ADVERTISEMENT

ಅಥ್ಲೆಟಿಕ್ಸ್‌ನಲ್ಲಿ ಪರಿಸರ ರಕ್ಷಣೆ ಚಿಂತನೆ

ವಿಕ್ರಂ ಕಾಂತಿಕೆರೆ
Published 12 ಏಪ್ರಿಲ್ 2020, 20:00 IST
Last Updated 12 ಏಪ್ರಿಲ್ 2020, 20:00 IST
ಬೆಂಗಳೂರು ನಗರ ಮಧ್ಯದ ಕಂಠೀರವ ಕ್ರೀಡಾಂಗಣ. ವರ್ಲ್ಡ್ ಅಥ್ಲೆಟಿಕ್ಸ್‌ನ ಪರಿಸರಸ್ನೇಹಿ ಯೋಜನೆಗಳನ್ನು ಇಲ್ಲೂ ಜಾರಿಗೆ ತರುವ ಕಾರ್ಯಕ್ರಮಗಳನ್ನು ಆಯೋಜಿಸುವುದು ಮುಂದಿನ ದಿನಗಳಲ್ಲಿ ಅನಿವಾರ್ಯ ಆಗಲಿದೆ -ಪ್ರಜಾವಾಣಿ ಚಿತ್ರ/ಅನೂಪ್ ರಾಘ್ ಟಿ
ಬೆಂಗಳೂರು ನಗರ ಮಧ್ಯದ ಕಂಠೀರವ ಕ್ರೀಡಾಂಗಣ. ವರ್ಲ್ಡ್ ಅಥ್ಲೆಟಿಕ್ಸ್‌ನ ಪರಿಸರಸ್ನೇಹಿ ಯೋಜನೆಗಳನ್ನು ಇಲ್ಲೂ ಜಾರಿಗೆ ತರುವ ಕಾರ್ಯಕ್ರಮಗಳನ್ನು ಆಯೋಜಿಸುವುದು ಮುಂದಿನ ದಿನಗಳಲ್ಲಿ ಅನಿವಾರ್ಯ ಆಗಲಿದೆ -ಪ್ರಜಾವಾಣಿ ಚಿತ್ರ/ಅನೂಪ್ ರಾಘ್ ಟಿ   

ವಿಶ್ವದ ಅಥ್ಲೆಟಿಕ್ಸ್‌ನ ಆಡಳಿತ ಸಂಸ್ಥೆಯಾದ ವರ್ಲ್ಡ್ ಅಥ್ಲೆಟಿಕ್ಸ್ (ಹಿಂದಿನ ಅಂತರರಾಷ್ಟ್ರೀಯ ಅಥ್ಲೆಟಿಕ್ಸ್ ಫೆಡರೇಷನ್) ಕ್ರೀಡೆಯ ಮೂಲಕ ಉಂಟಾಗುವ ಪರಿಸರ ಮಾಲಿನ್ಯ ತಡೆಗಟ್ಟಲು ಮತ್ತು ಹಸಿರುಮನೆಯನ್ನು ಸುಸ್ಥಿರವಾಗಿ ಇರಿಸಲು ಒಂದು ದಶಕದ ಯೋಜನೆ ಹಮ್ಮಿಕೊಂಡಿದೆ. ಕ್ರೀಡಾಚಟುವಟಿಕೆಗಳಿಂದ ಹೊರಸೂಸುವ ಇಂಗಾಲದ ಪ್ರಮಾಣವನ್ನು ಪ್ರತಿ ವರ್ಷ 10 ಶೇಕಡಾ ಕಡಿಮೆಗೊಳಿಸುವುದು ಯೋಜನೆಯ ಪ್ರಮುಖ ಅಂಶ.

ಕೊರೊನಾ ವೈರಾಣುವಿನ ಮೂಲಕ ದಾಳಿಯಿಟ್ಟ ಕೋವಿಡ್ ಸೋಂಕು ವಿಶ್ವವನ್ನೇ ಥರಗುಟ್ಟುವಂತೆ ಮಾಡಿರುವ ಸಂದರ್ಭದಲ್ಲಿ ಎಲ್ಲ ಕಡೆ ಚರ್ಚೆಯಾಗುತ್ತಿರುವ ಪ್ರಮುಖ ವಿಷಯ ಪ್ರಕೃತಿ-ಪರಿಸರ ಮತ್ತು ಮನುಷ್ಯನ ನಡುವಿನ ಸಂಬಂಧ. ಪರಿಸರದ ಮೇಲೆ ಮನುಷ್ಯಕುಲ ಮಾಡಿದ ಅತ್ಯಾಚಾರಕ್ಕೆ ತಿರುಗೇಟು ಅಥವಾ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂಬ ವಾದ ಈಗ ಎಲ್ಲ ಕಡೆ ವಿಜೃಂಭಿಸುತ್ತಿದೆ. ಇಂಥ ಚರ್ಚೆ ನಡೆಯುತ್ತಿರುವಾಗಲೇ ಏಪ್ರಿಲ್ ಏಳರಂದು ಮೊನಾಕೊದಿಂದ ಮಹತ್ತರ ಘೋಷಣೆ ಹೊರಬಿದ್ದಿತ್ತು. ಅಥ್ಲೆಟಿಕ್ಸ್‌ನಿಂದ ಉಂಟಾಗುವ ಪರಿಸರ ಮಾಲಿನ್ಯ ತಡೆಗಟ್ಟಲು ಅಥವಾ ಹಸಿರುಮನೆಯನ್ನು ಸುಸ್ಥಿರವಾಗಿ ಇರಿಸಲು ಹಾಕಿಕೊಂಡಿರುವ ಒಂದು ದಶಕದ ಯೋಜನೆಗಳಿಗೆ ಸಂಬಂಧಿಸಿದ ಘೋಷಣೆಯಾಗಿತ್ತು ಅದು.

ಅಥ್ಲೆಟಿಕ್ಸ್ ಮತ್ತು ಅಥ್ಲೀಟ್‌ಗಳ ಉಳಿವಿನ ಜೊತೆಯಲ್ಲಿ ಪರಿಸರ ಹಾಗೂ ಆ ಮೂಲಕ ವಿಶ್ವವನ್ನು ಕಾಪಾಡುವ ಗುರಿಯೊಂದಿಗೆ ಹಮ್ಮಿಕೊಂಡಿರುವ ಈ ಯೋಜನೆಯ ಭಾಗವಾಗಿ ಸದಸ್ಯ ಸಂಸ್ಥೆಗಳಿಗೂ ಮಾರ್ಗದರ್ಶಿ ಸೂತ್ರಗಳನ್ನು ವರ್ಲ್ಡ್ ಅಥ್ಲೆಟಿಕ್ಸ್ ರವಾನಿಸಿದೆ. ಅಥ್ಲೆಟಿಕ್ಸ್ ಚಟುವಟಿಕೆಗಳಿಂದ ಹೊರಸೂಸಲು ಸಾಧ್ಯತೆ ಇರುವ ಇಂಗಾಲದ ಪ್ರಮಾಣವನ್ನು ಪ್ರತಿವರ್ಷ ಶೇಕಡಾ 10ರಷ್ಟು ಕಡಿಮೆ ಮಾಡುವುದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಯೋಜನೆಯ ಪ್ರಮುಖ ಅಂಶವಾಗಿದ್ದು ಇದಕ್ಕೆ ಅಥ್ಲೀಟ್‌ಗಳೂ ಬದ್ಧರಾಗಬೇಕಾಗಿದೆ.

ADVERTISEMENT

214 ಸದಸ್ಯ ಸಂಸ್ಥೆಗಳಿರುವ ವರ್ಲ್ಡ್ ಅಥ್ಲೆಟಿಕ್ಸ್‌ನ ಕೇಂದ್ರ ಕಚೇರಿ ಇರುವುದು ಮೊನಾಕೊದಲ್ಲಿ. ಅಲ್ಲಿ ಎಲ್ಲ ಚಟುವಟಿಕೆಗೂ ನವೀಕರಿಸಬಲ್ಲ ಇಂಧನವನ್ನು ಬಳಸಲು ನಿರ್ಧರಿಸಲಾಗಿದೆ. ಸದಸ್ಯ ಸಂಸ್ಥೆಗಳು ಪ್ರಯಾಣಕ್ಕೆ ಬಳಸುವ ಮೂಲಗಳು ಸೇರಿದಂತೆ ಎಲ್ಲ ವಿಷಯಗಳಲ್ಲೂ ಸ್ವಯಂ ನಿರ್ಬಂಧ ಹೇರಲು ಸೂಚಿಸಲಾಗಿದೆ.

ಪ್ರಮುಖ ಆರು ಅಂಶಗಳು

* ಸುಸ್ಥಿರತೆ ಮತ್ತು ನಾಯಕತ್ವ: ವಿಶ್ವ ಅಥ್ಲೆಟಿಕ್ಸ್ ಸೀರಿಸ್ ಆಯೋಜಕರು ಮತ್ತು ಸದಸ್ಯ ಸಂಸ್ಥೆಗಳು ಅತ್ಯುತ್ತಮ ಪರಿಸರ ಪ್ರೇಮಿ ಮಾರ್ಗ ಅನುಸರಿಸುವುದು, ಕ್ರೀಡಾ ಚಟುವಟಿಕೆಗೆ ಅನುಮತಿ ನೀಡುವಾಗ ಎಚ್ಚರಿಕೆ ನೀಡುವುದು, ಪ್ರಾಯೋಜಕರೊಂದಿಗೆ ಸುಸ್ಥಿರ ಮಾರ್ಗಗಳಿಗೆ ಸಂಬಂಧಿಸಿ ಒಪ್ಪಂದ ಮಾಡುವುದು.

* ಉಪಕರಣಗಳ ತಯಾರಿ, ಬಳಕೆಯಲ್ಲಿ ಸುಸ್ಥಿರತೆ: ಸಮಗ್ರ ತ್ಯಾಜ್ಯ ನಿರ್ವಹಣೆ, ಮರುಬಳಕೆ ವಸ್ತುಗಳಿಗೆ ಆದ್ಯತೆ ಮತ್ತು ತ್ಯಾಜ್ಯ ಪ್ರಮಾಣ ಕಡಿಮೆ ಮಾಡುವುದು.

* ಹವಾಮಾನ ಬದಲಾವಣೆ, ಇಂಗಾಲದ ನಿರ್ವಹಣೆ: 2030ರ ವೇಳೆ ಇಂಗಾಲದ ಪ್ರಮಾಣವನ್ನು ಸಾಧ್ಯವಾದಷ್ಟೂ ಕಡಿಮೆ ಮಾಡುವ ಯೋಜನೆಗಳ ಅನುಷ್ಠಾನ, ವಾಹನಗಳ ಬಳಕೆ ನಿಯಂತ್ರಿಸಲು ಪ್ರಯಾಣವನ್ನು ಕನಿಷ್ಠ ಮಟ್ಟಕ್ಕೆ ಇಳಿಸುವುದು, ಎಲ್ಲ ಕಾರ್ಯಕ್ರಮಗಳನ್ನು ಇಂಗಾಲದ ಪ್ರಮಾಣ ಕಡಿಮೆ ಮಾಡಲು ಕ್ರಮ.

* ಸ್ಥಳೀಯ ಪರಿಸರ ಮತ್ತು ವಾಯು ಗುಣಮಟ್ಟ ನಿರ್ವಹಣೆ: ಕ್ರೀಡಾ ಚಟುವಟಿಕೆ ನಡೆಯುವ ಆವರಣಗಳನ್ನು ಕನಿಷ್ಠ ವಾಯುಮಾಲಿನ್ಯ ಪ್ರದೇಶವಾಗಿಸುವುದು.

* ಜಾಗತಿಕ ಸಮಾನತೆ: ಅಥ್ಲೀಟ್ಸ್, ಕೋಚ್‌ಗಳು, ತಾಂತ್ರಿಕ ಅಧಿಕಾರಿಗಳು ಮತ್ತು ಆಡಳಿತಗಾರರಿಗೆ ವಿಶ್ವದ ಎಲ್ಲ ಭಾಗಗಳಲ್ಲೂ ಸಮಾನ ಅವಕಾಶಗಳನ್ನು ಸೃಷ್ಟಿಸುವುದು.

* ವೈವಿಧ್ಯತೆ, ಆರೋಗ್ಯಕರ ಜೀವನ: ಅಂತರರಾಷ್ಟ್ರೀಯ ಕೂಟಗಳಲ್ಲಿ ಪಾಲ್ಗೊಳ್ಳುವ ಪ್ರತಿ ಅಥ್ಲೀಟ್‌ನ ತಪಾಸಣೆ ಮಾಡಿ ಉತ್ತಮ ಆರೋಗ್ಯವನ್ನು ದೃಢಪಡಿಸುವುದು, ಪ್ರತಿಯೊಬ್ಬ ಅಥ್ಲೀಟ್‌ಗೂ ಪ್ರಾದೇಶಿಕ ಕೇಂದ್ರ ಸ್ಥಾನದಲ್ಲೇ ಎಲ್ಲ ಸೌಲಭ್ಯಗಳು ಸಿಗುವಂತೆ ಮಾಡುವುದು, ಸಿಬ್ಬಂದಿಯ ಕೆಲಸದ ಒತ್ತಡವನ್ನು ಸಮನಾಗಿ ಹಂಚುವುದು.

ಕಾರ್ಯಯೋಜನೆಯ ಭಾಗಿದಾರರು

ಅಂತರರಾಷ್ಟ್ರೀಯ ಮಟ್ಟ: ಯುಎನ್ ಪರಿಸರ, ಸ್ವಚ್ಛ ಗಾಳಿ ಮತ್ತು ಶುದ್ಧ ಸಮುದ್ರ; ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ; ಯುಎನ್ ಜಾಗತಿಕಸುಸ್ಥಿರ ಅಭಿವೃದ್ಧಿ ಗುರಿ ಯೋಜನೆ; ಯುಎನ್ ಹವಾಮಾನ ಬದಲಾವಣೆ ಯೋಜನೆ; ಹವಾಮಾನ ಕಾರ್ಯಯೋಜನೆಗೆ ಕ್ರೀಡೆ ಕಾರ್ಯಕ್ರಮ.

ರಾಷ್ಟ್ರೀಯ ಮಟ್ಟ: ಸದಸ್ಯ ಸಂಸ್ಥೆಗಳು; ಅನುಮೋದನೆಗೊಂಡ ಕ್ರೀಡಾಕೂಟಗಳು; ಆತಿಥ್ಯ ವಹಿಸುವ ನಗರಗಳು; ಕೂಟಗಳು ನಡೆಯುವ ಸ್ಥಳಗಳು; ಸಾಮಗ್ರಿ ಸರಬರಾಜು ಮಾಡುವವರು.

ವೈಯಕ್ತಿಕ: ರೆಫರಿಗಳು ಮತ್ತು ತಾಂತ್ರಿಕ ಅಧಿಕಾರಿಗಳು; ಕ್ರೀಡಾ ಅಭಿಮಾನಿಗಳು; ಅಥ್ಲೀಟ್ ಗಳು; ಸ್ಥಳೀಯ ಆಯೋಜಕ ಸಮಿತಿಗಳು; ಪ್ರಾಯೋಜಕರು ಮತ್ತು ಸಹಯೋಗ ನೀಡುವವರು.

ವರ್ಲ್ಡ್ ಅಥ್ಲೆಟಿಕ್ಸ್: ವಿಶ್ವ ಅಥ್ಲೆಟಿಕ್ಸ್ ಸೀರಿಸ್ ಗಳು; ಮಾಧ್ಯಮ ಅಭಿವೃದ್ಧಿ ಯೋಜನೆಗಳು; ಸದಸ್ಯ ಸಂಸ್ಥೆಗಳ ಅಭಿವೃದ್ಧಿ ಯೋಜನೆಗಳು; ತರಬೇತಿ ಕಾರ್ಯಕ್ರಮಗಳು.

ಉತ್ತಮ ಪರಿಸರ ಸೃಷ್ಟಿ ಅಗತ್ಯವಿದೆಮುಂದಿನ ಪೀಳಿಗೆ ಉತ್ತಮ ಬದುಕು ಕಟ್ಟಿಕೊಳ್ಳಬೇಕಾದರೆ ಮಾಲಿನ್ಯರಹಿತ ಉತ್ತಮ ಪರಿಸರವನ್ನು ಸೃಷ್ಟಿಸಬೇಕಾದ ಅಗತ್ಯವಿದೆ. ಕ್ರೀಡೆಯಲ್ಲಿ ಪಾಲ್ಗೊಂಡಿರುವವರು ಉತ್ತಮ ನಾಗರಿಕರಾಗಬೇಕಾದರೆ ಉತ್ತಮ ಆಡಳಿತ ನೀಡಿದರೆ ಮಾತ್ರ ಸಾಲದು ಎಂಬ ಅರಿವು ಇರುವುದರಿಂದ ಇಂಥ ವಿಶಿಷ್ಟ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದೇವೆ ಎಂದುವರ್ಲ್ಡ್ ಅಥ್ಲೆಟಿಕ್ಸ್ ಅಧ್ಯಕ್ಷಸೆಬಾಸ್ಟಿಯನ್ ಕೋ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.