ADVERTISEMENT

ಡುರಾಂಡ್‌ ಕಪ್‌ ಫುಟ್‌ಬಾಲ್‌: ನಾರ್ತ್‌ಈಸ್ಟ್‌ಗೆ ಶಿಲ್ಲಾಂಗ್ ಸವಾಲು

ಮೊದಲ ಸೆಮಿಫೈನಲ್‌ ಇಂದು

ಪಿಟಿಐ
Published 18 ಆಗಸ್ಟ್ 2025, 23:30 IST
Last Updated 18 ಆಗಸ್ಟ್ 2025, 23:30 IST
ಅಭ್ಯಾಸದಲ್ಲಿ ತೊಡಗಿರುವ ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ತಂಡದ ಆಟಗಾರು
ಅಭ್ಯಾಸದಲ್ಲಿ ತೊಡಗಿರುವ ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ತಂಡದ ಆಟಗಾರು   

ಶಿಲ್ಲಾಂಗ್‌: ಹಾಲಿ ಚಾಂಪಿಯನ್‌ ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ತಂಡವು 134ನೇ ಆವೃತ್ತಿಯ ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ ಮಂಗಳವಾರ ಶಿಲ್ಲಾಂಗ್‌ ಲಾಜೊಂಗ್‌ ಎಫ್‌ಸಿ ತಂಡವನ್ನು ಎದುರಿಸಲಿದೆ.

ವಿಜೇತ ತಂಡವು ಆಗಸ್ಟ್ 23ರಂದು ಕೋಲ್ಕತ್ತದ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಈಸ್ಟ್ ಬೆಂಗಾಲ್ ಅಥವಾ ಡೈಮಂಡ್ ಹಾರ್ಬರ್ ಎಫ್‌ಸಿಯನ್ನು ಎದುರಿಸಲಿದೆ. ಈ ಎರಡು ತಂಡಗಳು ಬುಧವಾರ ಎರಡನೇ ಸೆಮಿಫೈನಲ್‌ನಲ್ಲಿ ಸೆಣಸಾಡಲಿವೆ.

ಕಳೆದ ಆವೃತ್ತಿಯ ಸೆಮಿಫೈನಲ್‌ನಲ್ಲಿ ನಾರ್ತ್‌ಈಸ್ಟ್‌ ತಂಡವು 3–0ಯಿಂದ ಶಿಲ್ಲಾಂಗ್‌ ತಂಡವನ್ನು ಮಣಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿತ್ತು. ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ನಡೆಯುವ ಹಣಾಹಣಿಯಲ್ಲಿ ಈ ಬಾರಿ ಆತಿಥೇಯ ತಂಡ ಪ್ರಬಲ ಸವಾಲೊಡ್ಡುವ ಛಲದಲ್ಲಿದೆ.

ADVERTISEMENT

ಇ ಗುಂಪಿನಲ್ಲಿದ್ದ ನಾರ್ತ್‌ಈಸ್ಟ್‌ ಮತ್ತು ಶಿಲ್ಲಾಂಗ್‌ ತಂಡಗಳು ಕ್ರಮವಾಗಿ ಮೊದಲೆರಡು ಸ್ಥಾನದೊಂದಿಗೆ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದವು. ಗುಂಪು ಹಂತದಲ್ಲಿ ಮುಖಾಮುಖಿಯಾಗಿದ್ದಾಗ 2–1ರಿಂದ ನಾರ್ತ್‌ಈಸ್ಟ್‌ ತಂಡವೇ ಮೇಲುಗೈ ಸಾಧಿಸಿತ್ತು. 

ನಾರ್ತ್‌ಈಸ್ಟ್‌ ತಂಡವು ಗುಂಪು ಹಂತದಲ್ಲಿ ಮೂರು ಪಂದ್ಯಗಳ ಪೈಕಿ ಎರಡಲ್ಲಿ ಗೆದ್ದು, ಮತ್ತೊಂದರಲ್ಲಿ ಡ್ರಾ ಸಾಧಿಸಿತ್ತು. ಎಂಟರ ಘಟ್ಟದಲ್ಲಿ 4–0ಯಿಂದ ಬೋಡೋಲ್ಯಾಂಡ್ ಎಫ್‌ಸಿ ವಿರುದ್ಧ ಅಧಿಕಾರಯುತ ಜಯ ಸಾಧಿಸಿ, ಎರಡನೇ ಬಾರಿ ಪ್ರಶಸ್ತಿ ಜಯಿಸುವತ್ತ ದಾಪುಗಾಲಿಟ್ಟಿದೆ.

ಶಿಲ್ಲಾಂಗ್‌ ತಂಡವು ಎರಡರಲ್ಲಿ ಗೆದ್ದು, ಮತ್ತೊಂದು ಪಂದ್ಯದಲ್ಲಿ ಸೋಲು ಅನುಭವಿಸಿತ್ತು. ಕ್ವಾರ್ಟರ್‌ ಫೈನಲ್‌ನಲ್ಲಿ 2–1ರಿಂದ ಇಂಡಿಯನ್‌ ನೇವಿ ತಂಡವನ್ನು ಮಣಿಸಿತ್ತು.

 ಪಂದ್ಯ ಆರಂಭ: ಸಂಜೆ 7

ನೇರಪ್ರಸಾರ: ಸೋನಿ ಸ್ಪೋಟ್ಸ್‌ ನೆಟ್‌ವರ್ಕ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.