ADVERTISEMENT

ದ್ಯುತಿಗೆ ಬಿಎಂಡಬ್ಲ್ಯ ಬಿಳಿಯಾನೆ ಆದದ್ದು ನಿಜವೇ?

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 19:45 IST
Last Updated 20 ಜುಲೈ 2020, 19:45 IST
ದ್ಯುತಿ ಚಾಂದ್ –ಎಎಫ್‌ಪಿ ಚಿತ್ರ
ದ್ಯುತಿ ಚಾಂದ್ –ಎಎಫ್‌ಪಿ ಚಿತ್ರ   

ಐಶಾರಾಮಿ ಬಿಎಂಡಬ್ಲ್ಯು ಕಾರು ತಮ್ಮ ಪಾಲಿಗೆ ಬಿಳಿಯಾನೆ ಎಂದು ಹೇಳುವ ಮೂಲಕ ಸಾಮಾಜಿಕ ತಾಣಗಳಲ್ಲಿ ಸುದ್ದಿಯಾದ ಭಾರತದ ಸ್ಪ್ರಿಂಟರ್ ದ್ಯುತಿ ಚಾಂದ್ ವಿವಾದ ಸೃಷ್ಟಿಸಿದ್ದಾರೆ. ಅವರ ಹೇಳಿಕೆ ಹೊರಬಿದ್ದ ಬೆನ್ನಲ್ಲೇ ಒಡಿಶಾ ಸರ್ಕಾರದ ಕ್ರೀಡಾ ಇಲಾಖೆ ರಂಗಕ್ಕೆ ಇಳಿದಿದ್ದು ಈ ತಾರೆಗೆ ನೀಡಿರುವ ಹಣದ ಲೆಕ್ಕವನ್ನು ಬಹಿರಂಗ ಮಾಡಿದೆ. ವಿವಾದ ಸೃಷ್ಟಿಸುವುದರಲ್ಲೇ ಖುಷಿಪಡುವುದು ದ್ಯುತಿ ಚಾಂದ್ ’ಹವ್ಯಾಸ‘ ಎಂದು ಹೇಳುವ ಮೂಲಕ ತಿರುಗೇಟು ನೀಡಿದೆ.

‘ಕಾರು ಮಾರಿದರೆ ನನ್ನ ಆರ್ಥಿಕ ಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆ ಕಾಣಬಹುದು ಎಂದುಕೊಂಡಿದ್ದೇನೆ‘ ಎಂಬ ಅಡಿಬರಹದೊಂದಿಗೆ ಬಿಎಂಡಬ್ಲ್ಯು ಜೊತೆ ನಿಂತು ತೆಗೆದ ಚಿತ್ರವನ್ನು ದ್ಯುತಿ ಪೋಸ್ಟ್ ಮಾಡಿದ್ದರು. ವಿವಾದದ ಗಾಳಿ ಬೀಸಿದ ಕೂಡಲೇ ಪೊಸ್ಟ್ ಅಳಿಸಿ ಹಾಕಿ ಸುಮ್ಮನಾಗಿದ್ದರು.

ಆದರೆ ಸರ್ಕಾರವು ಅವರಿಗಾಗಿ ವೆಚ್ಚ ಮಾಡಿದ ಹಣದ ಲೆಕ್ಕವನ್ನು ಸಮಾಜದ ಮುಂದೆ ಇರಿಸಿದೆ. ಅವರಿಗಾಗಿ ಈ ವರೆಗೆ ₹ 4.9 ಕೋಟಿ ವ್ಯಯ ಮಾಡಲಾಗಿದೆ. ಅದರಲ್ಲಿ ₹ ಮೂರು ಕೋಟಿ ಮೊತ್ತವನ್ನು ಏಷ್ಯನ್‌ ಗೇಮ್ಸ್‌ನಲ್ಲಿ ಪದಕಗಳನ್ನು ಗೆದ್ದಾಗ ನಗದು ರೂಪದಲ್ಲಿ ನೀಡಲಾಗಿದೆ ಎಂದು ವಿವರ ನೀಡಿದೆ.

ADVERTISEMENT

ಇಷ್ಟು ಮಾತ್ರವಲ್ಲದೆ, ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ 400 ಮೀಟರ್ಸ್ ಓಟಗಾರ್ತಿ ಹಿಮಾ ದಾಸ್‌ಗಾಗಲಿ ಹೆಪ್ಟಥ್ಲೀಟ್‌ ಸಪ್ನಾ ಬರ್ಮನ್‌ಗಾಗಲಿ ಅವರು ಪ್ರತಿನಿಧಿಸುವ ರಾಜ್ಯ ಸರ್ಕಾರಗಳು ನೀಡಿದ ಮೊತ್ತಕ್ಕಿಂತ ಅನೇಕ ಪಟ್ಟು ಅಧಿಕ ಹಣವನ್ನು ದ್ಯುತಿಗೆ ನೀಡಲಾಗಿದೆ ಎಂದು ಹೇಳುವ ಮೂಲಕ ಸರ್ಕಾರ ದ್ಯುತಿಗೆ ಇನ್ನಷ್ಟು ಮುಜುಗರ ಉಂಟುಮಾಡಿದೆ. ಧಿಂಗ್ ಎಕ್ಸ್‌ಪ್ರೆಸ್ ಖ್ಯಾತಿಯ ಅಸ್ಸಾಂನ ಹಿಮಾ ಮತ್ತು ಪಶ್ಚಿಮ ಬಂಗಾಳದ ಸಪ್ನಾಗೆ ರಾಜ್ಯ ಸರ್ಕಾರಗಳು ತಲಾ ₹ 10 ಲಕ್ಷ ನೀಡಿವೆ.

ಟ್ರ್ಯಾಕ್‌ನಲ್ಲಿ ಮಿಂಚುತ್ತಿದ್ದ ದ್ಯುತಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದ್ದಂತೆ ಭಾರತದ ಕ್ರೀಡಾಪ್ರೇಮಿಗಳ ಕಣ್ಮಣಿಯಾದರು. 2018ರ ಏಷ್ಯನ್ ಗೇಮ್ಸ್‌ನ 100 ಮತ್ತು 200 ಮೀಟರ್ಸ್ ಓಟದಲ್ಲಿ ಬೆಳ್ಳಿ ಪದಕಗಳನ್ನು ಗೆದ್ದ ನಂತರವಂತೂ ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಅವರ ಹೆಸರು ಇನ್ನಷ್ಟು ಮಿಂಚತೊಡಗಿತು. ಇದೇ ಸಂದರ್ಭದಲ್ಲಿ ಅವರು ಬಿಎಂಡಬ್ಲ್ಯು ಕಾರು ಖರೀರಿಸಿದರು. ತಾನು ಸಲಿಂಗಿ ಎಂದು ಬಹಿರಂಗ ಹೇಳಿಕೆ ನೀಡುವ ಮೂಲಕ ಕಳೆದ ವರ್ಷ ದ್ಯುತಿ ಗಮನ ಸೆಳೆದಿದ್ದರು. ’ಸಲಿಂಗ ಕಾಮವನ್ನು ಅಪರಾಧವಾಗಿ ಪರಿಗಣಿಸಬೇಕಾಗಿಲ್ಲ ಎಂದು ಸುಪ್ರಿಂ ಕೋರ್ಟ್ ತೀರ್ಪು ನೀಡಿದ ನಂತರ ನನ್ನ ಗುಟ್ಟನ್ನು ರಟ್ಟು ಮಾಡಲು ನನಗೆ ನೈತಿಕ ಧೈರ್ಯ ಸಿಕ್ಕಿದೆ‘ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.