಾಸ್, ಬ್ರೆಜಿಲ್: ಬಲಿಷ್ಠ ಪ್ರತಿಸ್ಪರ್ಧಿ, ಅಮೆರಿಕದ ಆ್ಯಶ್ಲಿನ್ ಗ್ರೇಸ್‌ ವಿರುದ್ಧ ಅಮೋಘ ಆಟವಾಡಿದ ಭಾರತದ ದೀಕ್ಷಾ ದಾಗರ್ ಅವರು ಡೆಫ್‌ಲಿಂಪಕ್ಸ್‌ನ (ಕಿವುಡರ ಒಲಿಂಪಿಕ್ ಕೂಟ) ಗಾಲ್ಫ್‌ನಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

2017ರಲ್ಲಿ ಟರ್ಕಿಯ ಸಾಮ್ಸುನ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದ ದೀಕ್ಷಾ ಈ ಬಾರಿ ಚಿನ್ನದ ಪದಕ ಗೆಲ್ಲುವುದಾಗಿ ಭರವಸೆ ವ್ಯಕ್ತಪಡಿಸಿದ್ದರು. ಈ ಮಾತಿಗೆ ತಕ್ಕಂತೆ ಆಡಿದ ಅವರು ಮೊದಲ ಸುತ್ತಿನಿಂದಲೇ ಪಾರಮ್ಯ ಮೆರೆದಿದ್ದರು. ಚಿನ್ನ ಗೆಲ್ಲುವುದರೊಂದಿಗೆ ಡೆಫ್‌ಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಮೊದಲ ಗಾಲ್ಫರ್ ಎನಿಸಿಕೊಂಡರು.

ಎಡಗೈ ಆಟಗಾರ್ತಿಯಾದ 21 ವರ್ಷದ ದೀಕ್ಷಾ ಅವರಿಗೆ ಆರನೇ ವಯಸ್ಸಿನಲ್ಲಿ ಕಿವುಡುತನ ಕಾಡಿತ್ತು. ವೃತ್ತಿಪರ ಗಾಲ್ಫ್ ಆಟಗಾರ್ತಿಯೂ ಆಗಿರುವ ಅವರು ಮಹಿಳೆಯರ ಯುರೋಪಿಯನ್ ಟೂರ್‌ನಲ್ಲಿ ಜಯ ಗಳಿಸಿ ಗಮನ ಸೆಳೆದಿದ್ದಾರೆ. 2017ರ ಡೆಫ್‌ಲಿಂಪಿಕ್ಸ್‌ನಲ್ಲಿ ಫೈನಲ್ ಪ್ರವೇಶಿಸುವಾಗ ಅವರಿಗೆ ಇನ್ನೂ 17 ವರ್ಷ ತುಂಬಿರಲಿಲ್ಲ. ಆದರೂ ಅಮೋಘ ಆಟವಾಡಿದ್ದರು. ಆಗ ವೃತ್ತಿಪರ ಗಾಲ್ಫ್‌ಗೆ ಅವರು ಪ್ರವೇಶಿಸಿರಲಿಲ್ಲ. ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್‌ಗೆ ಕೊನೆಯ ಅವಕಾಶದಲ್ಲಿ ಆಯ್ಕೆಯಾಗಿ ಅಚ್ಚರಿ ಮೂಡಿಸಿದ್ದ ಅವರು ಒಲಿಂಪಿಕ್ ಕ್ರೀಡಾಕೂಟ ಮತ್ತು ಡೆಫ್‌ಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಮೊದಲ ಗಾಲ್ಫರ್ ಎನಿಸಿಕೊಂಡಿದ್ದರು.

2019ರಲ್ಲಿದೀಕ್ಷಾ ವೃತ್ತಿಪರ ಗಾಲ್ಫ್‌ಗೆ ಪದಾರ್ಪಣೆ ಮಾಡಿದ್ದರು. ಆ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಇನ್ವೆಸ್ಟೆಕ್ ಮಹಿಳೆಯರ ಮುಕ್ತ ಟೂರ್ನಿಯಲ್ಲಿ ಆಡಿದ್ದ ಅವರು 2021ರಲ್ಲಿ ಲಂಡನ್‌ನಲ್ಲಿ ನಡೆದಿದ್ದ ಅರಮ್ಕೊ ಟೀಮ್ ಸೀರಿಸ್‌ನಲ್ಲಿ ಗೆದ್ದ ತಂಡದ ಸದಸ್ಯೆಯಾಗಿದ್ದರು. ಇವೆರಡೂ ಮಹಿಳೆಯರ ಯುರೋಪಿಯನ್ ಟೂರ್‌ನ ಭಾಗವಾಗಿದ್ದವು.

ಡೆಫ್‌ಲಿಂಪಿಕ್ಸ್‌ನಲ್ಲಿ ಕಂಚಿನ ಪದಕಕ್ಕಾಗಿ ನಡೆದ ಸ್ಪರ್ಧೆ ಜಿದ್ದಾಜಿದ್ದಿಯಿಂದ ಕೂಡಿತ್ತು. ಫ್ರಾನ್ಸ್‌ನ ಮಾರ್ಗಕ್ಸ್‌ ಮತ್ತು ನಾರ್ವೆಯ ಆ್ಯಂಡ್ರಿಯಾ ಹಾಟ್ಸೆನ್‌ ನಡುವಿನ ಹಣಾಹಣಿಯಲ್ಲಿ ಮಾರ್ಗಕ್ಸ್ ಜಯ ಸಾಧಿಸಿದರು.

ಆ್ಯಂಡ್ರಿಯಾ ಕಳೆದ ಬಾರಿ ಕಂಚಿನ ಪದಕ ಗೆದ್ದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.