ADVERTISEMENT

ವಿಶ್ವಕಪ್ ಹಾಕಿ: ಅರ್ಜೆಂಟೀನಾಗೆ ಇಂಗ್ಲೆಂಡ್ ಆಘಾತ

ಪಿಟಿಐ
Published 12 ಡಿಸೆಂಬರ್ 2018, 15:49 IST
Last Updated 12 ಡಿಸೆಂಬರ್ 2018, 15:49 IST
ಇಂಗ್ಲೆಂಡ್‌ನ ಡೇವಿಡ್ ಏಮ್ಸ್‌ (ಬಲ) ಮತ್ತು ಜೇಮ್ಸ್ ಗಾಲ್‌ (ಮಧ್ಯ) ಅವರಿಂದ ಚೆಂಡನ್ನು ಕಸಿದುಕೊಳ್ಳಲು ಅರ್ಜೆಂಟೀನಾದ ಪೆಡ್ರೊ ಇಬಾರ ಪ್ರಯತ್ನಿಸಿದರು  –ಪಿಟಿಐ ಚಿತ್ರ
ಇಂಗ್ಲೆಂಡ್‌ನ ಡೇವಿಡ್ ಏಮ್ಸ್‌ (ಬಲ) ಮತ್ತು ಜೇಮ್ಸ್ ಗಾಲ್‌ (ಮಧ್ಯ) ಅವರಿಂದ ಚೆಂಡನ್ನು ಕಸಿದುಕೊಳ್ಳಲು ಅರ್ಜೆಂಟೀನಾದ ಪೆಡ್ರೊ ಇಬಾರ ಪ್ರಯತ್ನಿಸಿದರು  –ಪಿಟಿಐ ಚಿತ್ರ   

ಭುವನೇಶ್ವರ: ಪ್ರಬಲ ಪೈಪೋಟಿ ಕಂಡುಬಂದ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ ಒಲಿಂಪಿಕ್ ಚಾಂಪಿಯನ್‌ ಅರ್ಜೇಂಟೀನಾಗೆ ಆಘಾತ ನೀಡಿತು. ಕಳಿಂಗ ಕ್ರೀಡಾಂಗಣದಲ್ಲಿ ಬುಧವಾರ ನಡೆದ ವಿಶ್ವಕಪ್ ಹಾಕಿ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್‌ 3–2ರಿಂದ ಗೆದ್ದಿತು.

ಮೊದಲ ಕ್ವಾರ್ಟರ್‌ನಲ್ಲಿ ಸಮಬಲದಿಂದ ಕಾದಾಡಿದ ಇಂಗ್ಲೆಂಡ್‌ ಎರಡನೇ ಕ್ವಾರ್ಟರ್‌ನ ಆರಂಭದಲ್ಲೇ ಗೋಲು ಬಿಟ್ಟುಕೊಟ್ಟಿತು. 17ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೊನ್ಜಾಲೊ ಪಿಲೆಟ್ ಚೆಂಡನ್ನು ಗುರಿ ಮುಟ್ಟಿಸಿ ಅರ್ಜೆಂಟೀನಾ ತಂಡದಲ್ಲಿ ಸಂತಸದ ಹೊನಲು ಹರಿಸಿದರು.

ಆದರೆ ಮೊದಲಾರ್ಧದ ಅಂತ್ಯಕ್ಕೆ ಮೂರು ನಿಮಿಷಗಳು ಬಾಕಿ ಇದ್ದಾಗ ಬಾರಿ ಮಿಡಲ್‌ಟನ್ ಗಳಿಸಿದ ಗೋಲಿನ ಮೂಲಕ ಇಂಗ್ಲೆಂಡ್ ತಿರುಗೇಟು ನೀಡಿತು. ಮೂರನೇ ಕ್ವಾರ್ಟರ್‌ನ ಕೊನೆಯ ನಿಮಿಷದಲ್ಲಿ ವಿಲ್ ಕಲ್ನನ್‌ ಗೋಲು ಗಳಿಸಿ ಇಂಗ್ಲೆಂಡ್‌ಗೆ ಮುನ್ನಡೆ ತಂದುಕೊಟ್ಟರು. 48ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಬಿಟ್ಟುಕೊಟ್ಟ ಇಂಗ್ಲೆಂಡ್ ನಿರಾಸೆಗೆ ಒಳಗಾಯಿತು. ಗೊನ್ಜಾಲೊ ಪಿಲೆಟ್ ಈ ಅವಕಾಶವನ್ನು ಕೂಡ ಸದುಪಯೋಗಪಡಿಸಿಕೊಂಡರು.

ADVERTISEMENT

ಆದರೆ ಮರು ನಿಮಿಷದಲ್ಲೇ ಹ್ಯಾರಿ ಮಾರ್ಟಿನ್‌ ಗೋಲು ಗಳಿಸಿ ಇಂಗ್ಲೆಂಡ್‌ಗೆ ಮಹತ್ವದ ಮುನ್ನಡೆ ಗಳಿಸಿಕೊಟ್ಟರು. ಕೊನೆಯ 10 ನಿಮಿಷಗಳು ಜಿದ್ದಾಜಿದ್ದಿನ ಪೈಪೋಟಿಗೆ ಸಾಕ್ಷಿಯಾದವು. ಛಲ ಬಿಡದರೆ ಹೋರಾಡಿದ ಇಂಗ್ಲೆಂಡ್‌ ಎದುರಾಳಿಗಳಿಗೆ ಗೋಲು ಬಿಟ್ಟುಕೊಡದೆ ಗೆಲುವು ತನ್ನದಾಗಿಸಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.