
ನವದೆಹಲಿ: ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಕರ್ನಲ್ (ನಿವೃತ್ತ) ತರ್ಸೆಮ್ ಸಿಂಗ್ ವಾರೈಚ್ ಅವರನ್ನು ಹೊರದೇಶದಲ್ಲಿ ನಡೆಯಲಿರುವ ಟೂರ್ನಿಗೆ ಭಾರತ ಇಕ್ವೆಸ್ಟ್ರಿಯನ್ (ಅಶ್ವಾರೋಹಿ) ತಂಡದ ತರಬೇತುದಾರರಾಗಿ ಹೆಸರಿಸಿರುವ ಭಾರತ ಇಕ್ವೆಸ್ಟ್ರಿಯನ್ ಫೆಡರೇಷನ್‌ನ (ಇಎಫ್‌ಐ) ಕ್ರಮ ವಿವಾದಕ್ಕೆ ಎಡೆಮಾಡಿದೆ.
ಜೋರ್ಡಾನ್‌ನಲ್ಲಿ ಇದೇ 29 ರಿಂದ 31ರವರೆಗೆ ನಡೆಯಲಿರುವ ಅಂತರರಾಷ್ಟ್ರೀಯ ಟೆಂಟ್ ಪೆಗ್ಗಿಂಗ್ ಫೆಡರೇಷನ್ (ಐಟಿಪಿಎಫ್) ವಿಶ್ವಕಪ್ ಅರ್ಹತಾ ಟೂರ್ನಿಗೆ ತರ್ಸೆಮ್ ಅವರನ್ನು ಕೋಚ್ –ಕಂ–ಮ್ಯಾನೇಜರ್ ಆಗಿ ಫೆಡರೇಷನ್ ನೇಮಕ ಮಾಡಿದೆ. ತರ್ಸೆಮ್ ಅವರು ಇಎಫ್‌ಐ ಕಾರ್ಯಕಾರಿ ಮಂಡಳಿ ಸದಸ್ಯರಾಗಿದ್ದಾರೆ.
ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಸಂಹಿತೆಯಡಿ (2011) ಆಡಳಿತ ಮತ್ತು ನಿಯಮ ಪಾಲನೆ ಮಾಡಲು ವಿಫಲವಾಗಿರುವುದಕ್ಕೆ ಸಂಬಂಧಿಸಿ ಕೇಂದ್ರ ಕ್ರೀಡಾ ಸಚಿವಾಲಯ ಬುಧವಾರ ಷೋಕಾಸ್ ನೋಟಿಸ್ ನೀಡಿರುವ ಮಧ್ಯೆಯೇ ಈ ಬೆಳವಣಿಗೆ ನಡೆದಿದೆ.
ತರ್ಸೆಮ್ ಅವರನ್ನು ಕೋಚ್ ಆಗಿ ಕಳುಹಿಸಿರುವ ಕ್ರಮ ಖಂಡಿಸಿ ಅಶ್ವಾರೋಹಿ ಜೂನಿಯರ್ ಸ್ಪರ್ಧಿಯೊಬ್ಬರ ತಂದೆ, ಐಟಿಪಿಎಫ್‌ಗೆ ಪತ್ರ ಬರೆದಿದ್ದಾರೆ. ತರ್ಸೆಮ್ ವಿರುದ್ಧ ಇಬ್ಬರು ಮಹಿಳೆಯರು ಲೈಂಗಿಕ ಪೀಡನೆಯ ದೂರು ನೀಡಿದ್ದು, ಈ ಸಂಬಂಧ ಸೋನಿಪತ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಕರಣ ಗಂಭೀರವಾಗಿದ್ದು, ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ವೇಳೆ ಕ್ರೀಡಾ ಅಧಿಕಾರಿಗಳ ಅವರನ್ನು ದೇಶದಿಂದ ಹೊರಗೆ ಪ್ರಯಾಣಿಸಲು ಅವಕಾಶ ನೀಡಿರುವುದು ಹೇಗೆ ಎಂದು ಅವರು ಪತ್ರದಲ್ಲಿ ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಐಟಿಪಿಎಫ್, ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಭಾರತ ಇಕ್ವೆಸ್ಟ್ರಿಯನ್ ಫೆಡರೇಷನ್‌ಗೆ ಸೂಚಿಸಿದೆ.
‘ನನ್ನ ಪ್ರಯಾಣಕ್ಕೆ ಅಥವಾ ಕರ್ತವ್ಯ ನಿರ್ವಹಣೆಗೆ ನ್ಯಾಯಾಲಯ ತಡೆ ನೀಡಿಲ್ಲ. ಇಎಫ್‌ಐ ಕಾರ್ಯಕಾರಿ ಸಮಿತಿ ನನಗೆ ಪ್ರಯಾಣಿಸಲು ಹೇಳಿದ್ದು, ನಾನು ಇಲ್ಲಿಗೆ ಬಂದಿದ್ದೇನೆ’ ಎಂದು ಅವರು ಜೋರ್ಡಾನ್‌ನಿಂದ ಪಿಟಿಐಗೆ ತಿಳಿಸಿದ್ದಾರೆ. ‘ಇದು ಸುಳ್ಳು ದೂರು’ ಎಂದೂ ಹೇಳಿದ್ದಾರೆ.
ಈ ಬಗ್ಗೆ ಇಎಫ್‌ಐ ಹಂಗಾಮಿ ಅಧ್ಯಕ್ಷ ಜಗತ್ ಸಿಂಗ್ ಅವರ ಪ್ರತಿಕ್ರಿಯೆ ಪಡೆಯಲು ಯತ್ನಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.